ಪರಿಶಿಷ್ಟ ಜಾತಿಯ ಯುವಕನನ್ನು ಪ್ರೀತಿಸಿದಳೆಂಬ ಕಾರಣಕ್ಕೆ ಮಗಳನ್ನೇ ಕೊಲೆ ಮಾಡಿದ ತಂದೆ!
ಕೋಲಾರ: ಪರಿಶಿಷ್ಟ ಜಾತಿಯ ಯುವಕನನ್ನು ಪ್ರೀತಿಸಿದಳೆಂಬ ಕಾರಣಕ್ಕೆ ತಂದೆಯೇ ಮಗಳನ್ನು ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬೋಡಗುರ್ಕಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಪ್ರಿಯತಮೆಯ ಕೊಲೆಯ ಸುದ್ದಿ ಕೇಳಿ ಆಘಾತಕ್ಕೆ ಒಳಗಾದ ಯುವಕ ತಾನೂ ರೈಲಿಗೆ ತಲೆ ಕೊಟ್ಟು ಅತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.
ತಂದೆಯಿಂದಲೇ ಹತ್ಯೆಗೀಡಾದ ಯುವತಿಯನ್ನು ಕೀರ್ತಿ (20) ಎಂದು ಗುರುತಿಸಲಾಗಿದ್ದು, ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಗಂಗಾಧರ್ (24) ಎಂದು ಗುರುತಿಸಲಾಗಿದೆ.
ಕೀರ್ತಿ ಪ್ರಬಲ ಗೊಲ್ಲ ಸಮುದಾಯಕ್ಕೆ ಸೇರಿದ ಯುವತಿ. ಗಂಗಾಧರ್ ಪರಿಶಿಷ್ಟ ಜಾತಿಗೆ ಸೇರಿದ ಹುಡುಗ. ಇಬ್ಬರು ಜಾತಿ ಮೀರಿ ಪ್ರೀತಿಯಲ್ಲಿದ್ದರು. ಕಳೆದೊಂದು ವರ್ಷದಿಂದ ಪರಸ್ಪರ ಪ್ರೀತಿಸಿ ಇತ್ತೀಚೆಗೆ ಮದುವೆಯಾಗೋ ಪ್ಲಾನ್ ಕೂಡ ಮಾಡಿದ್ದರು ಎಂದು ವರದಿಯಾಗಿದೆ.
ಖುದ್ದು ಮಗಳೇ ತನ್ನ ತಂದೆಗೆ ಬೇರೆ ಜಾತಿಯ ಹುಡುಗನನ್ನು ಪ್ರೀತಿಸಿದ ವಿಷಯ ತಿಳಿಸಿದ್ದಳು. ಜತೆಗೆ ತನಗೆ ಹುಡುಗನೊಂದಿಗೆ ಮದುವೆ ಮಾಡಿಸಿ ಎಂದು ತಂದೆಗೆ ಕೇಳಿಕೊಂಡಿದ್ದಳು. ಆದರೆ, ದಲಿತ ಹುಡುಗನನ್ನು ಪ್ರೀತಿಸಿದ್ದಕ್ಕೆ ಸಹಿಸದ ಜಾತಿ ರೋಗಗ್ರಸ್ಥ ತಂದೆ ಮೊದಲು ಮಗಳಿಗೆ ಎಚ್ಚರಿಕೆ ನೀಡಿದ್ದಾರೆ. ಬಳಿಕ ಹುಡುಗಿ ಮದುವೆಗೆ ಪಟ್ಟು ಹಿಡಿದಾಗ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ. ಯಾವುದೇ ಕಾರಣಕ್ಕೂ ಆ ಹುಡುಗನೊಂದಿಗೆ ಮದುವೆ ಆಗಲ್ಲ ಎಂದು ತಂದೆ ಮಗಳಿಗೆ ಹೇಳಿದ್ದಾರೆ. ಜತೆಗೆ ಆತನನ್ನು ಮರೆತು ಬಿಡು ಎಂದು ಬೆದರಿಕೆಯೂ ಕೂಡ ಹಾಕಿದ್ದಾರೆ.
ಇಷ್ಟಾದ್ರೂ ಮಗಳು ದಲಿತ ಹುಡುಗನೊಂದಿಗೆ ಪ್ರೀತಿ ಮುಂದುವರಿಸಿದ್ದಾಳೆ. ಇದರಿಂದ ಕೋಪಗೊಂಡ ತಂದೆ ಹೆತ್ತ ಮಗಳನ್ನೇ ಕತ್ತು ಹಿಸುಕಿ ಮರ್ಯಾದ ಹತ್ಯೆಗೈದಿದ್ದಾರೆ. ಇದಾದ ಬೆನ್ನಲ್ಲೇ ಸುದ್ದಿ ತಿಳಿದ ಕೂಡಲೇ ಹುಡುಗ ಕೂಡ ರೈಲಿಗೆ ತಲೆ ಕೊಟ್ಟಿದ್ದಾನೆ. ಈ ಸಂಬಂಧ ಈಗ ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಮಗಳನ್ನು ಕೊಂದಿದ್ದ ತಂದೆ ವಿರುದ್ಧ ಎಫ್ಐಆರ್ ಆಗಿದೆ. ಈ ಘಟನೆ ಇಡೀ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.