ಕುಸ್ತಿಪಟುಗಳು ನಡೆಸುತ್ತಿರುವ ಹೋರಾಟ-ಹಿಜಾಬ್ ಹೋರಾಟದ ಪರ ನಿಂತ ನಟ ಕಿಶೋರ್; ಈ ಬಗ್ಗೆ ಏನು ಹೇಳಿದ್ದಾರೆ ನೋಡಿ...
ಬೆಂಗಳೂರು: ದೆಹಲಿಯಲ್ಲಿ ಕುಸ್ತಿಪಟುಗಳು ನಡೆಸುತ್ತಿರುವ ಹೋರಾಟ ಹಾಗು ಹಿಜಾಬ್ ಹೋರಾಟದ ಪರ ಕನ್ನಡ ಚಿತ್ರರಂಗದ ಖ್ಯಾತ ನಟ ಕಿಶೋರ್ ಮಾತನಾಡಿದ್ದು, ಇದೆಲ್ಲ ಮನುವಾದಿಗಳ ಕುತಂತ್ರ ಎಂದು ಬಣ್ಣಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಂಡ ಬರಹ ಇಲ್ಲಿದೆ....
ಯಾವ ಮುಸಲ್ಮಾನ ಮಹಿಳೆ, ಪುರುಷ ಪ್ರಾಭಲ್ಯದ ಸಂಕೇತವಾದ ಹಿಜಾಬನ್ನು ವಿರೋಧಿಸಿಯೂ ವಿರೋಧಿಸದಂತೆ ಮೆಲ್ಲ ಮೆಲ್ಲನೆ ಅದರಿಂದ ಸ್ವತಂತ್ರಳಾಗಿ, ಶಿಕ್ಷಿತಳೂ, ಸಶಕ್ತಳೂ ಆಗುತ್ತಿದ್ದಳೊ ಅವಳನ್ನು ಅಡ್ಡಗಟ್ಟಿ ಅವಳಲ್ಲಿ ಭಯ ಹುಟ್ಟಿಸಿ, ಆಕೆ ತನ್ನ ಆತ್ಮರಕ್ಷಣೆಗಾಗಿ ತನ್ನ ಅಸ್ಮಿತೆಯ ಹುಡುಕಾಟದಲ್ಲಿ ತನ್ನನ್ನು ಬಂಧನದಲ್ಲಿಟ್ಟಿದ್ದ ಅದೇ ಹಿಜಾಬಿನ ಮೊರೆ ಹೋಗುವ ಹಾಗೆ ಮಾಡಿದ ಮನುವಾದಿಗಳ ಹಿಜಾಬು ಬ್ಯಾನ್ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಉರುಳಿಸಿತ್ತು.
ಒಂದು ಹೆಣ್ಣು ಶಿಕ್ಷಣ ಪಡೆದರೆ ಅವಳ ಮುಂದಿನ ಇಡೀ ಪೀಳಿಗೆ ಶಿಕ್ಷಣ ಪಡೆಯುತ್ತದೆ. ಸರಕಾರಿ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಇಂದೂ ಸಹ ನೂರರಲ್ಲಿ ಹದಿನಾಲ್ಕು ಮುಸ್ಲಿಂ ಹೆಣ್ಣು ಮಕ್ಕಳು ಮಾತ್ರ ಕಾಲೇಜು ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಇಂಥಾ ಕಾಲದಲ್ಲಿ ಅದನ್ನೂ ತಡೆದು ಬಿಟ್ಟರೆ ಮುಸಲ್ಮಾನರನ್ನು ಮುಖ್ಯವಾಹಿನಿಯಿಂದ ಹೊರಗಿಡುವ ಷಡ್ಯಂತ್ರ ಯಶಸ್ವಿಯಾದಂತೆಯೇ ಸರಿ.
ತನ್ನ ಮನೆ, ಸಂಬಂಧಿಕರು, ಮತ, ಸಂಪ್ರದಾಯವಾದ ಎಲ್ಲವನ್ನೂ ದಾಟಿ ಬಂದು ಕೊನೆಯ ಹಂತದಲ್ಲಿ ಶಿಕ್ಷಣ ವಂಚಿತಳಾಗುವುದಕ್ಕೆ ಕಾರಣ ಕೂಡ ಸ್ವಯಂ ಅವಳೇ ಆಗಿಬಿಟ್ಟರೆ? ದೇಶದ ಮುಖ್ಯವಾಹಿನಿಯಿಂದ ಮುಸ್ಲಿಂ ಮಹಿಳೆ ಮತ್ತು ಜನಾಂಗ ಎರಡೂ ಹೊರಗೆ, ಅದೂ ತನ್ನ ಕಾಲ ಮೇಲೆ ತಾನೇ ಕೊಡಲಿ ಹಾಕಿಕೊಂಡು. ಇದಲ್ಲವೇ ಮಾಸ್ಟರ್ ಸ್ಟ್ರೊಕ್.
ಜಂತರ್ ಮಂತರ್ ನಲ್ಲಿ ಲೈಂಗಿಕ ದೌರ್ಜನದ ವಿರುದ್ಧ ಧರಣಿ ಕುಳಿತ ಹೆಣ್ಣುಮಕ್ಕಳು, ಅತ್ಯಾಚಾರಿಯ ಹೂಂಕಾರ, ಆಗಾಗ ಆ ಹೆಣ್ಣುಮಕ್ಕಳ ಮೇಲೇ ತನ್ನ ಶಕ್ತಿ ತೋರಿಸುವ ನರಸತ್ತ ಪೊಲೀಸ್, ಕಮಕ್ ಕಿಮಕ್ ಅನ್ನದೇ ಅತ್ಯಾಚಾರಿಗೆ ಪರೋಕ್ಷ ಬೆಂಬಲ ಕೊಟ್ಟು ಕುಳಿತ ಏಕವ್ಯಕ್ತಿ ಸರ್ಕಾರವಾದ ಪ್ರಧಾನಿ. ವಿಶ್ವಮಟ್ಟದ ತಾರೆಯರಿಗೇ ಹೀಗಾದರೆ ನಮ್ಮಂಥ ಸಾಮಾನ್ಯರಿಗಾದರೆ ಹೇಗೆ ಎಂಬ ಜನಸಾಮಾನ್ಯರ ಉದ್ಗಾರ. ಇಷ್ಟು ಸಾಲದೇ, ಶತಮಾನಗಳು ಹೋರಾಡಿ ವಿಶ್ವದ ಉತ್ತುಂಗಕ್ಕೇರಿದ ಹೆಣ್ಣು ಮಕ್ಕಳನ್ನು, ಅವರ ಬೆಂಗಾವಲಾಗಿ ನಿಂತ ದೇಶದ ತಾಯಿ ತಂದೆಯರೇ ಮತ್ತೆ ಮನುವಿನ ಕಲ್ಪನೆಯ ನಾಲ್ಕು ಗೋಡೆಗಳ ಕೂಪಕ್ಕೆ ತಳ್ಳಲು. ಭಾರತಾಂಬೆ ಅಂದು ಹಿಜಾಬಿನಲ್ಲಿ ಇಂದು ಜಂತರ್ ಮಂತರ್ ಅಖಾಡದಲ್ಲಿ ಮನುವಾದಿಗಳಿಗೆ ಸವಾಲೆಸೆಯುತ್ತಲೇ ಬಂದಿದ್ದಾಳೆ.
ಜೈ ಭಾರತಾಂಬೆ