ಅಕ್ರಮ ಗೋಮಾಂಸ ಸಾಗಾಟ ಮಾಡುತ್ತಿದ್ದವರನ್ನು ತಡೆದು ಹಣದ ಬೇಡಿಕೆ; ಕಾಂಗ್ರೆಸ್ ಕಾರ್ಯಕರ್ತ ಸೇರಿದಂತೆ 4 ಮಂದಿಯನ್ನು ಬಂಧಿಸಿದ ಪೊಲೀಸರು
ಬೆಂಗಳೂರು: ಅಕ್ರಮ ಗೋಮಾಂಸ ಸಾಗಾಟಕ್ಕೆ ಹಣದ ಬೇಡಿಕೆಯಿಟ್ಟಿದ್ದ ಆರೋಪದ ಮೇಲೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತ ಸೇರಿದಂತೆ 4 ಮಂದಿಯನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಈ ಘಟನೆ ಬೆಂಗಳೂರಿನ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸುಂಕದಕಟ್ಟೆ ಪ್ರದೇಶದ ಕಾಂಗ್ರೆಸ್ ಮುಖಂಡ ಪ್ರಶಾಂತ್ ಮತ್ತು ಆತನ ಸಹಚರ ಸೋಮು ಗೌಡ ಎಂಬಾತನನ್ನು ಸುಲಿಗೆಗೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ. ಅಕ್ರಮವಾಗಿ ದನದ ಮಾಂಸ ಸಾಗಿಸುತ್ತಿದ್ದ ಪ್ರಕರಣದಲ್ಲಿ ಖಾಜಾ ಮೊಹಿಯುದ್ದೀನ್ ಮತ್ತು ಉಮೇಶ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಜೂನ್ 21 ರಂದು ಘಟನೆ ನಡೆದಿದ್ದು, ಖಾಜಾ ಮೊಹಿಯುದ್ದೀನ್ ಮತ್ತು ಉಮೇಶ್ ಮಾಗಡಿ ಪಟ್ಟಣದಲ್ಲಿ ದನದ ಮಾಂಸ ಖರೀದಿಸಿ ಬೆಂಗಳೂರಿನ ಶಿವಾಜಿನಗರಕ್ಕೆ ಎಸ್‌ಯುವಿಯಲ್ಲಿ ಸಾಗಿಸುತ್ತಿದ್ದಾಗ ತುಮಕೂರು ರಸ್ತೆಯಲ್ಲಿ ಪ್ರಶಾಂತ್ ಮತ್ತು ಆತನ ಸ್ನೇಹಿತರು ವಾಹನವನ್ನು ಅಡ್ಡಗಟ್ಟಿದ್ದಾರೆ. ತಮ್ಮ ವಾಹನಕ್ಕೆ ಡಿಕ್ಕಿಯಾಗಿದೆ ಎಂದು ಆರೋಪಿಸಿ ಜಗಳ ತೆಗೆದಿದ್ದಾರೆ.
ಈ ವೇಳೆ ಕಾರಿನಲ್ಲಿ ಗೋಮಾಂಸ ಸಾಗಾಟ ಮಾಡುತ್ತಿರುವುದು ತಿಳಿದು ಬಂದಿದ್ದು, ಪ್ರಶಾಂತ್ 2 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಮತ್ತು ಮೊಹಿಯುದ್ದೀನ್ ಹಾಗೂ ಉಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಸುಲಿಗೆ ಮತ್ತು ಹಲ್ಲೆ ಆರೋಪದ ಮೇಲೆ ಪ್ರಶಾಂತ್ ಮತ್ತು ಸೋಮು ಗೌಡರನ್ನು ಹಾಗೂ ಅಕ್ರಮವಾಗಿ ಗೋಮಾಂಸ ಸಾಗಾಟಕ್ಕಾಗಿ ಉಮೇಶ್ ಮತ್ತು ಮೊಹಿಯುದ್ದೀನ್ ಅವರನ್ನು ಬಂಧಿಸಲಾಗಿದೆ.ಈ ಸಂಬಂಧ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.