ಜಮ್ಮು ಕಾಶ್ಮೀರದ ರಜೌರಿದಲ್ಲಿ ಉಗ್ರರ ವಿರುದ್ಧದ ಕಾದಾಟದಲ್ಲಿ ಕನ್ನಡಿಗ ಕ್ಯಾಪ್ಟನ್ ಪ್ರಾಂಜಲ್ ಹುತಾತ್ಮ
28ರ ಹರೆಯದ ಕ್ಯಾಪ್ಟನ್ ಎಂ.ವಿ ಪ್ರಾಂಜಲ್ 63 ರಾಷ್ಟ್ರೀಯ ರೈಫಲ್ಸ್ ನ ಕ್ಯಾಪ್ಟನ್ ಆಗಿದ್ದರು. ಮಂಗಳೂರಿನಲ್ಲಿ ಎಂಆರ್ ಪಿಎಲ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಎಂ.ವೆಂಕಟೇಶ್-ಅನುರಾಧಾ ದಂಪತಿಯ ಏಕೈಕ ಪುತ್ರ. ಮಂಗಳೂರಿನಲ್ಲೇ (Mangaluru) ಹುಟ್ಟಿ ಬೆಳೆದ ಪ್ರಾಂಜಲ್. ಎಂಆರ್ಪಿಎಲ್ ಡೆಲ್ಲಿ ಸ್ಕೂಲ್ ನಲ್ಲಿ ಹತ್ತನೇ ತರಗತಿವರೆಗೆ ವಿಧ್ಯಾಭ್ಯಾಸ ಮಾಡಿದ್ದರು. ನಂತರ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ರು. ಬಳಿಕ ಮಧ್ಯಪ್ರದೇಶದ ಮಿಲಿಟರಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆದು ನೇರವಾಗಿ ಭಾರತೀಯ ಸೇನೆ ಸೇರಿದ್ದರು.
ಎರಡು ವರ್ಷಗಳ ಹಿಂದೆಯಷ್ಟೇ ಪ್ರಾಂಜಲ್ ಅವರ ವಿವಾಹ ನೆರವೇರಿದ್ದು, ಅವರ ಪತ್ನಿ ಚೆನ್ನೈ ಐಐಟಿಯಲ್ಲಿ ಎಂಟೆಕ್ ಮಾಡುತ್ತಿದ್ದಾರೆ. ಈ ಸುದ್ದಿಯು ಪ್ರಾಂಜಲ್ ಕುಟುಂಬ ಹಾಗೂ ಅವರ ಕುಟುಂಬವನ್ನು ದಿಗ್ಭ್ರಮೆಗೊಳಿಸಿದೆ.
ಬೆಳಗ್ಗೆಯಿಂದ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ನಾಲ್ವರು ಸೈನಿಕರಲ್ಲಿ ಇಬ್ಬರು ಸೇನಾ ಕ್ಯಾಪ್ಟನ್‌ಗಳಾಗಿದ್ದಾರೆ. 63 ರಾಷ್ಟ್ರೀಯ ರೈಫಲ್ಸ್‌ನ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಮತ್ತು 9 ಪಿಎಆರ್‌ಎ ಕ್ಯಾಪ್ಟನ್ ಶುಭಂ ಮತ್ತು ಹವಾಲ್ದಾರ್ ಮಜೀದ್ ಮೃತಪಟ್ಟವರು.
9ನೇ ಪ್ಯಾರಾದ ಸೈನಿಕರು ಕ್ಯಾಪ್ಟನ್ ಪ್ರಾಂಜಲ್ ಅವರನ್ನು ಸ್ಥಳಾಂತರಿಸಲು ಅರಣ್ಯಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಭಾರಿ ಗುಂಡಿನ ಚಕಮಕಿ ನಡೆದಿದೆ. ಐದರಿಂದ ಆರು ಮಂದಿ ಇರುವ ಉಗ್ರಗಾಮಿಗಳು ಗುಂಡಿನ ದಾಳಿ ನಡೆಸುತ್ತಿದ್ದು, ಸಂಜೆಯವರೆಗೂ ಮುಂದುವರೆದಿದೆ. ಗಾಯಗೊಂಡ 9 ಪ್ಯಾರಾ ಮೇಜರ್ ಅವರನ್ನು ಉಧಮ್‌ಪುರದ ಕಮಾಂಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಮತ್ತು ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಎನ್‌ಕೌಂಟರ್‌ನಲ್ಲಿ ಒಬ್ಬ ಉಗ್ರಗಾಮಿ ಕೂಡ ಬಲಿಯಾಗಿದ್ದಾನೆ ಎಂದು ವರದಿಯಾಗಿದೆ.