
ಮನೆಯೊಳಗೆ ವಿಷಕಾರಿ ಹಾವು ಬಿಟ್ಟು ತನ್ನ ಪತ್ನಿ-ಮಗುವನ್ನು ಹತ್ಯೆ ಮಾಡಿದ ವ್ಯಕ್ತಿ; ಕೊನೆಗೂ ಜೈಲು ಪಾಲು
ಒಡಿಶಾ: ಇಲ್ಲೊಬ್ಬ ವ್ಯಕ್ತಿ ತನ್ನ ಮನೆಯೊಳಗೆ ವಿಷಕಾರಿ ಹಾವನ್ನು ಬಿಟ್ಟು ತನ್ನ ಹೆಂಡತಿ ಹಾಗೂ ಮಗುವನ್ನು ಹತ್ಯೆ ಮಾಡಿ ಕೊನೆಗೂ ಜೈಲು ಸೇರಿದ್ದಾನೆ.
ಈ ಘಟನೆ ನಡೆದಿರುವುದು ಒಡಿಶಾ ರಾಜ್ಯದ ಗಂಜಮ್ ಜಿಲ್ಲೆಯ ಅದಿಗಾಂವ್ ಎಂಬ ಗ್ರಾಮದಲ್ಲಿ ಒಂದೂವರೆ ತಿಂಗಳ ಹಿಂದೆ ಈ ಘಟನೆ ನಡೆದಿತ್ತು. ಈಗ 25 ವರ್ಷ ವಯಸ್ಸಿನ ಆರೋಪಿ ಪೊಲೀಸರ ವಶದಲ್ಲಿ ಇದ್ದಾನೆ.
ವ್ಯಕ್ತಿಯೇ ತನ್ನ ಪತ್ನಿ ಹಾಗು ಮಗುವಿನ ಸಾವಿಗೆ ಮನೆಯಲ್ಲಿ ಹಾವು ಬಿಟ್ಟ ಹತ್ಯೆ ಮಾಡಿರುವುದು ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದೆ. ಈತ ತನ್ನ ಹೆಂಡತಿ ಹಾಗೂ 2 ವರ್ಷ ವಯಸ್ಸಿನ ಮಗಳು ಇದ್ದ ಕೋಣೆಯೊಳಗೆ ಹಾವನ್ನು ಬಿಟ್ಟಿದ್ದ. ಹಾವು ಕಚ್ಚಿದ್ದ ಪರಿಣಾಮ ತಾಯಿ ಹಾಗೂ ಮಗಳು ಸಾವನ್ನಪ್ಪಿದ್ದರು.
ಬಂಧಿತ ವ್ಯಕ್ತಿಯನ್ನು ಕೆ. ಗಣೇಶ್ ಪಾತ್ರಾ ಎಂದು ಗುರ್ತಿಸಲಾಗಿದೆ. ಈತ 23 ವರ್ಷ ವಯಸ್ಸಿನ ತನ್ನ ಪತ್ನಿ ಕೆ. ಬಸಂತಿ ಪಾತ್ರಾ ಜೊತೆಗೆ ಜಗಳ ಆಡುತ್ತಿದ್ದ. 2020ರಲ್ಲಿ ಇವರಿಬ್ಬರು ಮದುವೆಯಾಗಿದ್ದರು. 2 ವರ್ಷ ವಯಸ್ಸಿನ ಮಗಳಿಗೆ ದೇಬಸ್ಮಿತಾ ಎಂದು ಹೆಸರಿಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಹೆಂಡತಿ ಜೊತೆ ಕಾಲು ಕೆರೆದು ಪದೇ ಪದೇ ಜಗಳ ಆಡುತ್ತಿದ್ದ ಪತಿರಾಯ ಗಣೇಶ್, ಅದೊಂದು ದಿನ ಆಕೆಯನ್ನು ಮಗಳ ಸಮೇತ ಕೊಲ್ಲಬೇಕು ಎಂದು ತೀರ್ಮಾನಿಸಿದ್ದ. ಹೀಗಾಗಿ, ಹಾವಾಡಿಗನೊಬ್ಬನನ್ನು ಸಂಪರ್ಕಿಸಿದ ಗಣೇಶ್, ಆತನಿಂದ ವಿಷಕಾರಿ ಹಾವನ್ನು ಖರೀದಿಸಿದ್ದ. ಆದರೆ, ಯಾವ ಜಾತಿಯ ಹಾವನ್ನು ಆರೋಪಿ ಖರೀದಿಸಿದ್ದ ಎಂದು ತಿಳಿದು ಬಂದಿಲ್ಲ. ಧಾರ್ಮಿಕ ಕಾರ್ಯವೊಂದಕ್ಕೆ ಹಾವು ಬೇಕಿದೆ ಎಂದು ಆರೋಪಿಯು ಹಾವಾಡಿಗನ ಬಳಿ ಹೇಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
2023ರ ಅಕ್ಟೋಬರ್ 6 ರಂದು ಆರೋಪಿಯು ಪ್ಲಾಸ್ಟಿಕ್ ಡಬ್ಬವೊಂದರಲ್ಲಿ ಹಾವನ್ನು ತಂದು ತನ್ನ ಮನೆಯ ರೂಂ ಒಳಗೆ ಬಿಟ್ಟಿದ್ದ. ಈ ಕೊಠಡಿಯಲ್ಲಿ ಆರೋಪಿಯ ಪತ್ನಿ ಹಾಗೂ ಮಗಳು ಮಲಗಿದ್ದರು. ಹಾವು ಬಿಟ್ಟ ಬಳಿಕ ಆರೋಪಿ ಪಕ್ಕದ ರೂಂನಲ್ಲಿ ಮಲಗಿದ್ದ. ಮಾರನೇ ದಿನ ನೋಡಿದರೆ ರೂಂ ಒಳಗೆ ಮಲಗಿದ್ದ ತಾಯಿ ಹಾಗೂ ಮಗಳು ಮೃತಪಟ್ಟಿದ್ದರು. ಈ ಪ್ರಕರಣ ಸಂಬಂಧ ದಾಖಲಿಸಿದ್ದ ಪೊಲೀಸರು, ಇದೊಂದು ಅಸಹಜ ಸಾವು ಪ್ರಕರಣ ಎಂದು ಭಾವಿಸಿದ್ದರು. ಆದರೆ, ಮೃತ ಮಹಿಳೆಯ ತಂದೆ ತನ್ನ ಅಳಿಯನ ವಿರುದ್ಧವೇ ಪ್ರಕರಣ ದಾಖಲಿಸಿದ್ದರು. ಈ ವೇಳೆ ಪೊಲೀಸರು ಆರೋಪಿಯ ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ.
ಪ್ರಕರಣ ನಡೆದ ಒಂದು ತಿಂಗಳ ಬಳಿಕ ಆರೋಪಿಯ ಬಂಧನವಾಗಿದೆ. ಆರಂಭದಲ್ಲಿ ವಿಚಾರಣೆ ವೇಳೆ ಆರೋಪಿ ತನ್ನ ವಿರುದ್ದ ಕೇಳಿ ಬಂದ ಆರೋಪವನ್ನು ನಿರಾಕರಿಸಿದ್ದ. ಪೊಲೀಸರ ಬಳಿ ಸಾಕ್ಷ್ಯಗಳೂ ಇರಲಿಲ್ಲ. ಹಾವು ಎಲ್ಲಿಂದಲೋ ಬಂದು ನನ್ನ ಹೆಂಡತಿ ಹಾಗೂ ಮಗುವಿಗೆ ಕಚ್ಚಿರಬಹುದು ಎಂದು ಆತ ವಾದಿಸಿದ್ದ. ಆದರೆ, ಪೊಲೀಸರು ವಿಚಾರಣೆ ತೀವ್ರಗೊಳಿಸಿದ ಬಳಿಕ ಆರೋಪಿ ಸತ್ಯಾಂಶವನ್ನು ಬಾಯಿ ಬಿಟ್ಟಿದ್ದಾನೆ.