ನಮ್ಮ ಒಳ್ಳೆಯ ಹೊಳ್ಳ  ಮಾಸ್ಟರ್ ಇಂದು ನಮ್ಮನ್ನಗಲಿದರು....

ನಮ್ಮ ಒಳ್ಳೆಯ ಹೊಳ್ಳ ಮಾಸ್ಟರ್ ಇಂದು ನಮ್ಮನ್ನಗಲಿದರು....

ಕೈರಂಗಳ ಶಾಲೆಯಲ್ಲಿ ನಮಗೆ ಕಲಿಸಿದ ಉತ್ತಮ ಅಧ್ಯಾಪಕರಲ್ಲೊಬ್ಬರಾಗಿದ್ದ ಹೊಳ್ಳ ಮಾಸ್ಟರ್ ( 93) ಇಂದು ಪಡಿಕ್ಕಲ್ ನಲ್ಲಿರುವ ಅವರ ನಿವಾಸದಲ್ಲಿ ನಿಧನ ಹೊಂದಿದರು. 

ಗುರುಗಳ ಅಂತಿಮ ದರ್ಶನಕ್ಕೆ ಹೋಗಿ ಬರುತ್ತಿರುವಾಗ ನಾನಾ ಶಾಲಾ ದಿನಗಳು ನೆನಪಿಗೆ ಬಂದುವು. 

ಹೊಳ್ಳ ಮಾಸ್ಟರ್ ಗಣಿತದ ಅಧ್ಯಾಪಕರಾಗಿದ್ದರು.  ಕೆಲವು ಮಕ್ಕಳಿಗೆ ಗಣಿತ ತಲೆಗೆ ಹತ್ತುತ್ತಲೇ ಇರಲಿಲ್ಲ. ಅಂತಹ ಮಕ್ಕಳಲ್ಲಿ ನಾನೂ ಒಬ್ಬನಾಗಿದ್ದೆ.  ಗಣಿತ ತಲೆಗೇರದ ನನಗೆ ಮತ್ತು ನನ್ನಂತಹದೇ ವಿದ್ಯಾರ್ಥಿಗಳಿಗೆ ಅವರ ಕ್ಲಾಸಲ್ಲಿ ಕೊನೆಯ ಬೆಂಚಿಗೆ " ಭಡ್ತಿ" ಕೊಟ್ಟಿದ್ದರು.   ಬೋರ್ಡಲ್ಲಿ ಒಂದು ಪ್ರಶ್ನೆ  ಬರೆದು  ಎಲ್ಲರೂ ಇದಕ್ಕೆ ಉತ್ತರ ಬರೆದು ತನ್ನಿ ಅನ್ನುತ್ತಾ ನಮಗೆ ಸಮಯ ಕೊಡುತ್ತಿದ್ದರು. ಆ ಸಮಯದಲ್ಲಿ ಅವರು ಏನಾದರೊಂದು ಪುಸ್ತಕವನ್ನು ತೆರೆದು ಓದುತ್ತಾ ಕೂರುತ್ತಿದ್ದರು. ಓದುವ ಹವ್ಯಾಸ ಅವರಿಗೆ ವಿಪರೀತವಿತ್ತು. 

  ಅವರ ಗಮನ ಪುಸ್ತಕದಲ್ಲಿ ನಿರತವಾದ ಸಂದರ್ಭವನ್ನು ಬಳಸಿಕೊಂಡು ನಾವು ರಝಾಕ್ ಎಂಬ ಹುಡುಗನ ಉತ್ತರವನ್ನು ನೋಡಿ ನಕಲು ಬರಕೊಳ್ಳುತ್ತಿದ್ದೆವು.  ಅದೇ ರಝಾಕ್ ಇಂದು " ಕಾಯಾರ್ ಫ್ಯಾಮಿಲಿ" ಗ್ರೂಪಿನ ಅಧ್ಯಕ್ಷರೂ ವಿದೇಶದಲ್ಲಿ ಉದ್ದಿಮೆದಾರರೂ ಆಗಿರುವ ಕಲ್ಲಾಂಡ ರಝಾಕ್ ಹಾಜಿ!  ಗಣಿತದಲ್ಲಿ ಈ ವ್ಯಕ್ತಿ ಆಗಲೇ ಬಹಳ ಹುಷಾರಿದ್ದರು. 

  ನಾವು ಒಬ್ಬೊಬ್ಬರಾಗಿ  ಗುರುಗಳ ಬಳಿಗೆ ನಾವು ಬರೆದ ಉತ್ತರವನ್ನು ತೋರಿಸಬೇಕಿತ್ತು. ಗಣಿತ ತಲೆಗೇರದ ಈ ದಡ್ಡ ವಿದ್ಯಾರ್ಥಿಗಳು ಇಷ್ಟು ಕರೆಕ್ಟಾಗಿ ಉತ್ತರ ಬರೆಯಲು ಸಾಧ್ಯವಿಲ್ಲ, ಇದು ನಕಲು  ಎಂಬುದು ಗುರುಗಳಿಗೆ ಗೊತ್ತಾಗುತ್ತಿತ್ತು. 

 ಉತ್ತರ ನೋಡಿ;  " ಉತ್ತರ ಸರಿ ಇದೆ. ಆದರೆ ಇದು ನಿನಗೆಲ್ಲಿಂದ ಬಂತು ಹೇಳು, ಮೊಟ್ಟೆಯಿಂದ ಬಂತಾ"  ಎಂದು ಗದರುತ್ತಿದ್ದರು. ನಾವು ಏನೂ ಹೇಳಲಾಗದೆ ಬೆಪ್ಪರ ಹಾಗೆ ನಿಂತು ಬಿಡುತ್ತಿದ್ದೆವು. ತಲೆಗೆ ಒಂದೊಂದು  " ಕುಟ್ಟೀಸ್ " ಕೊಡುತ್ತಿದ್ದರು. 

ನೀವು ಗಣಿತದಲ್ಲಿ ಹುಷಾರಾದರೆ ಮಾತ್ರ ನಿಮಗೆ ಭವಿಷ್ಯ ಇರೋದು. ಇಲ್ಲವಾದಲ್ಲಿ ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ ಎಂದು ಉಪದೇಶಿಜಸುತ್ತಿದ್ದರು.  ಆ ಉಪದೇಶ ನಮ್ಮ ಜೀವನದಲ್ಲಿ ನಿಜವಾಗಿ ಪರಿಣಮಿಸಿದ್ದು ನಮ್ಮ ಅನುಭವವಾಗಿದೆ‌.  ಯಕ್ಷಗಾನದಲ್ಲೂ ಪರಿಣತರಾಗಿದ್ದರು‌. ನಾಟಿ ವೈದ್ಯರು ಕೂಡಾ ಆಗಿದ್ದರು. ಜ್ವರ ಮುಂತಾದುದಕ್ಕೆ ಅವರು ಕೊಡುತ್ತಿದ್ದ ಔಷಧಿ ಪರಿಣಾಮಕಾರಿಯಾಗಿರುತ್ತಿತ್ತು.

  ಸಂಗೀತ ಪ್ರಿಯರಾಗಿದ್ದ ಹೊಳ್ಳ ಮಾಸ್ತರ್ ದಿನಾಲೂ ಸಂಜೆ ನಾಲ್ಕರಿಂದ  ಆರು ಗಂಟೆಯ ತನಕ ಅಂದಿನ ಗ್ರಾಮಫೋನು ಇಟ್ಟು ಆಸುಪಾಸಿನವರಿಗೆ ಹಾಡುಗಳ ರಸದೌತಣ ನೀಡುತ್ತಿದ್ದರು‌. ಅದನ್ನು ಕೇಳಿ ಕೇಳಿ ನಮಗೆ ಬಾಯಿಪಾಠವಾಗಿದ್ದ ಹಾಡುಗಳು ಈಗಲೂ ನಮ್ಮೊಳಗೆ ಸ್ಥಿರವಾಗಿ ಇದೆ.

ಯಕ್ಷಗಾನದ ಅಭಿಮಾನಿಯಾಗಿದ್ದ ಅವರ ಮಗ ರಾಜಾರಾಮ್ ಹೊಳ್ಳ ಯಕ್ಷಗಾನದಲ್ಲಿ ಭಾಗವತಿಕೆ ಮಾಡುತ್ತಿದ್ದಾರೆ‌.ಇವರು  ಕೈರಂಗಳ ಗೋಪಾಲಕೃಷ್ಣ ಯಕ್ಷಗಾನ ಮಂಡಳಿಯ ಅಧ್ಯಕ್ಷರೂ ಕೂಡಾ.  

  ಹೊಳ್ಳ ಮಾಸ್ಟರ್ ರವರು ಪೋಸ್ಟ್ ಮಾಸ್ತರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಹೀಗೆ ಕಲೆ, ಶಿಕ್ಷಣ, ವೈದ್ಯಕೀಯ ಮುಂತಾದ ಹಲವು ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದಾರೆ.

 ಬರಿಗಾಲಲ್ಲಿ ನಡೆಯುತ್ತಿದ್ದುದು ಅವರ ಇನ್ನೊಂದು ವಿಶೇಷವಾಗಿತ್ತು. ಅವರು ಚಪ್ಪಲಿ ಹಾಕಿಕೊಂಡದನ್ನು ನೋಡಿದ ನೆನಪೇ ನನಗಿಲ್ಲ.   ಎಲ್ಲಾ ಕ್ಷೇತ್ರಗಳಲ್ಲೂ ಛಾಪು ಮೂಡಿಸಿ ಸಾವಿರಾರು ಶಿಷ್ಯ- ಪ್ರಶಿಷ್ಯರ ಉತ್ತಮ ಗುರುವಾಗಿ ಬರೋಬ್ಬರಿ 93 ವರ್ಷ ಬಾಳಿದ ಅವರ ಅಗಲಿಕೆ ನಾಡಿಗೆ ತುಂಬಲಾರದ ಒಂದು ನಷ್ಟವಾಗಿದೆ‌. ಅವರ ಅಭಾವದ ದುಖವನ್ನು ಸೈರಿಸಿಕೊಳ್ಳುವ ಶಕ್ತಿಯನ್ನು ಪರಮಾತ್ಮ ದಯಪಾಲಿಸಲೆಂದು ಪ್ರಾರ್ಥಿಸುತ್ತಾ ನನ್ನ ನೆಚ್ಚಿನ ಗುರುವಿಗೆ ನನ್ನ ನುಡಿನಮನ!

 -ಡಿ. ಐ. ಅಬೂಬಕರ್ ಕೈರಂಗಳ

 


Ads on article

Advertise in articles 1

advertising articles 2

Advertise under the article