ಮೆಡಿಕಲ್ ಕಾಲೇಜುಗಳ ನಿರ್ಮಾಣದಲ್ಲಿನ ಅಕ್ರಮ ಸೇರಿದಂತೆ ಬಿಜೆಪಿ ಆಡಳಿತದ ಎಲ್ಲಾ ಹಗರಣಗಳು- ಅಕ್ರಮಗಳ ಬಗ್ಗೆ ತನಿಖೆ: ಸಿದ್ದರಾಮಯ್ಯ
ಹಾಸನ: ಮೆಡಿಕಲ್ ಕಾಲೇಜುಗಳನ್ನು ನಿರ್ಮಾಣದಲ್ಲಿನ ಅಕ್ರಮ ಸೇರಿದಂತೆ ಹಿಂದಿನ ಬಿಜೆಪಿ ಆಡಳಿತದಲ್ಲಿ ನಡೆದಿದೆ ಎನ್ನಲಾದ ಎಲ್ಲಾ ಹಗರಣಗಳು ಮತ್ತು ಅಕ್ರಮಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ.
ಚುನಾವಣಾ ಪೂರ್ವ ಎಲ್ಲಾ ಭರವಸೆಗಳನ್ನು ಸರ್ಕಾರ ಈಡೇರಿಸಲಿದೆ ಎಂದು ಹೇಳಿದ ಅವರು, ಕಾಂಗ್ರೆಸ್‌ನ ಐದು ಖಾತರಿಗಳ ಅನುಷ್ಠಾನದಿಂದ ಬೊಕ್ಕಸಕ್ಕೆ ವರ್ಷಕ್ಕೆ 59,000 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಈ ವರ್ಷ ಆಡಳಿತದ ಮೇಲೆ ಸ್ವಲ್ಪ ಹೆಚ್ಚಿನ ಹೊರೆಯಾಗಿದೆ ಎಂದು ಹೇಳಿದರು.
'ನಾವು ಹಗರಣಗಳ ಬಗ್ಗೆ ವಿಚಾರಣೆ ನಡೆಸುತ್ತೇವೆ. ನಾಲ್ಕು ಮೆಡಿಕಲ್ ಕಾಲೇಜುಗಳನ್ನು ನಿರ್ಮಿಸಲಾಗಿದ್ದು, ಅದರಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪವಿದ್ದು, ತನಿಖೆ ನಡೆಸುತ್ತೇವೆ. ಅಲ್ಲದೆ, ಶೇ 40ರಷ್ಟು ಕಮಿಷನ್ ಕುರಿತಾಗಿಯೂ ತನಿಖೆ ನಡೆಸುತ್ತೇವೆ. ಕೋವಿಡ್-19 ಅವಧಿಯಲ್ಲಿ ಆರೋಗ್ಯ ಪರಿಕರಗಳ ಖರೀದಿಗಳಲ್ಲಿ ಅಕ್ರಮಗಳು, ನೀರಾವರಿ ಯೋಜನೆಗಳಿಗೆ ಸಂಬಂಧಿಸಿದ ಅಕ್ರಮಗಳು ಮತ್ತು ಬಿಟ್‌ಕಾಯಿನ್ ಹಗರಣಗಳು ನಡೆದಿವೆ. ಅವುಗಳೆಲ್ಲವನ್ನೂ ತನಿಖೆ ನಡೆಸಲಾಗುವುದು' ಎಂದು ಹೇಳಿದರು.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಐಡಿಯಿಂದ ಪೊಲೀಸ್ ಸಬ್ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದ ತನಿಖೆ ನಡೆಯುತ್ತಿದೆ. ಅದನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಮತ್ತು ತಪ್ಪಿತಸ್ಥರನ್ನು ಶಿಕ್ಷಿಸಲಾಗುವುದು ಎಂದರು.
ಚಾಮರಾಜನಗರ ಆಸ್ಪತ್ರೆಯಲ್ಲಿ ಕೋವಿಡ್ ಸಮಯದಲ್ಲಿ ಆಮ್ಲಜನಕದ ಕೊರತೆಯಿಂದ ಸಂಭವಿಸಿದ ಸಾವುಗಳ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದ ಅವರು, 'ಇಬ್ಬರು ಮಾತ್ರ ಸಾವಿಗೀಡಾಗಿದ್ದಾರೆ ಎಂದು ಅಂದಿನ ಆರೋಗ್ಯ ಸಚಿವ ಕೆ ಸುಧಾಕರ್ ಹೇಳಿದ್ದರು. ಆದರೆ, ಆಮ್ಲಜನಕದ ಕೊರತೆಯಿಂದ ಉಂಟಾದ ಸಾವು ನೋವುಗಳು ಹೆಚ್ಚಿವೆ, ಅವರು ಸುಳ್ಳು ಹೇಳಿದ್ದಾರೆ. ನಾವು ಅದನ್ನು ವಿಚಾರಿಸುತ್ತೇವೆ ಎಂದು ತಿಳಿಸಿದರು.
ಚುನಾವಣಾ ಖಾತರಿಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರವನ್ನು ಟೀಕಿಸಿದ್ದಕ್ಕಾಗಿ ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದ ಅವರು, ಸಾರ್ವಜನಿಕ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವ ಒಂದು ಖಾತರಿಯನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಜುಲೈ 1 ರಿಂದ ಮನೆಗಳಿಗೆ ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲಾಗುವುದು. ಆಗಸ್ಟ್ 15ರ ನಂತರ ಮಹಿಳೆಯರ ಕುಟುಂಬದ ಮುಖ್ಯಸ್ಥರಿಗೆ 2,000 ರೂ. ಗಳನ್ನು ಒದಗಿಸುವ 'ಗೃಹ ಲಕ್ಷ್ಮಿ' ಯೋಜನೆಯನ್ನು ಜಾರಿಗೆ ತರಲಾಗುವುದು. ಅದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದೂ ತಿಳಿಸಿದರು.
ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿ ನೀಡುವ ‘ಅನ್ನ ಭಾಗ್ಯ’ ಯೋಜನೆಗೆ ಸಂಬಂಧಿಸಿದಂತೆ, ನಮಗೆ ಪ್ರತಿ ತಿಂಗಳು 2,29,000 ಮೆಟ್ರಿಕ್ ಟನ್ ಅಕ್ಕಿ ಅಗತ್ಯವಿದೆ. ಸದ್ಯ ಅಕ್ಕಿ ಎಲ್ಲಿಯೂ ಲಭ್ಯವಿಲ್ಲ. ರಾಜ್ಯ ಸರ್ಕಾರಕ್ಕೆ ಅಗತ್ಯವಿರುವ ಅಕ್ಕಿಯನ್ನು ಎಫ್‌ಸಿಐನಿಂದ ಸಿಗದಂತೆ ನೋಡಿಕೊಳ್ಳುವಲ್ಲಿ ಕೇಂದ್ರ ಸರ್ಕಾರ ಪಿತೂರಿ ನಡೆಸಿದೆ. ಆರಂಭದಲ್ಲಿ ತಮ್ಮ ಬಳಿ ದಾಸ್ತಾನು ಇರುವುದರಿಂದ ಸರಬರಾಜು ಮಾಡಲು ಒಪ್ಪಿಕೊಂಡಿತ್ತು ಎಂದು ಆರೋಪಿಸಿದರು.
'ರಾಜ್ಯಕ್ಕೆ ಅಕ್ಕಿ ನೀಡುವುದಿಲ್ಲ ಎಂದು ಹೇಳುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯದ ಬಡವರ ಮೇಲೆ ದಾಳಿ ಮಾಡಿದೆ. ಬಿಜೆಪಿ ಎಂದರೆ ಬಡವರ ವಿರೋಧಿ. NCCF, NAFED ಮತ್ತು ಕೇಂದ್ರೀಯ ಭಂಡಾರ್‌ಗಳಂತಹ ಇತರ ಏಜೆನ್ಸಿಗಳ ಮೂಲಕ ಅಕ್ಕಿಯನ್ನು ತರಲು ನಾವು ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಈ ಬಗ್ಗೆ ಕೊಟೇಷನ್‌ಗಳನ್ನು ಕೇಳಿದ್ದೇವೆ ಮತ್ತು ಮಾತುಕತೆಗಳು ನಡೆಯುತ್ತಿವೆ. ಅಕ್ಕಿ ಉತ್ಪಾದಿಸುವ ರಾಜ್ಯಗಳಿಂದ ನಮಗೆ ಅಗತ್ಯ ಅಕ್ಕಿ ಸಿಗದ ಕಾರಣ ಮುಂದಿನ ನಡೆ ಕುರಿತು ನಾಳಿನ ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಧರಿಸುತ್ತೇವೆ. ಅಕ್ಕಿ ಲಭ್ಯವಾದ ತಕ್ಷಣ ಯೋಜನೆ ಜಾರಿಗೆ ತರಲಾಗುವುದು' ಎಂದರು.
‘ಯುವನಿಧಿ’ ಯೋಜನೆಯಡಿ 2022-23ನೇ ಸಾಲಿನಲ್ಲಿ ಪದವಿ ಪಡೆದ ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು 3,000 ರೂ., ನಿರುದ್ಯೋಗಿ ಡಿಪ್ಲೊಮಾದಾರರಿಗೆ 1,500 ರೂ. ನಂತೆ 24 ತಿಂಗಳು ಭತ್ಯೆಯನ್ನು ನೀಡಲಾಗುತ್ತದೆ. ಅಷ್ಟರೊಳಗೆ ನಿರುದ್ಯೋಗಿಗಳು ಉದ್ಯೋಗಗಳನ್ನು ಹುಡುಕಬೇಕಾಗುತ್ತದೆ. ಕೆಲಸ ಸಿಕ್ಕ ಮೇಲೆ ಅದನ್ನು ನಿಲ್ಲಿಸಲಾಗುವುದು ಎಂದರು.
ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು 2.5 ಲಕ್ಷ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು. ಒಮ್ಮೆಲೇ ಇದನ್ನು ಮಾಡಲು ಸಾಧ್ಯವಿಲ್ಲ. ಐದು ಚುನಾವಣಾ ಖಾತರಿಗಳ ಅನುಷ್ಠಾನಕ್ಕೆ ಸರ್ಕಾರಕ್ಕೆ ವರ್ಷಕ್ಕೆ 59,000 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಆದ್ದರಿಂದ ಈ ವರ್ಷ ಸರ್ಕಾರದ ಮೇಲೆ ಸ್ವಲ್ಪ ಹೆಚ್ಚಿನ ಹೊರೆ ಇದೆ. ಆದರೆ, ಖಾತರಿಗಳು ಜಾರಿಯಾಗುವುದು ಖಚಿತ ಎಂದು ಹೇಳಿದರು."
ಚುನಾವಣಾ ಖಾತ್ರಿ ಜಾರಿಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿರುವ ಬಿಜೆಪಿಯ ನೈತಿಕ ಹಕ್ಕನ್ನು ಪ್ರಶ್ನಿಸಿದ ಸಿದ್ದರಾಮಯ್ಯ, 'ಅಧಿಕಾರದಲ್ಲಿದ್ದಾಗ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಜಾರಿಗೆ ತಂದಿದ್ದಾರಾ?. ಯಡಿಯೂರಪ್ಪ (ಮಾಜಿ ಸಿಎಂ) ಅವರ ಅವಧಿಯಲ್ಲಿ ಮತ್ತು ಬಸವರಾಜ ಬೊಮ್ಮಾಯಿ (ಮಾಜಿ ಸಿಎಂ) ಅವಧಿಯಲ್ಲಿ ಎಷ್ಟು ಭರವಸೆಗಳನ್ನು ಜಾರಿಗೊಳಿಸಲಾಗಿದೆ ಎಂಬುದನ್ನು ಬಹಿರಂಗಪಡಿಸಬೇಕು. ರಾಜಕೀಯ ಗಿಮಿಕ್ ಮಾಡಬಾರದು. ಬಡವರ ಪರ ಬದ್ಧತೆ ಇದ್ದರೆ ಪ್ರತಿಭಟನೆ ಮಾಡುವ ಬದಲು ದ್ವೇಷದ ರಾಜಕಾರಣ ಮಾಡುತ್ತಿರುವ ಕೇಂದ್ರದಿಂದ ಅನ್ನ ಕೊಡಿಸಲಿ' ಎಂದರು.