ಮಣಿಪುರ ಹಿಂಸಾಚಾರ; ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆದಿರುವ ಸರ್ವಪಕ್ಷ ಸಭೆಯು ತುಂಬಾ ತಡವಾಗಿದೆ-ಅತ್ಯಂತ ಸಣ್ಣ ಕ್ರಮ: ಕಾಂಗ್ರೆಸ್
ನವದೆಹಲಿ: ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಕರೆದಿರುವ ಸರ್ವಪಕ್ಷ ಸಭೆಯು "ತುಂಬಾ ತಡವಾಗಿದೆ ಮತ್ತು ಅತ್ಯಂತ ಸಣ್ಣ ಕ್ರಮ" ಎಂದು ಕಾಂಗ್ರೆಸ್ ಗುರುವಾರ ಟೀಕಿಸಿದೆ.
ಮಣಿಪುರ ಹಿಂಸಾಚಾರ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕಿತ್ತು ಎಂದು ಇಡೀ ರಾಷ್ಟ್ರ ನಿರೀಕ್ಷಿಸುತ್ತಿರುವುದಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.
ಮಣಿಪುರದಲ್ಲಿ ಶಾಂತಿಗಾಗಿ ಕೇಂದ್ರ ಸರ್ಕಾರ ಯಾವುದೇ ಗಂಭೀರ ಪ್ರಯತ್ನ ನಡೆಸಿಲ್ಲ. ಅಲ್ಲಿ ಹೋರಾಡುತ್ತಿರುವ ಸಮುದಾಯಗಳನ್ನು ಕೇಂದ್ರ ಸರ್ಕಾರ ಮಾತುಕತೆಗೆ ಕರೆದು ರಾಜಕೀಯ ಪರಿಹಾರ ಕಂಡುಕೊಳ್ಳಬೇಕಿತ್ತು. ಈ ಪ್ರಯತ್ನವನ್ನು ದೆಹಲಿಯಲ್ಲಿ ಕುಳಿತು ಮಾಡಿದರೆ ಗಂಭೀರತೆಯ ಕೊರತೆ ಎದ್ದು ಕಾಣುತ್ತದೆ" ಎಂದು ವೇಣುಗೋಪಾಲ್ ಟ್ವೀಟ್ ಮಾಡಿದ್ದಾರೆ.
ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದು 50 ದಿನಗಳ ನಂತರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸರ್ವಪಕ್ಷ ಸಭೆಗೆ ಕರೆದಿರುವುದು ತುಂಬಾ ತಡವಾಗಿ ಮತ್ತು ಸಣ್ಣ ಕ್ರಮ ಎಂದು ಅವರು ಹೇಳಿದ್ದಾರೆ.
ಜೂನ್ 24 ರಂದು ಮಣಿಪುರದ ಪರಿಸ್ಥಿತಿ ಕುರಿತು ಅಮಿ ಶಾ ಸರ್ವಪಕ್ಷ ಸಭೆ ಕರೆದಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರ ಮೌನವನ್ನು ಪ್ರಶ್ನಿಸಿದ್ದಾರೆ ಮತ್ತು ಪ್ರಧಾನಿ ಅನುಪಸ್ಥಿತಿಯಲ್ಲಿ ಕರೆಯಲಾಗಿರುವ ಈ ಸಭೆ ಅವರಿಗೆ ಮುಖ್ಯವಲ್ಲ ಎಂದು ಟೀಕಿಸಿದ್ದಾರೆ.
ಕಳೆದ 50 ದಿನಗಳಿಂದ ಮಣಿಪುರ ಹೊತ್ತಿ ಉರಿಯುತ್ತಿದೆ. ಆದರೆ ಈ ಬಗ್ಗೆ ಪ್ರಧಾನಿ ಮೋದಿ ಮೌನವಾಗಿದ್ದಾರೆ ಎಂದು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಪ್ರಧಾನಿ ಅವರೇ ದೇಶದಲ್ಲಿ ಇಲ್ಲದ ಸಮಯದಲ್ಲಿ ಸರ್ವಪಕ್ಷ ಸಭೆ ಕರೆದಿರುವುದು ಅವರಿಗೆ ಈ ಸಭೆ ಮುಖ್ಯವಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.