ಒಡಿಶಾದಲ್ಲಿ ಬಸ್'ಗಳ ಮಧ್ಯೆ ಭೀಕರ ಅಪಘಾತ; ಮದುವೆ ಮುಗಿಸಿ ಹಿಂದಿರುಗುತ್ತಿದ್ದ 12 ಮಂದಿ ದುರ್ಮರಣ
ಒಡಿಶಾ: ಒಡಿಶಾದ ಗಂಜಾಂನಲ್ಲಿ ಒಎಸ್‌ಆರ್‌ಟಿಸಿ ಬಸ್ ಹಾಗು ಖಾಸಗಿ ಬಸ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ 12 ಜನ ಪ್ರಯಾಣಿಕರು ಸಾವನ್ನಪ್ಪಿರುವ ದುರ್ಘಟನೆ ರವಿವಾರ ತಡರಾತ್ರಿ ನಡೆದಿದೆ.
ಗಂಜಾಂ ಜಿಲ್ಲೆಯ ದಿಗ್ಪಹಂಡಿಯ ಡೆಂಗೋಸ್ಟಾ ಪ್ರದೇಶದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.
ಘಟನೆಯಲ್ಲಿ ಹಲವು ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಬ್ರಹ್ಮಪುರದ ಎಂಕೆಸಿಜೆ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಯಗಢ ಜಿಲ್ಲೆಯ ಗುಡಾರಿ ಪ್ರದೇಶದಿಂದ ಭುವನೇಶ್ವರಕ್ಕೆ ತೆರಳುತ್ತಿದ್ದ ಒಡಿಶಾ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (OSRTC) ಬಸ್ ಹಾಗೂ ಬೆರ್ಹಾಮ್‌ಪುರ ಪ್ರದೇಶದ ಖಂಡೇಲಿ ಗ್ರಾಮದಲ್ಲಿ ಮದುವೆ ಸಮಾರಂಭ ಮುಗಿಸಿ ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಮೃತರೆಲ್ಲ ಖಾಸಗಿ ಬಸ್ನ ಪ್ರಯಾಣಿಕರಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗಂಜಾಮ್ ಜಿಲ್ಲಾಧಿಕಾರಿ ದಿಬ್ಯಜ್ಯೋತ್ ಪರಿದಾ, ಬ್ರಹ್ಮಪುರ ಎಸ್ಪಿ ಡಾ ಶ್ರವಣ್ ವಿವೇಕ್ ಎಂ ಮತ್ತು ಬ್ರಹ್ಮಪುರ ಉಪಜಿಲ್ಲಾಧಿಕಾರಿ ಅಶುತೋಷ್ ಕುಲಕರ್ಣಿ ಅವರು ಬ್ರಹ್ಮಪುರ ಎಂಕೆಸಿಜಿ ವೈದ್ಯಕೀಯ ಕೇಂದ್ರಕ್ಕೆ ಭೇಟಿ ನೀಡಿ ಗಾಯಾಳುಗಳ ಚಿಕಿತ್ಸೆ ಮತ್ತು ಇತರ ವ್ಯವಸ್ಥೆಗಳ ಬಗ್ಗೆ ವಿಚಾರಿಸಿದರು.
''ತಡರಾತ್ರಿ 1 ಗಂಟೆ ಸಮಯದಲ್ಲಿ ದಿಗ್ಪಹಂಡಿಯ ಗ್ರಾಮದ ಡೆಂಗೋಸ್ಟಾ ಎಂಬಲ್ಲಿ ಒಎಸ್‌ಆರ್‌ಟಿಸಿ ಬಸ್ ಮತ್ತು ಬೆರ್ಹಾಮ್‌ಪುರ ಪ್ರದೇಶದ ಖಂಡೇಲಿ ಗ್ರಾಮದಲ್ಲಿ ಮದುವೆ ಸಮಾರಂಭ ಮುಗಿಸಿ ಹಿಂದಿರುಗಿದ್ದ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಮೃತಪಟ್ಟ 12 ಮಂದಿ ಖಾಸಗಿ ಬಸ್‌ನಲ್ಲಿದ್ದವರು. ಅಲ್ಲದೇ, ಓರ್ವ ಬಸ್ ಚಾಲಕ ಸೇರಿ ಹಲವರು ಘಟನೆಯಲ್ಲಿ ಗಾಯಗೊಂಡಿದ್ದಾರೆ. ಮತ್ತೊಬ್ಬ ಬಸ್ ಚಾಲಕ ಘಟನಾ ಸ್ಥಳದಿಂದ ಪರಾರಿಗಯಾಗಿದ್ದಾನೆ. ಘಟನೆಯ ತನಿಖೆ ಮುಂದುವರಿದಿದೆ ಎಂದು ಬ್ರಹ್ಮಪುರದ ಪೊಲೀಸ್ ವರಿಷ್ಠಾಧಿಕಾರಿ ಡಾ.ಶ್ರವಣ್ ವಿವೇಕ್ ಎಂ ಅವರು ಹೇಳಿದ್ದಾರೆ.