ಗ್ಯಾರಂಟಿಗಳ ಭರವಸೆ ನೀಡುವಾಗ ನಿಮ್ಮ ತಲೆಯಲ್ಲಿ ಮೆದುಳು ಇರಲಿಲ್ಲವೇ, ಸಗಣಿ ತುಂಬಿತ್ತೆ: ಶೋಭಾ ಕರಂದ್ಲಾಜೆ
ಚಿಕ್ಕಮಗಳೂರು: ‘ಗ್ಯಾರಂಟಿಗಳ ಭರವಸೆ ನೀಡುವಾಗ ನಿಮ್ಮ ತಲೆಯಲ್ಲಿ ಮೆದುಳು ಇರಲಿಲ್ಲವೇ, ಸಗಣಿ ತುಂಬಿತ್ತೆ’ ಎಂದು ಕಾಂಗ್ರೆಸ್ ನಾಯಕರನ್ನು ಕೇಂದ್ರ ಕೃಷಿ ಸಚಿವ ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.
‘ಕೇಂದ್ರ ಸರ್ಕಾರ ಅಕ್ಕಿ ದಾಸ್ತಾನಿಟ್ಟುಕೊಂಡಿರುವುದು ತುರ್ತು ಸಂದರ್ಭಕ್ಕಾಗಿಯೇ ಹೊರತು ಕರ್ನಾಟಕಕ್ಕೆ ನೀಡಲು ಅಲ್ಲ. ಪ್ರವಾಹ, ಬರ, ಸಂಕ್ರಾಮಿಕ ರೋಗಗಳ ರೀತಿಯ ಆಪತ್ತಿನ ಸಂದರ್ಭವನ್ನು ನಿಭಾಯಿಲು ಅಕ್ಕಿ ದಾಸ್ತಾನಿಟ್ಟುಕೊಳ್ಳಲಾಗಿದೆ. ಬೇರೆ ರಾಜ್ಯಗಳಿಂದ ಅಥವಾ ರಾಜ್ಯದ ರೈತರು ಬೇರೆ ರಾಜ್ಯಕ್ಕೆ ಮಾರಾಟ ಮಾಡುತ್ತಿರುವ ಅಕ್ಕಿಯನ್ನು ರಾಜ್ಯ ಸರ್ಕಾರ ಖರೀದಿಸಿ ಪಡಿತರದಾರರಿಗೆ ವಿತರಿಸಲಿ’ ಎಂದರು.
ಒಂದೇ ತಿಂಗಳಲ್ಲಿ ರಾಜ್ಯದಲ್ಲಿ ಅರಾಜಕತೆ ಉಂಟಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇಜವಾಬ್ದಾರಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಕಡೆಗೆ ಬೊಟ್ಟು ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಗ್ಯಾರಂಟಿ ಹೆಸರಿನಲ್ಲಿ ಮತ ಪಡೆದಿರುವ ಸಿದ್ದರಾಮಯ್ಯಗೆ ಆಡಳಿತ ನಡೆಸುವ ಯೋಗ್ಯತೆ ಇಲ್ಲ. ಗ್ಯಾರಂಟಿಗಳನ್ನು ಘೋಷಣೆ ಮಾಡಿದಾಗಲೇ ಹಣ ಎಲ್ಲಿ ತರುತ್ತೀರಿ ಎಂದು ನಾವು ಪ್ರಶ್ನೆ ಮಾಡಿದ್ದೆವು. ಜನರ ಮೂಗಿಗೆ ತುಪ್ಪ ಸವರಿ ಮತ ಪಡೆದು ಈಗ ಮೋಸ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಕೊಡುತ್ತಿರುವ 5 ಕೆ.ಜಿ ಬಿಟ್ಟು ಹೆಚ್ಚುವರಿಯಾಗಿ 10 ಕೆ.ಜಿ ವಿತರಿಸಬೇಕು ಎಂದು ಅವರು ಆಗ್ರಹಿಸಿರು.