ಗೋಲೀಬಾರ್ ! ಮರ್ಹೂಮ್ ಜಲೀಲ್'ರವರ ಮಕ್ಕಳ ಭವಿಷ್ಯ ರೂಪಿಸಿದ ಮಹಾನುಭಾವರು!!

ಗೋಲೀಬಾರ್ ! ಮರ್ಹೂಮ್ ಜಲೀಲ್'ರವರ ಮಕ್ಕಳ ಭವಿಷ್ಯ ರೂಪಿಸಿದ ಮಹಾನುಭಾವರು!!

-ಡಿ.ಐ. ಅಬೂಬಕರ್ ಕೈರಂಗಳ 

ಸುಮಾರು ನಾಲ್ಕು ವರ್ಷಗಳ ಹಿಂದೆ ಮಂಗಳೂರು ಪೋಲೀಸರು ಅನ್ಯಾಯವಾಗಿ ಗೋಲೀಬಾರ್ ಹೆಸರಲ್ಲಿ ಗುಂಡಿಕ್ಕಿ ಕೊಂದ ಮರ್ಹೂಮ್ ಜಲೀಲ್ ಅವರ  ಮಗಳು ಖದೀಜಾ ಶಿಫಾನಿ ಇಂದು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ!

ಅರೆ! ಜಲೀಲ್'ರವರು ಅಷ್ಟು ದೊಡ್ಡ ಶ್ರೀಮಂತರಾಗಿದ್ದರಾ? ಮಗಳಿಗೆ ಮೆಡಿಕಲ್ ಸೀಟು ಕೊಡಿಸುವಂತಹ  ಕೋಟಿಪತಿಯಾಗಿದ್ದರಾ?   ಎಂದು ಹುಬ್ಬೇರಿಸಬೇಡಿ.

ಮರ್ಹೂಮ್ ಜಲೀಲ್ ಕಡುಬಡವರಾಗಿದ್ದರು. ಯಾವುದೇ ತರ್ಲೆಗೆ ಇಳಿಯದ ಮುಗ್ದ, ನಿರಪರಾಧಿ ವ್ಯಕ್ತಿ. ಅಂದು ಅವರು ಪ್ರತಿಭಟನೆಯಲ್ಲಿ ಭಾಗಿಯಾಗಿರಲಿಲ್ಲ. ಏನು ಪ್ರತಿಭಟನೆ ಅಂತ ಕುತೂಹಲದಿಂದ ನೋಡುತ್ತಾ ನಿಂತಿದ್ದವರು. ಪೊಲೀಸರ ಅಪ್ರಚೋದಿತ ಗುಂಡಿಗೆ ಅನ್ಯಾಯವಾಗಿ ಕೊಲೆಯಾಗಿದ್ದರು. 

ಯು.ಟಿ.ಕಾದರ್ ಮತ್ತು ಅವರ ಸಹೋದರ ಡಾ. ಇಫ್ತಿಖಾರ್ ಹಾಗೂ ವೈ. ಅಬ್ದುಲ್ಲ ಕುಞ್ಞಿಯವರಂತಹ  ಹೃದಯ ಕೋಟಿಪತಿಗಳು ಇದ್ದರೆ ಬಡವರ ಮಕ್ಕಳು ಕೂಡಾ ಡಾಕ್ಟರಾಗಬಹುದು ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆ.  

ಅಂದು ಮನೆಯ ಯಜಮಾನ ಹತ್ಯೆಯಾಗಿ ದಿಕ್ಕಿಲ್ಲದೆ ಕಂಗಾಲಾಗಿ ಕೂತಿದ್ದ ಆ ಮನೆಗೆ ಭೇಟಿ ನೀಡಿದ್ದ ಯು. ಟಿ. ಕಾದರ್ ಹಾಗೂ ಸಹೋದರ ಡಾ. ಇಫ್ತಿಖಾರ್ ಮತ್ತು ಯೇನಪೋಯ ವೈ. ಅಬ್ದುಲ್ಲ ಕುಞ್ಞಿ ಎಂಬೀ ಮಹನೀಯರು ಅನಾಥರಾಗಿ ಕಣ್ಣೀರು ಸುರಿಸುತ್ತಿದ್ದ ಈ ಮಕ್ಕಳ ಕಣ್ಣೀರೊರೆಸಿ, ಸಾಂತ್ವನದ ಭರವಸೆ ನೀಡಿ ಮುಂದಿನ ಶಿಕ್ಷಣದ ಹೊಣೆ ವಹಿಸಿಕೊಂಡು ಭರವಸೆ ನೀಡಿದ್ದರು. ಕಂದಕ್ ಸುನ್ನೀ ಮುಸ್ಲಿಮ್ ಜಮಾಅತ್ ಸ್ಥಾಪಕಾಧ್ಯಕ್ಷರಾದ ಇಚ್ಚು ಯಾನೆ ಅರ್ಷದ್ ಕಂದಕ್ ರವರ ಸಹಕಾರ ಕೂಡಾ ಇದರಲ್ಲಿತ್ತು. 

ದುರಂತದ ಸಮಯದಲ್ಲಿ ಗಣ್ಯರು ನೀಡುವ ಆಶ್ವಾಸನೆ ತಮ್ಮ ಪಬ್ಲಿಸಿಟಿ ಮಾತ್ರವಾಗುವುದೇ ಹೊರತು ಕಾರ್ಯರೂಪಕ್ಕೆ ಬರುವುದು ಅಪರೂಪ. ಆದರೆ ಈ ಗಣ್ಯರು ನೀಡಿದ್ದು ತಮ್ಮ ಪಬ್ಲಿಸಿಟಿಗೆ ನೀಡಿದ್ದ ಆಶ್ವಾಸನೆಯಾಗಿರಲಿಲ್ಲ. ಪಬ್ಲಿಕ್ಕಾಗಿ ಅದನ್ನು ಹೇಳಿರಲೂ ಇಲ್ಲ. ಅವರು ನೀಡಿದ್ದು ಆ ಕುಟುಂಬದ ದಯನೀಯ ಅವಸ್ಥೆ ಹಾಗೂ ತಂದೆಯವರನ್ನು ಕಳಕೊಂಡು ದುಃಖದ ಮಡುವಿನಲ್ಲಿ ಬಿದ್ದಿದ್ದ ಆ ಅನಾಥ ಮಕ್ಕಳ ಪರಿಸ್ಥಿತಿಯನ್ನು ಕಂಡು ಈ ಕುಟುಂಬಕ್ಕೆ ಆಸರೆ ನೀಡಲೇ ಬೇಕು ಎಂಬ ಅಂತಃಕರಣ ಪೂರ್ವಕವಾದ ಭರವಸೆಯಾಗಿತ್ತು. 

ಸಾಂದರ್ಭಿಕವಾಗಿ ಡಾ. ಇಫ್ತಿಖಾರ್ ರವರ ಬಗ್ಗೆ ಇಲ್ಲಿ ಉಲ್ಲೇಖಿಸಬೇಕೆನಿಸುತ್ತಿದೆ. ಕರ್ನಾಟಕ ಮುಸಲ್ಮಾನರ ಹೆಮ್ಮೆಯ ಪುತ್ರನಾಗಿ ಇದೀಗ ಕರ್ನಾಟಕ ವಿಧಾನ ಸಭೆಯ ಮೊಟ್ಟ ಮೊದಲ ಮುಸ್ಲಿಮ್ ಸ್ಪೀಕರ್ ಎಂಬ ಇತಿಹಾಸ ದಾಖಲಿಸಿರುವ ಯು. ಟಿ. ಕಾದರ್ ಅವರ ಖಾಸಾ ಸಹೋದರನಾಗಿರುವ ಡಾ. ಇಫ್ತಿಖಾರ್ ಅವರು ನಿಸ್ವಾರ್ಥ ಭಾವದಿಂದ ಜನ ಸೇವೆ ಮಾಡುತ್ತಾ ಬಂದಿರುತ್ತಾರೆ. ಯು. ಟಿ‌. ಕಾದರ್ ರವರ ವಿಜಯಗಾಥೆಯಲ್ಲಿ ಉದ್ದಕ್ಕೂ  ಇವರ ಮುಖ್ಯ ಪಾತ್ರವಿದೆ. ಅವರ ಬೆನ್ನೆಲುಬಾಗಿ ದುಡಿಯುತ್ತಾ ಬಂದ ವ್ಯಕ್ತಿಯಾಗಿದ್ದಾರೆ. ಆದರೆ ಡಾ. ಇಫ್ತಿಖಾರ್ ರವರ ವಿಶೇಷತೆಯೇನೆಂದರೆ ತಾನು ಎಲೆಮರೆಯ ಕಾಯಿಯಾಗಿ ಇರ ಬಯಸುವುದು. ಸಮಾರಂಭಗಳ ಎಲ್ಲಾ ಜವಾಬ್ಧಾರಿಗಳನ್ನು ಹೊತ್ತುಕೊಂಡು ಅಚ್ಚುಕಟ್ಟಾಗಿ ಮಾಡಿಸುವ ಇವರು ದಮ್ಮಯ್ಯ ಹಾಕಿದರೂ ವೇದಿಕೆ ಹತ್ತುವುದಿಲ್ಲ. ತನ್ನನ್ನು ಎಲ್ಲೂ ಯಾವುದರಲ್ಲೂ ಫೋಕಸ್ ಮಾಡಲು ಇಚ್ಛಿಸುವುದಿಲ್ಲ. ಸಹೋದರ  ಶಾಸಕ, ಸಚಿವ ಸ್ಥಾನದಲ್ಲಿರುವ ಪ್ರಭಾವೀ ನಾಯಕ ಯು. ಟಿ.ಕೆಯ ಸಹೋದರ ಎಂಬುದನ್ನು ಎಲ್ಲೂ ತೋರ್ಪಡಿಸಲಿಲ್ಲ.  ಸರಕಾರೀ ಅಧಿಕಾರಿಗಳು, ಪೊಲೀಸ್ ಇಲಾಖೆ ಮುಂತಾದ ಕಡೆಗಳಲ್ಲಾಗಲಿ, ಸಾರ್ವಜನಿಕರೆದುರಾಗಲಿ ಅಂತಹ ತಲೆಭಾರ ತೋರಿಸಿಕೊಂಡವರಲ್ಲ. ನಿಸ್ವಾರ್ಥವಾಗಿ, ಪ್ರಾಮಾಣಿಕವಾಗಿ ಜನಸೇವೆ ಮಾಡುತ್ತಾ ಬಂದವರು.  

ಪ್ರಸ್ತುತ ಗಣ್ಯರು ಕೊಟ್ಟಿದ್ದ ಮಾತಿನ ಹಾಗೆ ಅವರು ಕೊಡಿಸಿದ್ದ ಫ್ರೀ ಸೀಟಿನಲ್ಲಿ ಮರ್ಹೂಮ್ ಜಲೀಲ್ ರವರ ಮಗಳು  ಇದೀಗ ಮೆಡಿಕಲ್ ಶಿಕ್ಷಣ  ವಿಭಾಗದ BNYS ಕೋರ್ಸ್ ಪೂರ್ತಿ ಮಾಡುವ ಹಂತದಲ್ಲಿದ್ದಾರೆ. ಮತ್ತೊಬ್ಬ ಮಗ ಮುಹಮ್ಮದ್ ಸಬೀಲ್ ಒಂಭತ್ತನೆಯ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಇಬ್ಬರೂ ಮಕ್ಕಳ ಶೈಕ್ಷಣಿಕ ವೆಚ್ಚವನ್ನೆಲ್ಲ ಈ ಮಹನೀಯರೇ ಭರಿಸಿ ಮಗಳಿಗೆ ಉಚಿತವಾಗಿ ಮೆಡಿಕಲ್ ಸೀಟು ಕೊಡಿಸಿದ್ದಾರೆ. ಇಬ್ಬರು ಮಕ್ಕಳೂ ಉತ್ತಮ ಅಂಕ ಪಡೆಯುತ್ತಾ ಬಂದಿರುವುದು ಪ್ರಾಯೋಜಕರಿಗೆ ಖುಶಿ ತಂದಿದೆ. ಪ್ರೋತ್ಸಾಹ, ಉತ್ತೇಜನ ದೊರೆತರೆ ಶಿಕ್ಷಣದಲ್ಲಿ ಮುಂದೆ ಬರುವ ಪ್ರತಿಭಾವಂತರು ಬಡವರ ಮಕ್ಕಳಲ್ಲಿ ಇದ್ದಾರೆನ್ನುವುದಕ್ಕೆ ಇದು ಸಾಕ್ಷಿ.

ಸಣ್ಣ ಪುಟ್ಟ ಕಾರ್ಯ ಮಾಡಿ ಅದನ್ನು ತಮ್ಮ ರಾಜಕೀಯ ಉದ್ದೇಶಕ್ಕೆ ಫೋಕಸ್ ಮಾಡಿಸುತ್ತಿರುವ ನಾಯಕರ ಮುಂದೆ ಇಂತಹ ವಿಷಯಗಳಲ್ಲಿ ಯು. ಟಿ‌‌. ಕಾದರ್ ವಿಭಿನ್ನ, ಅಪರೂಪದ ನಾಯಕರಾಗಿ ಮಿಂಚುತ್ತಿದ್ದಾರೆ. ಅವರು ಮಾಡುತ್ತಿರುವ ಸಮಾಜ ಸೇವೆಯನ್ನು ಎತ್ತಿ ಹೇಳುವುದಿಲ್ಲ, ಹೇಳಿಸುವುದೂ ಇಲ್ಲ. ಡಾ. ಇಫ್ತಿಖಾರ್ ಅಲಿ ಕೂಡಾ ಸಹೋದರನ ಅದೇ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. 

ಈ ಇಬ್ಬರು ಅಣ್ಣ ತಮ್ಮಂದಿರು ಕರ್ನಾಟಕದ ಪ್ರಜೆಗಳ ಪಾಲಿಗೆ ದೊರೆತ ಎರಡು ಅಮೂಲ್ಯ ರತ್ನಗಳು. ದುರಂತದ ಸಂತ್ರಸ್ತರಿಗೆ ಹಲವರು ಹಲವು ವಿಧಗಳಲ್ಲಿ ಸಹಕಾರ ನೀಡುವುದು ಸ್ವಾಭಾವಿಕ. ಅಂದು ಮಂಗಳೂರಿನ ಕಂದಕ್ ಎಂಬಲ್ಲಿ  ಜಲೀಲರ ಕುಟುಂಬಕ್ಕೂ ಅನೇಕರು ಸಹಾಯ ಮಾಡಿರಬಹುದು. ಅವರ ಸಹಕಾರ ಅವರ ಕೈಲಾಗುವ ಸಹಕಾರವಾದುದರಿಂದ ಅದೂ ಕೂಡಾ ಅಮೂಲ್ಯ ಸಹಕಾರಗಳು. ಅದನ್ನು ತುಚ್ಛೀಕರಿಸುವಂತಿಲ್ಲ. ಆದರೆ ತತ್ಕಾಲಕ್ಕೆ ದೊರೆಯುವ ಅಂತಹ ಸಹಕಾರಗಳಿಗಿಂತ ಮಕ್ಕಳಿಗೆ ಶಿಕ್ಷಣ ಕೊಡಿಸುವ ಸಹಕಾರ ಅತ್ಯಂತ ಅಮೂಲ್ಯವಾದುದು. ಆ ಮಕ್ಕಳು ಮುಂದೆ ಸ್ವಾವಲಂಬಿಯಾಗಿ ಬದುಕುವುದಲ್ಲದೆ ಅವರ  ಮಕ್ಕಳೂ ಕುಟುಂಬವೂ   ಕೂಡಾ ಭದ್ರ ನೆಲೆ ಕಾಣುತ್ತಾರೆ. ಇಂತಹ ನೆಲೆ ಒದಗಿಸಿದ  ಯೇನೆಪೋಯ ವೈ. ಅಬ್ದುಲ್ಲ ಕುಞ್ಞಿ, ಡಾ. ಇಫ್ತಿಕಾರ್ ಹಾಗೂ ಯು. ಟಿ. ಕಾದರ್ ಅವರಿಗೆ ಇಡೀ ಸಮಾಜದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಾ ಜಗದೊಡೆಯನು ಇವರಿಗೆ ಆಯುರಾರೋಗ್ಯ ಕರುಣಿಸಲೆಂದು ಪ್ರಾರ್ಥಿಸುತ್ತಿದ್ದೇನೆ.

Ads on article

Advertise in articles 1

advertising articles 2

Advertise under the article