ಚುನಾವಣೆಗೆ ಒಂದೇ ದಿನ ಬಾಕಿ; ಉಡುಪಿಯಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ಬಿಗ್ ಫೈಟ್
ಉಡುಪಿ: ಈ ಬಾರಿಯ ಉಡುಪಿ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಒಂದೇ ದಿನ ಬಾಕಿಯಿದ್ದು, ರಾಜಕೀಯ ಲೆಕ್ಕಾಚಾರಗಳು ನಡೆಯುತ್ತಿದೆ.
ಉಡುಪಿ ಕ್ಷೇತ್ರದಲ್ಲಿ ಬಿಗ್ ಫೈಟ್ ಇರುವುದು ಬಿಜೆಪಿ-ಕಾಂಗ್ರೆಸ್ ಮಧ್ಯೆ. ಬಿಜೆಪಿಯಲ್ಲಿ ಯಶ್ಪಾಲ್ ಸುವರ್ಣ, ಕಾಂಗ್ರೆಸ್ಸಿನಲ್ಲಿ ಪ್ರಸಾದ್ ರಾಜ್ ಕಾಂಚನ್ ಕಣದಲ್ಲಿದ್ದು, ಈ ಬಾರಿಯ ಗೆಲುವು ಯಾರ ಪಾಲಾಗಲಿದೆ ಎಂಬುದನ್ನು ನೋಡಲು ಜನ ಕಾತುರದಲ್ಲಿ ಕಾಯುತ್ತಿದ್ದಾರೆ.
ಈ ಬಾರಿ ಜೆಡಿಎಸ್ ನಿಂದ ದಕ್ಷತ್ ಶೆಟ್ಟಿ, ಆಮ್ ಆದ್ಮಿ ಪಕ್ಷದಿಂದ ಪ್ರಭಾಕರ್ ಪೂಜಾರಿ, ಉತ್ತಮ ಪ್ರಜಾಕೀಯ ಪಕ್ಷದಿಂದ ನಿತಿನ್ ವಿ ಪೂಜಾರಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ರಾಮದಾಸ ಭಟ್, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಶೇಖರ ಹಾವಂಜೆ ಅವರು ಅಂತಿಮ ಚುನಾವಣಾ ಕಣದಲ್ಲಿದ್ದಾರೆ.
ಯಶ್ಪಾಲ್ ಸುವರ್ಣ, ಪ್ರಸಾದ್ ರಾಜ್ ಕಾಂಚನ್, ಪ್ರಭಾಕರ್ ಪೂಜಾರಿ ಕೋಟ್ಯಾಧೀಶರಾಗಿದ್ದು, ಈ ಬಾರಿ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ರೋಡ್ ಶೋ , ಬಹಿರಂಗ ಪ್ರಚಾರ ಸೇರಿದಂತೆ ಬಿರುಸಿನ ಪ್ರಚಾರವನ್ನೆಲ್ಲ ಮಾಡಿ ಮುಗಿಸಿ, ಮನೆಮನೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
ಯಶ್ಪಾಲ್ ಸುವರ್ಣ, ಪ್ರಸಾದ್ ರಾಜ್ ಕಾಂಚನ್ ಮೊಗವೀರ ಸಮುದಾಯದಿಂದ ಬಂದಿದ್ದು, ಈ ಕ್ಷೇತ್ರದಲ್ಲಿರುವ ಬಿಲ್ಲವರು, ಬಂಟರು, ದಲಿತರು, ಬ್ರಾಹ್ಮಣ, ಕೊಂಕಣಿ, ಮುಸ್ಲಿಂ-ಕ್ರಿಶ್ಚಿಯನ್ನರು, ಇತರ ಜಾತಿಯವರ ಮತವೇ ಇಲ್ಲಿ ಈಗ ನಿರ್ಣಾಯಕವಾಗಿದ್ದು, ಮತದಾರ ಯಾರ ಪರ ನಿಲ್ಲಲಿದ್ದಾನೆ ಎಂಬುದು ಕೆಲವೇ ದಿನದಲ್ಲಿ ಸ್ಪಷ್ಟವಾಗಲಿದೆ.