ರಾಜ್ಯದಲ್ಲಿ ಶಾಂತಿ ಕದಡಿದರೆ ಬಜರಂಗದಳ, ಆರ್‌ಎಸ್‌ಎಸ್‌ನಂತಹ ಸಂಘಟನೆಗಳನ್ನು ನಿಷೇಧಿಸುತ್ತೇವೆ; ಬಿಜೆಪಿ ನಾಯಕರಿಗೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗದಿದ್ದರೆ ಪಾಕಿಸ್ತಾನಕ್ಕೆ ಹೋಗಲಿ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ರಾಜ್ಯದಲ್ಲಿ ಶಾಂತಿ ಕದಡಿದರೆ ಬಜರಂಗದಳ ಮತ್ತು ಆರ್‌ಎಸ್‌ಎಸ್‌ನಂತಹ ಸಂಘಟನೆಗಳನ್ನು ಕಾಂಗ್ರೆಸ್ ಸರ್ಕಾರ ನಿಷೇಧಿಸುತ್ತದೆ ಎಂದು ಖಡಕ್ ಎಚ್ಚರಿಕೆಯ ನೀಡಿರಿಯುವ ಸಚಿವ ಪ್ರಿಯಾಂಕ್ ಖರ್ಗೆ, ಒಂದು ವೇಳೆ ಬಿಜೆಪಿ ನಾಯಕರಿಗೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗದಿದ್ದರೆ ಪಾಕಿಸ್ತಾನಕ್ಕೆ ಹೋಗಬಹುದು ಎಂದು ಸಲಹೆ ನೀಡಿದ್ದಾರೆ.
ನಾವು ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡುತ್ತೇವೆ ಎಂದು ಭರವಸೆ ನೀಡಿದ್ದೇವೆ, ಒಂದು ವೇಳೆ ಶಾಂತಿ ಕದಡಿದರೆ ಅದು ಬಜರಂಗದಳ ಅಥವಾ ಆರ್‌ಎಸ್‌ಎಸ್ ಎಂಬುದನ್ನು ನಾವು ಪರಿಗಣಿಸುವುದಿಲ್ಲ.
ಕಾನೂನನ್ನು ಕೈಗೆ ತೆಗೆದುಕೊಂಡರೆ ನಿಷೇಧ ಕಟ್ಟಿಟ್ಟ ಬುತ್ತಿ. ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಬಜರಂಗದಳ, ಆರ್‌ಎಸ್‌ಎಸ್ ಸೇರಿದಂತೆ ಯಾವುದೇ ಸಂಘಟನೆಯನ್ನು ನಿಷೇಧಿಸಲು ಹಿಂದೆ ಮುಂದೆ ಯೋಚಿಸುವುದಿಲ್ಲ ಎಂದಿದ್ದಾರೆ.
ಹಿಜಾಬ್, ಹಲಾಲ್ ಕಟ್ ಮತ್ತು ಗೋಹತ್ಯೆ ಕಾನೂನುಗಳ ಮೇಲಿನ ನಿಷೇಧವನ್ನು ಸರ್ಕಾರ ಹಿಂಪಡೆಯಲಿದೆ ಎಂದ ಅವರು, ಸಮಾಜದಲ್ಲಿ ಕಾನೂನು ಮತ್ತು ಪೊಲೀಸರ ಭಯವಿಲ್ಲದೆ ಕೆಲವು ಅಂಶಗಳು ಮುಕ್ತವಾಗಿ ವಿಹರಿಸುತ್ತಿವೆ. ಕಳೆದ 3 ವರ್ಷಗಳಿಂದ ಈ ಪ್ರವೃತ್ತಿ ನಡೆಯುತ್ತಿದೆ ಎಂದು ದೂರಿದರು.
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜನರು ಅವರನ್ನು ವಿರೋಧ ಪಕ್ಷದಲ್ಲಿ ಕೂರಿಸಲು ಕಾರಣವೇನು ಎಂಬುದನ್ನು ಬಿಜೆಪಿ ಅರ್ಥ ಮಾಡಿಕೊಳ್ಳಬೇಕು. ಕೇಸರಿಕರಣ ತಪ್ಪು ಎಂದು ಹೇಳಿದ್ದೇವೆ, ಎಲ್ಲರೂ ಅನುಸರಿಸಬಹುದಾದ ಬಸವಣ್ಣನವರ ತತ್ವಗಳನ್ನು ಕಾಂಗ್ರೆಸ್ ಅನುಸರಿಸುತ್ತದೆ ಎಂದು ಮಾಹಿತಿ ನೀಡಿದರು.