ಅದ್ದೂರಿಯಾಗಿ ನಡೆದ ದುಬೈಯ ಕನ್ನಡಿಗರ ಕನ್ನಡ ಕೂಟದ 20ನೇ ವರ್ಷದ ಸಂಭ್ರಮಾಚರಣೆಯ ಕನ್ನಡ ರಾಜ್ಯೋತ್ಸವ: ಹಲವು ಗಣ್ಯರಿಗೆ ಪ್ರಶಸ್ತಿ ಪ್ರದಾನ
ಅಬುಧಾಬಿ: ಕನ್ನಡಿಗರ ಕನ್ನಡ ಕೂಟ ದುಬೈ,ಯುಎಇ ವತಿಯಿಂದ 20ನೇ ವರ್ಷದ ಸಂಭ್ರಮಾಚರಣೆಯ ಕರ್ನಾಟಕ ರಾಜ್ಯೋತ್ಸವವು ನವೆಂಬರ್ 11ರಂದು ಸಂಜೆ 4ರಿಂದ ಅಲ್ ಕ್ವಾಸಿಸ್ ನಲ್ಲಿರುವ ಕ್ರೆಸೆಂಟ್ ಇಂಗ್ಲಿಷ್ ಶಾಲೆಯ ಹೊರಾಂಗಣ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ 'ಅಂತರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ'ಯನ್ನು ನಿವೃತ ಕಾಪ್ಟನ್ ಮತ್ತು ಏರ್ ಡೆಕ್ಕನ್ ಸಂಸ್ಥಾಪಕರಾದ ಕ್ಯಾಪ್ಟನ್ ಗೋಪಿನಾಥ್ ಪಡೆದರೆ, 'ಅಂತರಾಷ್ಟ್ರೀಯ ಕನ್ನಡ ಹಾಸ್ಯ ರತ್ನ ಪ್ರಶಸ್ತಿ'ಯನ್ನು ಖ್ಯಾತ ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್ ಅವರು ಪಡೆದರು. 'ಅಂತರಾಷ್ಟ್ರೀಯ ಡಾ. ಪುನೀತ್ ರಾಜಕುಮಾರ್ ಪ್ರಶಸ್ತಿ'ಯನ್ನು ಅನಿವಾಸಿ ಉದ್ಯಮಿ ದುಬೈ ಜ್ಹೈನ್ ಗ್ರೂಪ್ ಆಫ್ ಹೋಟೆಲ್ಸ್ ಮಾಲೀಕರಾದ ಝಫರುಲ್ಲಾ ಖಾನ್ ಮಂಡ್ಯ ಅವರು ಪಡೆದರು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಅಜ್ಮಾನ್ ಆಡಳಿತ ಕುಟುಂಬ ಸದಸ್ಯ ಮೊಹಮ್ಮದ್ ಸಈದ್ ಅಲ್ ನಯೋಮಿ ಮತ್ತು ದುಬೈ ನಾಗರಿಕ ಉದ್ಯಮಿ ದಾವೂದ್ ಅಬ್ದುಲ್ಲಾ, ಕಾನಂದಿಗ ಉದ್ಯಮಿಗಳಾದ ರೊನಾಲ್ಡ್ ಮಾರ್ಟಿಸ್ ಮತ್ತು ಜೋಸೆಫ್ ಮಥಾಯಿ ಮುಂತಾದ ಗಣ್ಯ ವ್ಯಕ್ತಿಗಳು ಆಗಮಿಸದ್ದರು.
ಕಾರ್ಯಕ್ರಮಕ್ಕೆ ಸಂಗೀತ ಸಂಜೆಯ ಮೂಲಕ ನೆರೆದವರನ್ನು ಗಾಯಕಿ ಭೂಮಿಕಾ ಮಧುಸೂದನ್ ಅವರು ರಂಜಿಸಿದರು. ಪಾರ್ವತಿ ನ್ರತ್ಯ ವಿಹಂಗಮ ಬೆಂಗಳೂರು ತಂಡದಿಂದ ಡಾನ್ಸ್ ಮತ್ತು ಸ್ಥಳೀಯ ಕಲಾವಿದರಿಂದ ವೈವಿಧ್ಯ ನ್ರತ್ಯ ಹಾಡುಗಾರಿಕೆ ಮುಂತಾದ ಹಲವು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ತಮ್ಮ ಹಾಸ್ಯ ಮಾತುಗಳ ಮೂಲಕ ಶ್ರೀಯುತ ಗಂಗಾವತಿ ಪ್ರಾಣೇಶ್ ಮತ್ತು ಬಸವರಾಜ್ ಮಹಾಮನಿ ಅವರು ನೆರೆದ ಜನರನ್ನು ರಂಜಿಸಿದರು, ದುಬೈ ಕನ್ನಡ ಕೂಟದ ಅಧ್ಯಕ್ಷರಾದ ಶ್ರೀಯುತ ಸದನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಜರುಗಿತು. ಕನ್ನಡ ಕೂಟದ ಮುಖ್ಯಸ್ಥರಾದ ವೀರೇಂದ್ರ ಬಾಬು, ಉಮಾ ವಿದ್ಯಾದರ್ ಮತ್ತು ಅಡ್ವೋಕೇಟ್ ಖಲೀಲ್ ಉಪಸ್ಥಿತಿ ಇದ್ದರು.