BJP ಅಧಿಕಾರಕ್ಕೆ ಬಂದರೆ ಮುಸ್ಲಿಂಮರ 4% ಮೀಸಲಾತಿಯನ್ನು ತೆಗೆದುಹಾಕುತ್ತೇವೆ: ಅಮಿತ್ ಶಾ
ಹೈದರಾಬಾದ್: ಭಾರತೀಯ ಜನತಾ ಪಕ್ಷವೂ (BJP) ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯಕ್ಕಿರುವ 4% ಮೀಸಲಾತಿಯನ್ನೂ (Muslim Reservation) ತೆಗೆದುಹಾಕುತ್ತೇವೆ. ಮುಸ್ಲಿಮರಿಗೆ ನೀಡಲಾಗಿರುವ ಶೇ. 4 ಮೀಸಲಾತಿಯನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಮರು ಹಂಚಿಕೆ ಮಾಡೋದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ.
ನವೆಂಬರ್ 30 ರಂದು ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಗ್ತಿಯಾಲ್‌ನಲ್ಲಿ ನಡೆದ ಚುನಾವಣಾ ಪ್ರಚಾರಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಸಮುದಾಯಕ್ಕೆ ಮೀಸಲಾತಿ ಮರು ಹಂಚಿಕೆ ಮಾಡಬೇಕಿದೆ. ಹೀಗಾಗಿ, ತೆಲಂಗಾಣ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ನೀಡಲಾಗಿರುವ ಶೇ. 4 ಮೀಸಲಾತಿಯನ್ನು ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಅಮಿತ್ ಶಾ ಹೇಳಿದರು.
ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ಅವರು ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಅಸಾದುದ್ದೀನ್ ಓವೈಸಿಗೆ ಹೆದರಿ ಹೈದರಾಬಾದ್ ವಿಮೋಚನಾ ದಿನವನ್ನು ಆಚರಿಸುತ್ತಿಲ್ಲ. ಆದ್ರೆ ನಾವು ಓವೈಸಿಗೆ ಹೆದರಲ್ಲ. ಮುಂದೆ ತೆಲಂಗಾಣದಲ್ಲಿ ಹೈದರಾಬಾದ್ ವಿಮೋಚನಾ ದಿನವನ್ನು ರಾಜ್ಯ ದಿನವನ್ನಾಗಿ ಆಚರಿಸುತ್ತೇವೆ ಎಂದು ಹೇಳಿದ್ದಾರೆ.