ಆರು ದಶಕಗಳಿಂದೀಚೆಗೆ ಅಕ್ಷರ ಸೇವೆಯನ್ನು ನಿತ್ಯಗೊಳಿಸಿದ ನಿತ್ಯಾನಂದ ಗ್ರಂಥಾಲಯ

ಆರು ದಶಕಗಳಿಂದೀಚೆಗೆ ಅಕ್ಷರ ಸೇವೆಯನ್ನು ನಿತ್ಯಗೊಳಿಸಿದ ನಿತ್ಯಾನಂದ ಗ್ರಂಥಾಲಯ

-ಡಿ. ಐ. ಅಬೂಬಕರ್ ಕೈರಂಗಳ

ಮಂಗಳೂರಿನ ಹಂಪನ ಕಟ್ಟೆಯ ಹಳೆ ಬಸ್ ಸ್ಟಾಂಡ್ ಕಟ್ಟಡಕ್ಕೆ ನಗರದ ಇತಿಹಾಸದಲ್ಲಿರುವ ಚಾರಿತ್ರಿಕ ಮಹಿಮೆಯನ್ನು ಮರೆಯಲಸಾಧ್ಯ. ಹೊಸ ಬಸ್ ಸ್ಟ್ಯಾಂಡು ಬರುವ ಮೊದಲಿನ  ಸುಮಾರು ಇಪ್ಪತ್ತು- ಇಪ್ಪತ್ತೈದು ವರ್ಷಗಳ ನಂತರದ   ನ್ಯೂ ಜನರೇಶನ್ ಗೆ ಈ ಇತಿಹಾಸ ಗೊತ್ತಿಲ್ಲ. ಅದಕ್ಕೆ ಮೊದಲು ಮಂಗಳೂರು ನಗರಕ್ಕೆ  ಖಾಸಗಿ ಬಸ್ಸಲ್ಲಾಗಲಿ, ಸರಕಾರಿ ಬಸ್ಸಲ್ಲಾಗಲಿ, ಅಥವಾ ಅಂಬಾಸಿಡರ್ ಕಾರಲ್ಲಾಗಲಿ ಹೇಗೆ ಬೇಕಾದರೂ  ಬಂದು ಹೋಗುವವರು ಈ ಬಸ್ ಸ್ಟ್ಯಾಂಡ್ ಗೆ ಬಾರದೆ ಇರಲು ಸಾಧ್ಯವೇ ಇದ್ದಿರಲಿಲ್ಲ.

 ಮಂಗಳೂರಿನ ಮೊತ್ತಮೊದಲ ಬಿಲ್ಡಿಂಗ್ ಎಂಬ ಖ್ಯಾತಿ ಪಡೆದ ಬಲ್ಲಾಲ್ ಅಪಾರ್ಟ್ ಮೆಂಟ್ ಹಿಂದುಗಡೆ ಸುಮಾರು ಎರಡಕೆರೆಯಷ್ಟು ವಿಸ್ತಾರವಾದ ಜಾಗದಲ್ಲಿದ್ದ ಹಳೆ ಬಸ್ ಸ್ಟಾಂಡು ಮಂಗಳೂರು ನಗರದ ಹೃದಯಭಾಗವಾಗಿ ಅನೇಕ ದಶಕಗಳ ಕಾಲ ಮೆರೆದಿದೆ. ಮದ್ರಾಸ್ ಪ್ರಸಿಡೆನ್ಸಿ ಈ ಬಸ್ ಸ್ಟಾಂಡನ್ನು ದುರಸ್ತಿ ಗೊಳಿಸಿದ ದಾಖಲೆಗಳು ಇದರ ಐತಿಹಾಸಿಕತೆಗೆ ಸಾಕ್ಷಿ. 

ಮಂಗಳೂರು ಹಳೆ ಬಸ್ ಸ್ಟಾಂಡ್ ಕಂಡಿದ್ದವರು ಅಲ್ಲಿರುವ ನಿತ್ಯಾನಂದ  ಗ್ರಂಥಾಲಯವನ್ನು ಕಂಡಿರಲೇಬೇಕು.  ವಿಶೇಷವೆಂದರೆ ಸ್ಟೇಟ್ ಬ್ಯಾಂಕ್ ಎಂಬಲ್ಲಿಗೆ  ಬಸ್ ಸ್ಟಾಂಡು ವರ್ಗಾವಣೆಯಾದಾಗ ಎಲ್ಲಾ ವೈಭವಗಳನ್ನು ಕಳಕೊಂಡ ಹಳೆ ಬಸ್ ಸ್ಟಾಂಡಲ್ಲಿ ಈಗಲೂ ಆ ನಿತ್ಯಾನಂದ ಗ್ರಂಥಾಲಯ ಇದೆ ಅನ್ನುವುದು!

ಇವತ್ತು ಮಂಗಳೂರಿಗೆ ಹೋಗಿದ್ದಾಗ ಅವಿಚಾರಿತವಾಗಿ ನಿತ್ಯಾನಂದ ಗ್ರಂಥಾಲಯ ಕಣ್ಣಿಗೆ ಬಿದ್ದಾಗ ನನಗೆ ಬಾಲ್ಯಕಾಲದ ನೆನಪಿನ ಸುರುಳಿ ಬಿಚ್ಚಿಕೊಂಡಿತ್ತು. ತಂದೆಯವರಲ್ಲಿ ಜಗಳವಾಡಿ ಕಾಸು ಇಸ್ಕೊಂಡು ಮಂಗಳೂರಿಗೆ ಬಂದು ನಿತ್ಯಾನಂದ ಗ್ರಂಥಾಲಯದಿಂದ ಚಂದಮಾಮ, ತುಷಾರ, ಕಥೆ ಪುಸ್ತಕ  ಮುಂತಾದವುಗಳನ್ನು ಕೊಂಡು ಕೊಂಡು ಸಂಭ್ರಮದಿಂದ ಮನೆಗೆ ಹೋಗಿ ಓದುತ್ತಿದ್ದ ಆ ಕಾಲ ನೆನಪಿಗೆ ಬಂತು. 

ಮುಂದೆ ಸಾಲೆತ್ತೂರು ಫೈಝಿಯವರ ಸಂಪಾದಕತ್ವದ  ಅಲ್ ಮುನೀರ್ ಮತ್ತು ಅಲ್ ಅನ್ಸಾರ್  ವಾರಪತ್ರಿಕೆ  ಹಾಗೂ ನನ್ನ ಸಂಪಾದಕತ್ವದ ಮದರಂಗಿ ಮಾಸಿಕದ  ಪ್ರತಿಗಳನ್ನು ಈ ಪುಸ್ತಕಾಲಯದಲ್ಲಿ  ಇಡತೊಡಗಿದ ನಂತರ ನಮ್ಮೊಳಗೆ ಬಾಂಧವ್ಯ ಬೆಳೆದಿತ್ತು. ವಾರಕ್ಕೆರಡು ಬಾರಿಯಾದರೂ ಬೇಟಿ ಕೊಡುವ ಪರಿಪಾಠ ತೊಡಗಿತ್ತು.

ಕಾಕತಾಳೀಯ ವಿಶೇಷವೆಂದರೆ ನಿತ್ಯಾನಂದ ಗ್ರಂಥಾಲಯದಲ್ಲಿ ನಿಂತುಕೊಂಡು ಗತ ಇತಿಹಾಸವನ್ನು ಮೆಲುಕು ಹಾಕುತ್ತಿರುವಾಗ ಅಚಾನಕ್ಕಾಗಿ ಅಕ್ಷರ ಸಂತ,  ಪದ್ಮಶ್ರೀ ಹಾಜಬ್ಬನವರು ಅಲ್ಲಿಗೆ ಬಂದುದು.  ಅವರೂ ಕೂಡಾ   "ನನ್ನ ಕಿತ್ತಳೆ ಮಾರುವ  ಜೀವನವೂ ಇಲ್ಲೇ ಆರಂಭವಾದುದು, ಆಗಲೂ ಈ ಪುಸ್ತಕಾಲಯ ಇತ್ತು" ಎಂದರು. 

   ಕಾಲ ಬದಲಾದಾಗ ಪುಸ್ತಕಾಲಯಗಳು ಕಂಪ್ಯೂಟರೀಕರಣ, ಸೈಬರ್ ಮುಂತಾದ ಹೊಸ ಮಜಲುಗಳಿಗೆ ಬದಲಾಗುವುದನ್ನು ನಾವು ನೋಡುತ್ತೇವೆ. ಕಾಲದ ಜೊತೆಗೆ ಓಡದೆ ಬಿಸ್ನೆಸ್ಸು  ನಡೆಸಲೂ ಸಾಧ್ಯವಿಲ್ಲ.  ಆದರೆ 1960 ರಲ್ಲಿ ( 63 ವರ್ಷಗಳ ಹಿಂದೆ) ಸ್ಥಾಪನೆಗೊಂಡ ನಿತ್ಯಾನಂದ ಗ್ರಥಾಲಯ ಅದೇ ಜಾಗದಲ್ಲಿ, ಅದೇ ರೀತಿಯಲ್ಲಿ ಈಗಲೂ ಉಳಿದಿರುವುದು ವಿಸ್ಮಯ.

ಮಾಲಕ ಚಂದ್ರಶೇಖರ್ ಶೆಟ್ಟಿಯವರನ್ನು ಮಾತನಾಡಿಸಿದಾಗ ಪ್ರಾಯದ ಕಾರಣದಿಂದ  ಹಳೆ ನೆನಪುಗಳು ಮಾಸಿದ ಹಾಗೆ ತೋರಿತು. ಆದರೆ ಪುಸ್ತಕ ಮಾರಾಟದ ಹುಮ್ಮಸ್ಸು ತಗ್ಗಿಲ್ಲ. " ಈಗ ಪುಸ್ತಕ ಯಾರಿಗೆ ಬೇಕು? ಈಗಿನವರು ಓದುವುದಿಲ್ಲ. ಆದರೆ ನನಗೆ ಈ ಗ್ರಂಥಾಲಯ ಮುಚ್ಚಲು ಮನಸ್ಸಿಲ್ಲ, ನನ್ನ ಕೊನೆಯಾಗುವ ತನಕ ವ್ಯಾಪಾರ ಮುಂದುವರಿಸುತ್ತೇನೆ" ಎಂದರು. 

 ಈ ಗ್ರಂಥಾಲಯದ ಸ್ಥಾಪಕರು ಕಾಸರಗೋಡು ಜಿಲ್ಲೆಯ ಮಾನ್ಯ ಎಂಬ ಊರಿನ ನಿವಾಸಿಯಾಗಿದ್ದ  ವೆಂಕಟರಾಯರು. 2010 ಎಪ್ರಿಲ್ 14 ರಂದು ಅವರ ನಿವಾಸ " ನಿತ್ಯಾನಂದ ನಿಲಯ" ದಲ್ಲಿ ಅವರು ತೀರಿಕೊಂಡಾಗ 83 ವಯಸ್ಸು. 

ಮಂಗಳೂರು ನಗರದ ಮುಖ್ಯ ಪತ್ರಿಕಾ ವಿತರಕರೂ ಕೂಡಾ ಆಗಿದ್ದ ಅವರು ನಿತ್ಯಾನಂದ ಗ್ರಂಥಾಲಯದಲ್ಲಿ ಪತ್ರಿಕೆಗಳ ಜೊತೆಗೆ ಪುಸ್ತಕಗಳನ್ನೂ ಮಾರುತ್ತಿದ್ದರು. ಅಲ್ಲದೆ ಪ್ರಕಾಶಕ ಕೂಡಾ ಆಗಿದ್ದರು. ಯಕ್ಷಗಾನ ದಂತಕತೆಯಾಗಿದ್ದ  ಕುಂಬಳೆ ಪಾರ್ತಿಸುಬ್ಬನವರು ರಚಿಸಿದ್ದ "ಅಂಗದ ಸಂಧಾನ " ಎಂಬ ಯಕ್ಷಗಾನ ಪುಸ್ತಕವನ್ನು ಪ್ರಕಾಶನಗೊಳಿಸಿದ್ದು ಇವರು. ಆಗ ಅದರ ಬೆಲೆ:  40 ಪೈಸೆ! 

 ಇನ್ನೂ ಅನೇಕ ಪುಸ್ತಕಗಳ ಪ್ರಕಾಶನ ಮಾಡಿದ್ದರು. ಅಂದು  ಮಂಗಳೂರು ನಗರದಲ್ಲಿ  ಇಬ್ಬರು ವೆಂಕಟರಾಯರು ಗಳು ಬಹಳ ಪ್ರಸಿದ್ಧರಾಗಿದ್ದರು. ಒಬ್ಬರು: ಇದೇ ವೆಂಕಟಯಾಯರು. ಇನ್ನೊಬ್ಬರು ಸರ್ಜನ್ ದಂತಕಥೆ ವೆಂಕಟರಾಯರು. 

   ಪಾಳು ಬಿದ್ದಂತಾಗಿರುವ ಹಳೆ ಬಸ್ ಸ್ಟಾಂಡ್ ಕಟ್ಟಡದಲ್ಲಿ ವ್ಯಾಪಾರ ಇಲ್ಲದಿದ್ದರೂ ತನ್ನ ಒಂದು ತಪಸ್ಸಿನ ಹಾಗೆ ಇಂದಿಗೂ ದಿನನಿತ್ಯ ನಿತ್ಯಾನಂದ ಗ್ರಂಥಾಲಯವನ್ನು ತೆರೆಯುತ್ತಿರುವ ಚಂದ್ರಶೇಖರ ಶೆಟ್ಟಿಯವರ ಅಕ್ಷರ ಪ್ರೀತಿ ನಿಜಕ್ಕೂ ಶ್ಲಾಘನೀಯ.

Ads on article

Advertise in articles 1

advertising articles 2

Advertise under the article