ನಾಳೆ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ; ಸಂಜೆಯೊಳಗೆ ಅಧಿಕೃತ ಘೋಷಣೆ; ಪ್ರಮಾಣ ವಚನಕ್ಕೆ ಭರದ ಸಿದ್ದತೆ
ನವದೆಹಲಿ: ಕರ್ನಾಟದಕದಲ್ಲಿ ಮುಂದಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದು, ಇನ್ನು ಸಂಜೆಯೊಳಗೆ ಅವರ ಹೆಸರು ಅಧಿಕೃತವಾಗಿ ಘೋಷಣೆಯಾಗಲಿದೆ.
ಮುಖ್ಯಮಂತ್ರಿ ಪ್ರಮಾಣ ವಚನಕ್ಕೆ ಭರದ ಸಿದ್ದತೆ ನಡೆದಿದೆ. ಪ್ರಮಾಣ ವಚನ ಕಾರ್ಯಕ್ರಮವನ್ನು ವಿಧಾನಸೌಧ ಮುಂಭಾಗ ಹಾಗೂ ಕಠೀರವ ಸ್ಟೇಡಿಯಂನಲ್ಲಿ ಆಯೋಜಿಸಲು ಚಿಂತನೆಗಳು ನಡೆದಿವೆ.
ಇದೀಗ ಸ್ವಲ್ಪ ಹೊತ್ತಿನ ಮುಚೆ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ರಾಹುಲ್ ಗಾಂಧಿ ನಿವಾಸಕ್ಕೆ ಆಗಮಿಸಿದ್ದು, ಅವರ ಜೊತೆ ಚರ್ಚೆ ಮಾಡಿ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ನಿವಾಸಕ್ಕೆ ತೆರಳಲಿದ್ದಾರೆ. ಅಲ್ಲಿ ಸಿದ್ದರಾಮಯ್ಯನರನ್ನು ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಮಾಡುವ ಸಾಧ್ಯತೆಯಿದೆ.
ಈ ಮಧ್ಯೆ ಹಿಮಾಚಲ ಪ್ರದೇಶ ಪ್ರವಾಸದಲ್ಲಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೂಡ ಇನ್ನು ಸ್ವಲ್ಪ ಹೊತ್ತಿನಲ್ಲಿಯೇ ದೆಹಲಿಗೆ ಆಗಮಿಸಲಿದ್ದಾರೆ. ಅಲ್ಲಿ ಸೋನಿಯಾ ಜೊತೆ ಅಂತಿಮ ಮಾತುಕತೆಯಾಗಿ ಸಿದ್ದರಾಮಯ್ಯ ಹೆಸರು ಘೋಷಣೆಯಾಗಲಿದೆ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ.
ನೂತನವಾಗಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರ ಹೆಸರನ್ನು ಘೋಷಿಸಿದ ನಂತರ ನಾಳೆ(ಗುರುವಾರ) ಅಪರಾಹ್ನ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಸಿಎಂ ಸ್ಥಾನಕ್ಕೆ ಪ್ರಬಲ ಪೈಪೋಟಿ ನೀಡಿದ್ದ ಡಿ ಕೆ ಶಿವಕುಮಾರ್ ಹೈಕಮಾಂಡ್ ಮನವೊಲಿಕೆ ನಂತರ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಒಪ್ಪಿಕೊಂಡಿದ್ದು ಅದರ ಜೊತೆಗೆ ಇನ್ನೆರಡು ಪ್ರಮುಖ ಖಾತೆಗಳಿಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷರಾಗಿಯೂ ಡಿಕೆಶಿ ಮುಂದುವರಿಯಲಿದ್ದಾರೆ. ಇಂದು ಅಪರಾಹ್ನ ಡಿ ಕೆ ಶಿವಕುಮಾರ್ ಸಹ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಲಿದ್ದಾರೆ.
ನಾಳೆ ಶಾಸಕರ ಸಭೆ: ಎಲ್ಲ 135 ಕಾಂಗ್ರೆಸ್ ಶಾಸಕರ ಸಭೆ ನಾಳೆ ಗುರುವಾರ ನಡೆಯುವ ನಿರೀಕ್ಷೆಯಿದೆ. ಅದರಲ್ಲಿ ಯಾರ್ಯಾರು ಸಚಿವರಾಗಲಿದ್ದಾರೆ, ಯಾರ್ಯಾರಿಗೆ ಯಾವ ಖಾತೆ ಹಂಚಿಕೆ ಎಂಬುದರ ಬಗ್ಗೆ ಚರ್ಚೆಯಾಗಿ ಮುಂದಿನ ವಾರವೇ ಸಚಿವ ಸಂಪುಟ ರಚನೆಯಾಗಲಿದೆ ಎಂಬ ಮಾಹಿತಿಗಳು ಸಹ ಲಭ್ಯವಾಗಿವೆ.
ಬೆಂಗಳೂರಿನಲ್ಲಿ ಸಂಭ್ರಮಾಚರಣೆ: ಕರ್ನಾಟಕದ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಕೆಲವೇ ಕ್ಷಣಗಳಲ್ಲಿ ಹೆಸರು ಘೋಷಣೆಯಾಗುತ್ತದೆಎಂದು ತಿಳಿದುಬರುತ್ತಿದ್ದಂತೆ ಅವರ ಅಭಿಮಾನಿಗಳು ಬೆಂಗಳೂರಿನಲ್ಲಿ ಮತ್ತು ರಾಜ್ಯಾದ್ಯಂತ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಬೆಂಗಳೂರಿನ ಕುಮಾರಕೃಪ ರಸ್ತೆಯಲ್ಲಿರುವ ಅವರ ಸರ್ಕಾರಿ ನಿವಾಸದಲ್ಲಿ ಖಾಕಿ ಭದ್ರತೆ ಹೆಚ್ಚಿಸಲಾಗಿದೆ.