ಒಕ್ಕಲಿಗ ಲಾಬಿಯಿಂದ ಶೇ.60ರಷ್ಟು ಮತ ಹಾಕಿದ ದಲಿತರು, ಅಲ್ಪಸಂಖ್ಯಾತರ ಸಮುದಾಯಕ್ಕೆ ಸಿಗಬೇಕಾದ ಡಿಸಿಎಂ ಸ್ಥಾನ ಕೈತಪ್ಪಿ ಹೋಗಿದೆ: ಉಡುಪಿಯಲ್ಲಿ ನಡೆದ SDPI ಜಿಲ್ಲಾ ನಾಯಕರುಗಳ ಶೃಂಗ ಸಭೆಯಲ್ಲಿ ಅಬ್ದುಲ್ ಮಜೀದ್
ಉಡುಪಿ: ಕಾಂಗ್ರೆಸಿಗೆ ಕೇವಲ ಶೇ.26ರಷ್ಟು ಮತ ಹಾಕಿದ ಒಕ್ಕಲಿಗ ಲಾಬಿಯಿಂದ ಶೇ.60ರಷ್ಟು ಮತ ಹಾಕಿದ ದಲಿತರು ಹಾಗೂ ಅಲ್ಪಸಂಖ್ಯಾತರ ಸಮುದಾಯಕ್ಕೆ ಸಿಗಬೇಕಾದ ಡಿಸಿಎಂ ಸ್ಥಾನ ಕೈತಪ್ಪಿ ಹೋಗಿದೆ ಎಂದು ಎಸ್ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಆರೋಪಿಸಿದ್ದಾರೆ.
ಎಸ್ಡಿಪಿಐ ಉಡುಪಿ ಜಿಲ್ಲೆ ವತಿಯಿಂದ ಉಡುಪಿ ಬ್ರಹ್ಮಗಿರಿಯ ಲಯನ್ಸ್ ಕ್ಲಬ್ನಲ್ಲಿ ಗುರುವಾರ ನಡೆದ ಉಡುಪಿ ಜಿಲ್ಲಾ ನಾಯಕರುಗಳ ಶೃಂಗ ಸಭೆಯಲ್ಲಿ ಮಾತನಾಡುತಿದ್ದ ಅವರು, ಕ್ರಿಶ್ಚಿಯನ್ ಹಾಗೂ ದಲಿತರ ವಿರೋಧಿಯಾಗಿರುವ ಮತಾಂತರ ನಿಷೇಧ ಕಾಯಿದೆಯನ್ನು ಕೇವಲ RSS ಅಜೆಂಡಾ ಎಂಬ ಕಾರಣಕ್ಕೆ ಜಾರಿಗೆ ತರಲಾಗಿತ್ತು ಎಂದು ದೂರಿದರು.
ಬಿಜೆಪಿ ಸರಕಾರ ತನ್ನ ಆಡಳಿತದ ಮೂವರೆ ವರ್ಷಗಳ ಕಾಲ ಹಲಾಲ್, ಹಿಜಾಬ್, ಸಾಮಾಜಿಕ ಬಹಿಷ್ಕಾರ, ಮೀಸಲಾತಿ, ಮತಾಂತರ ನಿಷೇದ ಕಾಯಿದೆ ಸೇರಿದಂತೆ ಧ್ವೇಷದ ರಾಜಕಾರಣ ಮಾಡಿತು. ಇವುಗಳ ಹಿಂದೆ ಧರ್ಮ ಧ್ವೇಷ ಇತ್ತೆ ಹೊರತು ಯಾವುದೇ ಜನಹಿತ ಅಜೆಂಡಾ ಇರಲಿಲ್ಲ. ಕೋಮು ಧ್ವೇಷ ಹರಡಿ ಧರ್ಮಗಳ ಧ್ರುವೀಕರಣ ಮಾಡುವ ಬಿಜೆಪಿ ಷಡ್ಯಂತರ ಮಾತ್ರ ಕರ್ನಾಟಕದಲ್ಲಿ ನಡೆಯಲಿಲ್ಲ ಎಂದರು.
ಎಸ್ಡಿಪಿಐ ರಾಷ್ಟೀಯ ಸಮಿತಿ ಸದಸ್ಯ ಸದಾಶಿವ ತ್ರಿಪಾಠಿ, ಎಸ್ಡಿಪಿಐ ಜಿಲ್ಲಾಧ್ಯಕ್ಷ ಶಾಹಿದ್ ಅಲಿ, ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ಅಥಾವುಲ್ಲ ಜೋಕಟ್ಟೆ, ಡಬ್ಲುಐಎಂ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ, ಡಬ್ಲುಐಎಂ ಉಡುಪಿ ಜಿಲ್ಲಾಧ್ಯಕ್ಷೆ ನಾಝಿಯ ಉಡುಪಿ, ಎಸ್ಡಿಟಿಯು ಜಿಲ್ಲಾಧ್ಯಕ್ಷ ಅಬ್ದುಲ್ ಖಾದರ್, ಎಸ್ಡಿಪಿಐ ಕಾಪು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹನೀಫ್ ಮೂಳೂರು ಉಪಸ್ಥಿತರಿದ್ದರು.