ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಮಧ್ಯೆ ಸಿಎಂ ಗಾದಿಗಾಗಿ ಫೈಟ್: ಸಂಜೆಯೊಳಗೆ ಸಿಎಂ ಘೋಷಣೆ

ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಮಧ್ಯೆ ಸಿಎಂ ಗಾದಿಗಾಗಿ ಫೈಟ್: ಸಂಜೆಯೊಳಗೆ ಸಿಎಂ ಘೋಷಣೆ

ನವದೆಹಲಿ: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಗೊಂದಲದಲ್ಲಿಯೇ ಮುಳುಗಿದ್ದು, ಇಂದು ಸಂಜೆಯೊಳಗೆ ಮುಂದಿನ  ಮುಖ್ಯಮಂತ್ರಿ ಯಾರೆಂಬ ಬಗ್ಗೆ ಗೊಂದಲಕ್ಕೆ ತೆರೆ ಬೀಳಲಿದೆ.

ಸಿಎಂ ಆಯ್ಕೆ ಬಗ್ಗೆಗಿನ ಚೆಂಡು ಕಾಂಗ್ರೆಸ್ ಹೈಕಮಾಂಡ್ ಅನಗಳದಲ್ಲಿದ್ದರೂ, ಡಿ.ಕೆ.ಶಿವ ಕುಮಾರ್ ತನ್ನ ಪಟ್ಟನ್ನು ಸಡಿಲಿಸದಿರುವುದು ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿದೆ. 

ಸಿದ್ದರಾಮಯ್ಯರ ಪರವಾಗಿ ರಾಹುಲ್ ಗಾಂಧಿ ಸೇರಿದಂತೆ ಬಹುತೇಕ ನಾಯಕರು ಒಲವು ಹೊಂದಿದ್ದರೂ, ಡಿಕೆ ಶಿವಕುಮಾರ್ ಸಿಎಂ ರೇಸಿನಿಂದ ಕೆಳಗಿಳಿಯಲು ನಿರಾಕರಿಸಿರುವುದು ಸಿಎಂ ಘೋಷಣೆಗೆ ಮುಳುವಾಗಿ ಪರಿಣಮಿಸಿದೆ.

ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ನ ನಡುವೆ ಸಿಎಂ ಕುರ್ಚಿಗಾಗಿ ಹಗ್ಗಜಗ್ಗಾಟ ಮುಂದುವರಿಸಿರುವುದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಸಮಸ್ಯೆಯಾಗಿದೆ. 

ಮೊನ್ನೆಯೇ ದೆಹಲಿಗೆ ಹೋಗಿದ್ದ ಸಿದ್ದರಾಮಯ್ಯ ಮಲ್ಲಿಕಾರ್ಜುನ ಖರ್ಗೆಯವರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದರು. ನಿನ್ನೆ ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕೂಡ ದೆಹಲಿಗೆ ತೆರಳಿ ಖರ್ಗೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ನಿನ್ನೆ ದಿನವಿಡೀ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸತತ ಸಭೆಗಳು, ಚರ್ಚೆಗಳು ನಡೆದರೂ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ.

ಇಂದು ಡಿಕೆಶಿ ಸೋನಿಯಾ ಭೇಟಿ ಸಾಧ್ಯತೆ: ಬಲ್ಲ ಮೂಲಗಳ ಪ್ರಕಾರ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರಿಗೆ ಡಿ ಕೆ ಶಿವಕುಮಾರ್ ಆಪ್ತರು, ಕಾಂಗ್ರೆಸ್ ಕಷ್ಟದ ಕಾಲದಲ್ಲಿ ಪಕ್ಷದ ಪರವಾಗಿ, ನಾಯಕರ ಪರವಾಗಿ ನಿಂತವರು ಡಿ ಕೆ ಶಿವಕುಮಾರ್, ಕಾಂಗ್ರೆಸ್  ಪಕ್ಷದಲ್ಲಿ ಟ್ರಬಲ್ ಶೂಟರ್ ಎಂದೇ ಜನಪ್ರಿಯರು. ಹೀಗಾಗಿ ಅವರಿಗೆ ಸಿಎಂ ಸ್ಥಾನ ನೀಡಲು ಸೋನಿಯಾ ಗಾಂಧಿಯವರಿಗೆ ಒಲವು ಎನ್ನಲಾಗುತ್ತಿದೆ.

ನಿನ್ನೆ ಹೈಕಮಾಂಡ್ ಮುಂದೆ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಇಬ್ಬರೂ ಮಾತುಕತೆ ನಡೆಸಿದರೂ ಒಮ್ಮತಕ್ಕೆ ಬರುವಲ್ಲಿ ವಿಫಲರಾಗಿದ್ದಾರೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲು ಕಾಂಗ್ರೆಸ್ ಹೈಕಮಾಂಡ್ ಒಲವು ಹೊಂದಿದ್ದರೂ, ಶಿವಕುಮಾರ್ ಅವರನ್ನು ಅಸಮಾಧಾನಗೊಳಿಸಲು ಪಕ್ಷವು ಬಯಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಶಿವಕುಮಾರ್ ಅವರಿಗೆ ಸಿದ್ದರಾಮಯ್ಯನವರ ಉಪನಾಯಕನಾಗಲು ಕಾಂಗ್ರೆಸ್ ಆಫರ್ ನೀಡಿತ್ತು ಎನ್ನಲಾಗಿದೆ. ಆದರೆ ಡಿ ಕೆ ಶಿವಕುಮಾರ್ ಅದಕ್ಕೆ ನಿರಾಕರಿಸಿದ್ದಾರೆ. 

Ads on article

Advertise in articles 1

advertising articles 2

Advertise under the article