ನೇಜಾರು ನಾಲ್ವರ ಹತ್ಯಾ ಪ್ರಕರಣ: ಆರೋಪಿ ಪ್ರವೀಣ್ ಚೌಗುಲೆಗೆ 14 ದಿನಗಳ ನ್ಯಾಯಾಂಗ ಬಂಧನ; ಹಿರಿಯಡ್ಕ ಸಬ್ ಜೈಲಿಗೆ ರವಾನೆ
ಉಡುಪಿ: ನೇಜಾರುವಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಚೌಗುಲೆಯನ್ನು ತೀವ್ರ ವಿಚಾರಣೆ ನಡೆಸಿರುವ ಪೊಲೀಸರು, ಇಂದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ನ.12ರ ರವಿವಾರ ಬೆಳಗ್ಗೆ ಏರ್ ಇಂಡಿಯಾ ವಿಮಾನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ಸಹೋದ್ಯೋಗಿ ಐನಾಝ್ ಸೇರಿದಂತೆ ಆಕೆಯ ತಾಯಿ, ಸಹೋದರಿ, ಸಹೋದರನನ್ನು ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿ ಪ್ರವೀಣ್ ಚೌಗುಲೆಯನ್ನು ಬೆಳಗಾವಿಯಲ್ಲಿ ಬಂಧಿಸಲಾಗಿತ್ತು.
ಈತನನ್ನು ಕಸ್ಟಡಿಗೆ ಪಡೆದಿದ್ದ ಪೊಲೀಸರು, ತೀವ್ರ ವಿಚಾರಣೆ ನಡೆಸಿದ್ದು, ಐನಾಝ್‌ಳ ಹಿಂದೆ ಬಿದ್ದು ಪ್ರೀತಿಸುವಂತೆ ಕಿರುಕುಳ ನೀಡಿ, ಅದಕ್ಕೆ ಒಪ್ಪದಾಗ ಆಕೆ ಹಾಗು ಆಕೆಯ ಕುಟುಂಬವನ್ನೇ ಆರೋಪಿ ಪ್ರವೀಣ್ ಚೌಗುಲೆ ಕೊಂದು ಮುಗಿಸಿದ್ದ ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಇಂದು ಆರೋಪಿ ಪ್ರವೀಣ್'ನ್ನು ಉಡುಪಿ ಪ್ರಧಾನ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಪ್ರಧಾನ ಸಿವಿಲ್ ನ್ಯಾಯಾಧೀಶರಾದ ದೀಪಾ ಮುಂದೆ ಮಲ್ಪೆ ಪೊಲೀಸರು ಹಾಜರುಗೊಳಿಸಿದರು. ಆರೋಪಿಗೆ ಡಿಸೆಂಬರ್ 5 ರ ವರೆಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿ ಪ್ರವೀಣ್ ಚೌಗುಲೆಯನ್ನು ಹಿರಿಯಡ್ಕ ಸಬ್ ಜೈಲ್ ಗೆ ರವಾನೆ ಮಾಡಲಾಗಿದೆ.
ನ.15ರಂದು ಆರೋಪಿ ಪ್ರವೀಣ್‌ನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು, ಗಂಭೀರ ಪ್ರಕರಣದ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆಗಾಗಿ 14 ದಿನಗಳ ಕಾಲ ಪೊಲೀಸ್ ಕಸ್ಟಡಿ ಪಡೆದುಕೊಂಡಿದ್ದರು. ಈ ವೇಳೆ ಆರೋಪಿಯನ್ನು ನ.28ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು.
ಆರೋಪಿ ಪ್ರವೀಣ್‌ನನ್ನು ಕಸ್ಟಡಿಗೆ ಪಡೆದಿದ್ದ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿ ಸ್ಥಳ ತನಿಖೆ, ಮಹಜರು, ಹೇಳಿಕೆ, ಆರೋಪಿ ಗುರುತು ಸೇರಿದಂತೆ ಎಲ್ಲ ರೀತಿಯ ತನಿಖೆ ಪ್ರಕ್ರಿಯೆಯನ್ನು ವಾರದೊಳಗೆ ಪೂರ್ಣಗೊಳಿಸಿದ್ದಾರೆ.