ಜನರನ್ನು ಬೆಚ್ಚಿಬೀಳಿಸಿದ ಒಡಿಶಾ ಭೀಕರ ರೈಲು ದುರಂತ; ಅಪಘಾತಕ್ಕೆ ಕಾರಣ ಏನು...? ಪ್ರಾಥಮಿಕ ವರದಿಯಲ್ಲಿ ಏನಿದೆ ? ಇಲ್ಲಿದೆ ನೋಡಿ...
ಹೊಸದಿಲ್ಲಿ: ಒಡಿಶಾದಲ್ಲಿ ಶುಕ್ರವಾರ ಸಂಭವಿಸಿದ ಭಾರತದ ಇತಿಹಾಸದಲ್ಲೇ ಅತ್ಯಂತ ಘೋರ ರೈಲು ದುರಂತದಲ್ಲಿ ಉಂಟಾದ ಸಾವು-ನೋವಿನ ಭೀಕರತೆಗೆ ಜನ ಬೆಚ್ಚಿಬಿದ್ದಿದ್ದು, ಈ ಅಪಘಾತಕ್ಕೆ ಕಾರಣವೇನೆಂಬ ಬಗ್ಗೆ ತೀವ್ರ ಕುತೂಹಲ ಕಾಡುತ್ತಿದೆ.
ದುರಂತಕ್ಕೆ ಸಿಗ್ನಲಿಂಗ್ ದೋಷವೇ ಕಾರಣ ಎಂದು ಪ್ರಾಥಮಿಕ ವರದಿಯಲ್ಲಿ ಬಹಿರಂಗವಾಗಿದೆ. ಚೆನ್ನೈನತ್ತ ಹೊರಟಿದ್ದ 'ಶಾಲಿಮರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್' ರೈಲು, ಬಹನಾಗ ಬಜಾರ್ ರೈಲು ನಿಲ್ದಾಣದಲ್ಲಿ ಗೂಡ್ಸ್ ರೈಲು ನಿಂತಿದ್ದ 'ಲೂಪ್ ಲೈನ್'ಗೆ ಪ್ರವೇಶಿಸಿದ್ದೇ ಕಾರಣ.
ಅಪಘಾತ ಆಗಿದ್ದೇಗೆ?
ಕೋರಮಂಡಲ್ ಎಕ್ಸ್‌ಪ್ರೆಸ್‌ಗೆ ಬಹನಾಗ ನಿಲ್ದಾಣದಲ್ಲಿ'ಸ್ಟಾಪ್' ಇರಲಿಲ್ಲ. ಹೀಗಾಗಿ ಗಂಟೆಗೆ 127 ಕಿ.ಮೀ. ವೇಗದಲ್ಲಿ ಬರುತ್ತಿದ್ದ ರೈಲಿಗೆ ಗ್ರೀನ್ ಸಿಗ್ನಲ್ ನೀಡಲಾಯಿತು. ಆದರೆ, ಈ ವೇಳೆ ಈಗಾಗಲೇ ಗೂಡ್ಸ್ ರೈಲು ನಿಂತಿರುವ ಹಳಿಯ ಮೇಲೆ ರೈಲು ಚಲಿಸಿದೆ. ಹೀಗಾಗಿ ನಿಂತಿದ್ದ ಗೂಡ್ಸ್ ರೈಲಿಗೆ 'ಕೋರಮಂಡಲ್ ಎಕ್ಸ್‌ಪ್ರೆಸ್' ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ ಎಂಜಿನ್ ಗೂಡ್ಸ್ ರೈಲಿನ ಬೋಗಿಯ ಮೇಲೆ ಹತ್ತಿದರೆ, ಅದರ 13 ಬೋಗಿಗಳು ಹಳಿ ತಪ್ಪಿ ಚಲ್ಲಾಪಿಲ್ಲಿಯಾಗಿ ಉರುಳಿ ಬಿದ್ದಿವೆ. ಹಳಿ ತಪ್ಪಿದ ಬೋಗಿಗಳಲ್ಲಿ ಹಲವು ಬೋಗಿಗಳು ಪಕ್ಕದ ಹಳಿಯ ಮೇಲೂ ಉರುಳಿ ಬಿದ್ದಿವೆ. ಇದಾಗಿ ನಾಲ್ಕೇ ನಿಮಿಷದೊಳಗೆ 'ಹೌರಾ-ಯಶವಂತಪುರ' ರೈಲು ಸಹ ಅದೇ ನಿಲ್ದಾಣಕ್ಕೆ ಬಂದಿದೆ. ಪಕ್ಕದ ಹಳಿಯಿಂದ ಉರುಳಿ ಬಿದ್ದಿದ್ದ ಅಪಘಾತಗೊಂಡ ರೈಲಿನ ಬೋಗಿಗಳಿಗೆ ಹೌರಾ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ. ಇದರಿಂದ ಆ ರೈಲಿನ 3 ಬೋಗಿಗಳೂ ಉರುಳಿ ಬಿದ್ದಿವೆ.
ಈಗಾಗಲೇ ಗೂಡ್ಸ್ ರೈಲು ನಿಂತಿದ್ದ 'ಲೂಪ್ ಲೈನ್'ಗೆ ಕೋರಮಮಂಡಲ್ ಎಕ್ಸ್‌ಪ್ರೆಸ್ ಪ್ರವೇಶಿಸಲು ಸಿಗ್ನಲ್ ತಾಂತ್ರಿಕ ದೋಷ ಕಾರಣವೇ? ಅಥವಾ ಮಾನವ ದೋಷದಿಂದ ಇದು ಸಂಭವಿಸಿತೇ ಎಂಬುದು ಸ್ಪಷ್ಟವಾಗಿಲ್ಲ. 'ಮೇನ್ ಲೈನ್'ನಲ್ಲಿ ಸಾಗಲು ಹಸಿರು ನಿಶಾನೆ ತೋರಿ, ನಂತರ ಸಿಗ್ನಲ್ ಆಫ್ ಆಗಿದೆ. ಆದರೆ, ಶರವೇಗದಲ್ಲಿದ್ದ ರೈಲು ಅಷ್ಟರಲ್ಲಿ'ಲೂಪ್ ಲೈನ್'ಗೆ ಪ್ರವೇಶಿಸಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ, 'ಲೂಪ್ ಲೈನ್'ಗೆ ಹಸಿರು ಸಿಗ್ನಲ್ ತಡೆಯಲು ಕೊನೆ ಕ್ಷಣದಲ್ಲಿ ಯತ್ನಿಸಿದರೂ ಅಷ್ಟರಲ್ಲಿ ಸಮಯ ಮೀರಿತ್ತು. ಅಸಿಸ್ಟೆಂಟ್ ಸ್ಟೇಷನ್ ಮಾಸ್ಟರ್ ನಿರ್ಲಕ್ಷ್ಯವೂ ಇದಕ್ಕೆ ಕಾರಣವೆಂದು ಆರೋಪ ಕೇಳಿಬಂದಿದೆ.
ಬಹನಾಗ್ ರೈಲು ನಿಲ್ದಾಣದಲ್ಲಿ ನಾಲ್ಕು ಹಳಿಗಳಿವೆ. ಈ ಪೈಕಿ ಎರಡು 'ಲೂಪ್‌ಲೈನ್' ಮತ್ತು ಎರಡು 'ಮೇನ್ ಲೈನ್'. 'ಲೂಪ್ ಲೈನ್' ಎಂದರೆ, ನಿಲ್ದಾಣದಲ್ಲಿ ರೈಲುಗಳ ಸುಗಮ ಓಡಾಟಕ್ಕೆ ಅನುವು ಮಾಡಿಕೊಡಲು ನಿರ್ಮಿಸಲಾಗುವ ಹೆಚ್ಚುವರಿ ಹಳಿ. ಅದು ಸ್ಟೇಷನ್ ವ್ಯಾಪ್ತಿ ಮುಗಿದ ಬಳಿಕ ಮತ್ತೆ 'ಮೇನ್ ಲೈನ್'ಗೆ ಸೇರ್ಪಡೆಯಾಗುತ್ತದೆ. ಎಕ್ಸ್‌ಪ್ರೆಸ್ ರೈಲುಗಳಿಗೆ ಜಾಗ ಮಾಡಿಕೊಡಲು ಪ್ಯಾಸೆಂಜರ್ ರೈಲು ಅಥವಾ ಗೂಡ್ಸ್ ರೈಲುಗಳನ್ನು 'ಲೂಪ್ ಲೈನ್'ನಲ್ಲಿ ನಿಲ್ಲಿಸಲಾಗುತ್ತದೆ. 'ಮೇನ್ ಲೈನ್'ನಲ್ಲಿಎಕ್ಸ್‌ಪ್ರೆಸ್ ರೈಲುಗಳು ಸಾಗಲು ಅವಕಾಶ ಮಾಡಿಕೊಡಲಾಗುತ್ತದೆ. ಇಲ್ಲೂಸಹ ಹಾಗೆಯೇ ಮಾಡಲಾಗಿತ್ತು. ಸಾಮಾನ್ಯವಾಗಿ 'ಲೂಪ್ ಲೈನ್' ಉದ್ದ 750 ಮೀಟರ್ ಇರುತ್ತದೆ. ಆದರೆ, ಬಹನಾಗ್ ಸ್ಟೇಷನ್‌ನಲ್ಲಿ ನಿಂತಿದ್ದ ಗೂಡ್ಸ್ ರೈಲಿನ ಕೊನೆಯ ಎರಡು ಬೋಗಿಗಳು 'ಲೂಪ್ ಲೈನ್'ಗಿಂತ ಹಿಂದಕ್ಕೆ 'ಮೇನ್ ಲೇನ್' ಮೇಲೆ ನಿಂತಿದ್ದವು. ಹೀಗಾಗಿ ಮೇನ್ ಲೇನ್‌ನಲ್ಲಿ ಬಂದ ಕೋರಮಂಡಲ್ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದಿದೆ ಎಂದೂ ವಿಶ್ಲೇಷಿಸಲಾಗಿದೆ.
ಖರಗ್‌ಪುರ ವಿಭಾಗದ ನಾಲ್ವರು ಹಿರಿಯ ರೈಲ್ವೆ ಅಧಿಕಾರಿಗಳಾದ ಜೆ.ಎನ್. ಸುಬುದ್ಧಿ, ಆರ್.ಕೆ. ಬ್ಯಾನರ್ಜಿ, ಆರ್.ಕೆ. ಪಂಜಿರಾ ಮತ್ತು ಎ.ಕೆ. ಮೊಹಂತು ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ ಬಳಿಕ ಈ ಪ್ರಾಥಮಿಕ ವರದಿ ನೀಡಿದ್ದಾರೆ.