ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತ; 261ಕ್ಕೆ ಏರಿಕೆ ಸಾವಿನ ಸಂಖ್ಯೆ; ಪೂರ್ಣಗೊಂಡ ರಕ್ಷಣಾ ಕಾರ್ಯಾಚರಣೆ
ಕೋಲ್ಕತ್ತ: ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 261ಕ್ಕೆ ಏರಿಕೆಯಾಗಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಆಗ್ನೇಯ ರೈಲ್ವೆ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ನಡೆದ ರೈಲ್ವೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 261ಕ್ಕೆ ಏರಿದೆ. ಇನ್ನೂ 650 ಗಾಯಗೊಂಡ ಪ್ರಯಾಣಿಕರು ಒಡಿಶಾದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಸ್‌ಇಆರ್ ರೈಲ್ವೆ ವಕ್ತಾರ ಆದಿತ್ಯ ಚೌಧರಿ ಹೇಳಿದ್ದಾರೆ.
ಆಗ್ನೇಯ ವೃತ್ತದ ರೈಲ್ವೆ ಸುರಕ್ಷತಾ (ಸಿಆರ್‌ಎಸ್) ಆಯುಕ್ತರಿಂದ ಅಪಘಾತದ ವಿಚಾರಣೆ ನಡೆಯಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ದೇಶದಲ್ಲೇ ಅತ್ಯಂತ ಭೀಕರ ರೈಲು ಅಪಘಾತ ಇದಾಗಿದ್ದು, ಕೋಲ್ಕತ್ತಾದಿಂದ ದಕ್ಷಿಣಕ್ಕೆ 250 ಕಿಮೀ ಮತ್ತು ಭುವನೇಶ್ವರದಿಂದ ಉತ್ತರಕ್ಕೆ 170 ಕಿಮೀ ಇರುವ ಬಾಲಸೋರ್ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ರೈಲ್ವೆ ಸಚಿವಾಲಯ ಈಗಾಗಲೇ ಘಟನೆಯ ತನಿಖೆಗೆ ಆದೇಶಿಸಿದೆ.
ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಅಪಘಾತದಲ್ಲಿ ಸಿಲುಕಿವೆ.