
ನಿಮ್ಮದು ಯಾವ ಹಿಂದುತ್ವ ಎಂದು ಬಹಿರಂಗಪಡಿಸಿ: ಬಿಜೆಪಿ ನಾಯಕರಿಗೆ ಸವಾಲು ಹಾಕಿದ ಕಾಂಗ್ರೆಸಿನ ಶುಭದ ರಾವ್
ಕಾರ್ಕಳ: ಹಿಂದುತ್ವ ಹೆಸರನ್ನು ಹೇಳಿಕೊಂಡು ಅಧಿಕಾರ ಪಡೆಯುತ್ತಿದ್ದ ಬಿಜೆಪಿಯು, ಈ ಬಾರಿ ಹಿಂದುತ್ವದ ಹೆಸರಿನಲ್ಲಿ ಗೊಂದಲದ ಹೇಳಿಕೆಯನ್ನು ನೀಡುತ್ತಿದೆ. ಕಾರ್ಕಳ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಮಹೇಶ್ ಶೆಟ್ಟಿ ಕುಡುಪುಲಾಜೆ ಅವರು ನೀಡಿದ ಹೇಳಿಕೆ ಅತ್ಯಂತ ಹಾಸ್ಯಾಸ್ಪದವಾಗಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಶುಭದ ರಾವ್ ಲೇವಡಿ ಮಾಡಿದ್ದಾರೆ.
ನಮ್ಮ ಹಿಂದುತ್ವ ಕಲ್ಲಡ್ಕ ಪ್ರಭಾಕರ ಭಟ್ ಅವರ ಹಿಂದುತ್ವ ಅಲ್ಲ. ನಮ್ಮದೇನಿದ್ದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಶಾಸಕ ವಿ.ಸುನಿಲ್ ಕುಮಾರ್ ಅವರ ಹಿಂದುತ್ವ ಎಂದು ಸುದ್ದಿಗೋಷ್ಠಿಯಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಹಾಗಾದರೆ ಹಿಂದುತ್ವದಲ್ಲಿ ಎಷ್ಟು ವಿಧ ? ಬಿಜೆಪಿ ನಾಯಕರು ಮೈಗೂಡಿಸಿಕೊಂಡಿರುವ ಹಿಂದುತ್ವಕ್ಕೆ ಯರ‍್ಯಾರು ಗುರುಗಳಿದ್ದಾರೆ? ಯಾವ ರೀತಿಯ ಹಿಂದುತ್ವ ಅವರದ್ದಾಗಿದೆ ಎನ್ನುವುದನ್ನು ಜನರ ಮುಂದಿಡಬೇಕು ಎಂದು ಎಂದು ಶುಭದ ರಾವ್ ಒತ್ತಾಯಿಸಿದ್ದಾರೆ.
ಬಿಜೆಪಿಗೆ ಲಾಭವಾಗುವ ರೀತಿಯಲ್ಲಿ ನಡೆದುಕೊಂಡರೆ ಆತ ಕಟ್ಟರ್ ಹಿಂದುತ್ವವಾದಿಯಾಗುತ್ತಾನೆ. ಅದೇ ಪಕ್ಷದಿಂದ ಹೊರ ಬಂದಾತ ನಕಲಿ ಹಿಂದುತ್ವ ಹೊಂದಿರುತ್ತಾನೆ ಎನ್ನುವ ಅರ್ಥದಲ್ಲಿ ಬಿಜೆಪಿ ನಾಯಕರುಗಳು ಇತ್ತೀಚೆಗೆ ನೀಡುತ್ತಿರುವ ಹೇಳಿಕೆಗಳು ದಿಗ್ಬ್ರಮೆಯನ್ನುಂಟು ಮಾಡುತ್ತಿದೆ.
ಕೇವಲ ಮತ ಭೇಟೆಗಾಗಿ ಹಿಂದುತ್ವದ ಜಪ ಎನ್ನುವುದು ಈ ಬಾರಿ ತಿಳಿಯುತ್ತಿದೆ. ಧರ್ಮ-ಧರ್ಮಗಳ ನಡುವೆ ದ್ವೇಷ ಹಚ್ಚಿ ಚುನಾವಣೆ ಗೆಲ್ಲುತ್ತಿದ್ದವರು, ಈ ಬಾರಿ ಹಿಂದುತ್ವದಲ್ಲಿಯೇ ವ್ಯತ್ಯಾಸ ಹುಡುಕಲು ಆರಂಭಿಸಿದ್ದಾರೆ ಎಂದರೆ, ಅವರವರೊಳಗೆಯೇ ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ಅವರೊಳಗೆ ಆರಂಭವಾಗಿದೆ ಎಂದು ಅರ್ಥವಲ್ಲವೇ ? ಈ ಹೇಳಿಕೆಯ ಹಿಂದಿರುವ ವಾಸ್ತವಾಂಶವನ್ನು ಹೇಳಿಕೆ ನೀಡಿದವರೇ ಬಹೀರಂಗಪಡಿಸಬೇಕು.
ಕಲ್ಲಡ್ಕ ಪ್ರಭಾಕರ ಭಟ್ ಅವರ ಹಿಂದುತ್ವವನ್ನು ತಾನು ವಿರೋಧಿಸುತ್ತೇನೆ ಎಂದಿರುವ ಶುಭದ ರಾವ್, ಹಿಂದು ನಾಯಕರೆಲ್ಲರನ್ನು ಹಿಂದುತ್ವವಾದಿಗಳು ಎನ್ನುವುದನ್ನು ಅವರು ಒಪ್ಪುವುದಿಲ್ಲ ಎನ್ನುವುದು ಸ್ಪಷ್ಟ. ಹಾಗಾಗಿ ಕಲ್ಕಡ್ಕ ಅವರ ಹೇಳಿಕೆಗಳಿಗೆ ಬೆಲೆ ಕೊಡಬೇಕಾಗಿಲ್ಲ ಎನ್ನುವುದನ್ನು ಅವರು ಪರೋಕ್ಷವಾಗಿ ಹೇಳಿಕೊಂಡಂತಾಗಿದೆ ಎಂದು ಟೀಕಿಸಿದ್ದಾರೆ.