ಪ್ರಶಾಂತ್ ಸಂಬರ್ಗಿ ವಿರುದ್ಧ ಎಫ್ ಐಆರ್; ಮಾಡಿರುವ ವಂಚನೆ ಏನು ಗೊತ್ತೇ...?
ಬೆಂಗಳೂರು: ಸದಾ ಒಂದಲ್ಲ ಒಂದು ವಿವಾದಗಳಿಂದ ಪ್ರಚಾರದಲ್ಲಿರುವ ಬಿಗ್ ಬಾಸ್ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ವಿರುದ್ಧ ವಂಚನೆ ಆರೋಪದ ಮೇರೆಗೆ ಎಫ್ ಐಆರ್ ದಾಖಲಾಗಿದೆ. ಉದ್ಯಮಿ ದೇವನಾತ್ ವೈಕ್ಯೆ ನೀಡಿದ ದೂರಿನ ಆಧಾರದ ಮೇಲೆ ಪ್ರಶಾಂತ್ ವಿರುದ್ಧ ಸುಳ್ಳು ದೂರು ದಾಖಲಿಸಿ ವಂಚಿಸಿದ ಆರೋಪದ ಮೇರೆಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
2017ರ ಜುಲೈನಲ್ಲಿ ದೇವನಾತ್ ಅವರು ಸಂಬರಗಿಯಿಂದ ಸಾಲ ಪಡೆದಿದ್ದರು. ಮನೆಯ ಅಸಲಿ ದಾಖಲೆ, ಖಾಲಿ ಚೆಕ್ ಕೊಟ್ಟು ಶ್ಯೂರಿಟಿ ನೀಡಿದ್ದರು. ಬಳಿಕ 2017ರ ಡಿಸೆಂಬರ್‌ನಲ್ಲಿ ಪ್ರಶಾಂತ್ಗೆ ದೇವನಾಥ್ ಹಣ ವಾಪಸ್ ನೀಡಿದ್ದರು. ಆದರೆ ಹೆಚ್ಚಿನ ಬಡ್ಡಿ ಹಣ ನೀಡಬೇಕೆಂದು ಮನೆ ದಾಖಲೆ ನೀಡದೆ ಸಂಬರ್ಗಿ ಸತಾಯಿಸಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ವಿವಿಧ ಠಾಣೆಯಲ್ಲಿ ದೇವನಾತ್ ವಿರುದ್ಧ ಸುಳ್ಳು ದೂರು ನೀಡಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರು ಸದ್ಯ ಸುಳ್ಳು ದೂರು ಹಿನ್ನೆಲೆ ಸಂಬರ್ಗಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚಿಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಪರ ಪ್ರಚಾರಕ್ಕಾಗಿ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅವರು ಕಥೆ ಕೇಳಲ್ಲ, ದುಡ್ಡು ತಗೊಂಡು ಚಿತ್ರ ಮಾಡ್ತಾರೆ ಅಂತಾ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಅವರ ಅಭಿಮಾನಿಗಳ ಕೆಂಗಣ್ಣಿಗೆ ಸಂಬರ್ಗಿ ಗುರಿಯಾಗಿದ್ದರು. ಅಲ್ಲದೇ ಜೆಡಿಎಸ್ ಪಕ್ಷದ ನಾಯಕರಾದ ಹೆಚ್ ಡಿ ದೇವೇಗೌಡ ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರ ಕುರಿತು ಟೀಕೆಯಿಂದಾಗಿಯೂ ಸುದ್ದಿಯಲ್ಲಿದ್ದರು.