ಮಹಿಳಾ ಕುಸ್ತಿಪಟುಗಳ ಮೇಲೆ ಬಿಜೆಪಿಯ ಸಂಸದ ಬ್ರಿಜ್ ಭೂಷಣ್ ನಡೆಸಿದ ಲೈಂಗಿಕ ದೌರ್ಜನ್ಯ; ಬಂಧನಕ್ಕೆ ಆಗ್ರಹಿಸಿ ವಿಮೆನ್ ಇಂಡಿಯಾ ಮೂಮೆಂಟ್ ಕಾಪು ಘಟಕದ ವತಿಯಿಂದ ಪ್ರತಿಭಟನೆ
ಕಾಪು: ರಾಷ್ಟ್ರೀಯ ಮಹಿಳಾ ಕುಸ್ತಿಪಟುಗಳ ಮೇಲೆ ಬಿಜೆಪಿಯ ಸಂಸದ ಬ್ರಿಜ್ ಭೂಷಣ್ ನಡೆಸಿದ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ, ದೆಹಲಿಯ ಜಂತರ್ ಮಂತರ್ ನಲ್ಲಿ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಶುಕ್ರವಾರ ಕಾಪು ಪೇಟೆಯಲ್ಲಿ ವಿಮೆನ್ ಇಂಡಿಯಾ ಮೂಮೆಂಟ್ ಕಾಪು ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಕಳೆದ ಮೂರು ತಿಂಗಳಿನಿಂದ ದೆಹಲಿಯ ಜಂತರ್ ಮಂತರ್ ನಲ್ಲಿ ಕುಸ್ತಿಪಟ್ಟುಗಳು ಪ್ರತಿಭಟನೆಯನ್ನು ನಡೆಸುತ್ತಿದ್ದು ಆರೋಪಿ ಬಿಜೆಪಿ ಸಂಸದನ ವಿರುದ್ಧ ಪ್ರಕರಣ ದಾಖಲಾಗಿದ್ದರು ಸಹ ಅವರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ, ಈ ದೇಶಕ್ಕೆ ಕೀರ್ತಿಯನ್ನು ತಂದಂತಹ ಹೆಮ್ಮೆಯ ಮಹಿಳಾ ಕುಸ್ತಿಪಟುಗಳಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಅರೋಪಿಯನ್ನೂ ಬಂಧಿಸಲು ಸರಕಾರವು ತಾರತಮ್ಯ ಮಾಡುತ್ತಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.
ಕುಸ್ತಿಪಟುಗಳು ಹೊಸ ಸಂಸತ್ ಭವನ ಉದ್ಘಾಟನೆಯಂದು ಸಂಸತ್ ಭವನದ ಮುಂದೆ ಪ್ರತಿಭಟನೆಯನ್ನು ನಡೆಸುವ ವೇಳೆ ಪೊಲೀಸರು ಅವರ ಮೇಲೆ ದೌರ್ಜನ್ಯವನ್ನು ಎಸೆಗಿದ್ದು, ಇದು ಅಮಾನುಷಕೃತ್ಯವಾಗಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ಹೊರಹಾಕಿದರು.
ಪ್ರತಿಭಟನೆಯಲ್ಲಿ ವಿಮೆನ್ ಇಂಡಿಯನ್ ಮೂವ್ಮೆಂಟ್ ಜಿಲ್ಲಾಧ್ಯಕ್ಷರಾದ ನಾಜಿಯ, ಜೊತೆ ಕಾರ್ಯದರ್ಶಿ ಹಾಜಿರ, ವಿಮೆನ್ ಇಂಡಿಯನ್ ಮೂವ್ಮೆಂಟ್ ಕಾಪು ಘಟಕದ ಅಧ್ಯಕ್ಷರಾದ ಫರ್ಜಾನ, ಪ್ರಧಾನ ಕಾರ್ಯದರ್ಶಿಯಾದ ನೌಸೀನ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.