ಬಿಹಾರದಲ್ಲಿ 14 ವರ್ಷದ ಬಾಲಕನನ್ನು ಕೊಂದು ತಿಂದ ಮೊಸಳೆ; ರೊಚ್ಚಿಗೆದ್ದ ಗ್ರಾಮಸ್ಥರು ಮಾಡಿದ್ದೇನು..?

ಬಿಹಾರದಲ್ಲಿ 14 ವರ್ಷದ ಬಾಲಕನನ್ನು ಕೊಂದು ತಿಂದ ಮೊಸಳೆ; ರೊಚ್ಚಿಗೆದ್ದ ಗ್ರಾಮಸ್ಥರು ಮಾಡಿದ್ದೇನು..?

ಪಾಟ್ನಾ: 14 ವರ್ಷದ ಬಾಲಕನನ್ನು ಹೊತ್ತೊಯ್ದು ಕೊಂದು ಹಾಕಿದ್ದ ಮೊಸಳೆಯನ್ನು ಗ್ರಾಮಸ್ಥರು ಹೊಡೆದುಕೊಂದು ಹಾಕಿದ ಘಟನೆ ಬಿಹಾರದಲ್ಲಿ ನಡೆದಿದೆ.

ಬಿಹಾರದ ವೈಶಾಲಿ ಜಿಲ್ಲೆಯ ರಾಘೋಪುರದಲ್ಲಿ ಈ ಘಟನೆ ನಡೆದಿದ್ದು, 14 ವರ್ಷದ ಬಾಲಕ 5ನೇ ತರಗತಿ ವಿದ್ಯಾರ್ಥಿ ಅಂಕಿತ್ ಕುಮಾರ್ ಹೊಸ ಮೋಟಾರ್ ಸೈಕಲ್ ಖರೀದಿಸಿದ ಸಂಭ್ರಮದಲ್ಲಿ ಗಂಗಾನದಿ ಸ್ನಾನ ಮಾಡಿ ಗಂಗಾಜಲ ಪಡೆಯಲು ಹೋಗಿದ್ದ. ಕುಟುಂಬದವರು ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಮೊಸಳೆ ಅಂಕಿತ್ ಮೇಲೆ ದಾಳಿ ಮಾಡಿ ನೀರಿನ ಕೆಳಗೆ ಎಳೆದೊಯ್ದು ತುಂಡರಿಸಿ ಜೀವಂತವಾಗಿ ತಿಂದು ಹಾಕಿದೆ.

ಸತತ ಒಂದು ಗಂಟೆಗಳ ಹೋರಾಟದ ಮತ್ತು ಶೋಧದ ಹೊರತಾಗಿಯೂ ಬಾಲಕ ಅಂಕಿತ್ ಪತ್ತೆಯಾಗಲ್ಲಿಲ್ಲ. ಅಂತಿಮವಾಗಿ ಬಾಲಕ ಅಳಿದುಳಿದ ಮೃತದೇಹ ಕುಟುಂಬಸ್ಥರಿಗೆ ದೊರೆತಿದೆ. ಅಷ್ಟು ಹೊತ್ತಿಗಾಗಲೇ ಈ ವಿಚಾರ ಕಾಡ್ಗಿಚ್ಚಿನಂತೆ ಗ್ರಾಮಸ್ಥರಿದೆ ತಿಳಿದಿದ್ದು, ಘಟನಾ ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು ನೀರಿನಲ್ಲಿ ಇದ್ದ ಮೊಸಳೆಯನ್ನು ಹೊರಗೆ ಎಳೆತಂದು ಸಾಮೂಹಿಕವಾಗಿ ದೊಣ್ಣೆ ಮತ್ತು ರಾಡ್ ಗಳಿಂದ ಹೊಡೆದು ಕೊಂದು ಹಾಕಿದ್ದಾರೆ.

ಗ್ರಾಮಸ್ಥರ ದಾಳಿಯನ್ನು ಸ್ಥಳೀಯರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗಿದೆ.

ನಡೆದ ಭೀಕರತೆಯನ್ನು ವಿವರಿಸಿದ ಬಾಲಕ ಅಂಕಿತ್ ನ ಅಜ್ಜ ಸಕಲದೀಪ್ ದಾಸ್ ಅವರು, "ನಾವು ಹೊಸ ಮೋಟಾರ್‌ಸೈಕಲ್ ಖರೀದಿಸಿದ್ದೆವು. ಅದಕ್ಕೆ ಪೂಜೆ ಮಾಡಲು ಅದನ್ನು ತೊಳೆದು ಗಂಗಾಜಲವನ್ನು ಪೂಜೆಗೆಂದು ತರಲು ಗಂಗಾ ನದಿಗೆ ಹೋಗಿದ್ದೆವು. ಈ ವೇಳೆ ಸ್ನಾನ ಮಾಡುತ್ತಿದ್ದ ಮೊಮ್ಮಗನನ್ನು ಮೊಸಳೆಯು ಎಳೆದುಕೊಂಡು ಹೋಯಿತು. ಸತತ ಪ್ರಯತ್ನಗಳ ಹೊರತಾಗಿಯೂ ಅಂಕಿತ್ ನನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಗ್ರಾಮಸ್ಥರ ಸಹಾಯದಿಂದ ಮೊಸಳೆಯನ್ನು ಹೊಡೆದುಕೊಲ್ಲಲಾಗಿದೆ. ಮುಂದೆ ಯಾರಿಗೂ ಇಂತಹ ಘಟನೆಯಾಗಬಾರದು ಎಂದು ಕಣ್ಣೀರು ಹಾಕಿದ್ದಾರೆ. 

ಇನ್ನು ಈ ವಿಚಾರದ ಬಗ್ಗೆ ಮಾತನಾಡಿರುವ ವೈಶಾಲಿ ಜಿಲ್ಲೆಯ ಡಿಎಫ್‌ಒ ಅಮಿತಾ ರಾಜ್ ಅವರು, 'ಮೊಸಳೆಯನ್ನು ಕೊಂದಿರುವ ಬಗ್ಗೆ ನಮಗೆ ಮಾಹಿತಿ ಬಂದಿದೆ. ಕಾರಣ ಇನ್ನೂ ತಿಳಿದುಬಂದಿಲ್ಲ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

 

Ads on article

Advertise in articles 1

advertising articles 2

Advertise under the article