ಫರ್ಹಾನ್ ನ ಕುಟುಂಬಕ್ಕಾದ ಈ ಆಘಾತ ಇನ್ನಾರಿಗೂ ಬಾರದಿರಲಿ...
ಮಂಗಳೂರು, ಕುಳಾಯಿ ಎಂಬಲ್ಲಿನ ಹಸನ್ ಬಾವ ಎಂಬವರ ಪುತ್ರ ಫರ್ಹಾನ್ ಎಂಬ ಹದಿನಾರರ ಹರೆಯದ ಎಳೆ ಬಾಲಕ ಮೃತಪಟ್ಟಿದ್ದಾನೆ. ಸುರತ್ಕಲ್ ನ ಅಥರ್ವ ಆಸ್ಪತ್ರೆಯ ವೈದ್ಯರು ಕೊಂದಿದ್ದಾರೆ ಅನ್ನುವುದೇ ಸೂಕ್ತ. ಹಣದ ಮದದಿಂದ ಕೊಬ್ಬಿ ಮನುಷ್ಯತ್ವ ಕಳಕೊಂಡ ಕೆಲವು ವೈದ್ಯರ ನಿರ್ಲಕ್ಷ್ಯಕ್ಕೆ ಅಮಾಯಕರು ಬಲಿಯಾಗುತ್ತಿರುವುದು ಇದೇ ಮೊದಲಲ್ಲ. ಕೊನೆಯೂ ಅಲ್ಲ. ಕಾರಣ, ಇಲ್ಲಿ ಹಣವಂತರಿಗೆ, ಪ್ರಭಾವಿಗಳಿಗೆ ಏನೇ ಮಾಡಿದರೂ ಪಾರಾಗುವ ಅಡ್ಡ ದಾರಿಗಳಿವೆ. ಕಾನೂನಿನ ಶಿಕ್ಷೆ ಇರುವುದು ಪ್ರಭಾವ, ದುಡ್ಡು ಇಲ್ಲದ ಬಡವರಿಗೆ ಮಾತ್ರ.
ಸುರತ್ಕಲ್ ಅಥರ್ವ ಆಸ್ಪತ್ರೆಯ ಎದುರು ಪ್ರತಿಭಟನೆ ನಡೆದಿದೆ, ರಾಜಕೀಯ, ಸಾಮಾಜಿಕ ಮುಂದಾಳುಗಳು ಬಂದು ಪ್ರತಿಷೇಧ ಮಾಡಿದ್ದಾರೆ, ಸೂಕ್ತ ತನಿಖೆಗೆ ಆದೇಶ ನೀಡುವ ಮಾತುಗಳೂ ಸಂಬಂಧಪಟ್ಟವರಿಂದ ಕೇಳಿ ಬಂದಿದೆ. ಕೊಲೆ ಮಾಡಿದ ಡಾಕ್ಟರ್ ಮಾತ್ರ ಸುರಕ್ಷಿತ ಮನೆಯಲ್ಲಿ ಬೆಚ್ಚನೆ ಮಲಗಿದ್ದಾರೆ. ಒಂದೆರಡು ದಿನ ಬೊಬ್ಬೆ ನಡೆಯಬಹುದಷ್ಟೇ, ಬೇರೆ ಯಾವ ಮಣ್ಣೂ ಆಗಲಿಕ್ಕಿಲ್ಲ ಎಂಬ ಗ್ಯಾರಂಟಿ ಅವರಿಗೆ ನೂರಕ್ಕೆ ನೂರು ಇದೆ.
ಇನ್ನು ಕಾಟಾಚಾರದ ತನಿಖೆ ನಡೆಯಬಹುದು. ತನಿಖೆ ನಡೆಸುವವರು ವೈದ್ಯರೇ ಆದುದರಿಂದ ಸಹೋದ್ಯೋಗ ಪ್ರೀತಿಯಿಂದ ಕೊಲೆಗಾರ ವೈದ್ಯರಿಗೆ ಮುಳ್ಳು ತಾಗದ ಹಾಗೆ ಕಣ್ಣುಕಟ್ಟಿನ ವರದಿ ನೀಡಿ ಹೊರಟು ಹೋಗುತ್ತಾರೆ. ಅಷ್ಟರಲ್ಲಿ ಪ್ರಕರಣದ ಕಾವು ತಣ್ಣಗಾಗಿ ಜನ ಮರೆತು ಬಿಟ್ಟಿರುತ್ತಾರೆ.
ಆದರೆ ಮಗುವನ್ನು ಕಳಕೊಂಡ ಕುಟುಂಬಕ್ಕೆ ಏನು ಪರಿಹಾರ? ಬಹುಶಃ ದುಡ್ಡಿನ ಪರಿಹಾರ ಸಿಕ್ಕರೂ ಅದು ಹೋದ ಜೀವಕ್ಕೆ ಪರಿಹಾರ ಆಗ್ತದಾ? ಜೀವದ ಬಗ್ಗೆ ಸೀರಿಯಸ್ ನೆಸ್ ಇಲ್ಲದ ವೈದ್ಯರು ನಿಜವಾಗಿಯೂ ವೈದ್ಯರಲ್ಲ. ಮನುಷ್ಯ ಜೀವ ತೆಗೆದು ಸೊತ್ತು ದೋಚುವ ಡಕಾಯಿತರಿಗಿಂತ ನೀಚರು. ಡಕಾಯಿತರಿಗೆ ಡಕಾಯಿತರು ಎಂಬ ಹಣೆಪಟ್ಟಿ ಇರುತ್ತದೆ. ಆದರೆ ಮನುಷ್ಯ ಜೀವದ ಮೇಲೆ ಕರುಣೆ ಇಲ್ಲದ ಇಂತಹ ಕೆಲವು ವೈದ್ಯರಿಗೆ ವೈದ್ಯರು ಎಂಬ ಗೌರವ ಇರುತ್ತದೆ. ಆದ್ದರಿಂದ ಇವರು ಗೋಮುಖ ವ್ಯಾಘ್ರರು.
ಹಸನ್ ಬಾವ ರವರ ಏಕೈಕ ಗಂಡು ಮಗು ಫರ್ಹಾನ್. ಜೆಪ್ಪುವಿನ ಯೇನಪೋಯ ಕಾಲೇಜಿನಲ್ಲಿ ಪ್ರಥಮ ಪಿ.ಯು. ಸಿ. ವಿದ್ಯಾರ್ಥಿ. ನನ್ನ ಮಗಳು ಕೂಡಾ ಅಲ್ಲಿ ಸೆಕೆಂಡ್ ಪಿ.ಯು. ವಿದ್ಯಾರ್ಥಿನಿ. ಮೊನ್ನೆಯಷ್ಟೆ ಮಗಳ ಫೀಜು ಕಟ್ಟಲು ನಾನು ಹೋಗಿದ್ದಾಗ ಫರ್ಹಾನ್ ನನ್ನು ನೋಡಿದ್ದೆ. ಹಾಗೆ ನೋಡಿ ಬಂದ ಮರುದಿನವೇ ಅವನ ಮರಣದ ವಾರ್ತೆ ಕೇಳಿದಾಗ ಕರುಳು ಕಿತ್ತುಬರುತ್ತದೆ.
ಸ್ಕೂಟರ್ ಅಪಘಾತದಲ್ಲಿ ಕಾಲಿನ ಮೂಳೆ ಮುರಿದುದರಿಂದ ಶಸ್ತ್ರ ಚಿಕಿತ್ಸೆಯ ಅಗತ್ಯ ಬಂತು. ಅದಕ್ಕೆ ಪ್ರಜ್ಞೆ ತಪ್ಪಿಸಲು ನೀಡಲಾಗಿದ್ದ ಅನಸ್ತೇಸಿಯಾ ಹೆಚ್ಚಾಗಿ ಸಾವು ಸಂಭವಿಸಿದೆ ಎಂದು ಆರೋಪ ಕೇಳಿಬರುತ್ತಿದೆ. ಕೆಲವರಿಗೆ ಅನಸ್ತೇಸಿಯಾ ಕೊಟ್ಟಾಗ ಮೂರ್ಛೆ ರೋಗ ಕಾಣಿಸಿಕೊಳ್ಳುವುದರಿಂದ ಮೊದಲು ಟೆಸ್ಟ್ ಡೋಸ್ ಕೊಟ್ಟು ಪರೀಕ್ಷಿಸಿ ನಂತರ ಅನಸ್ತೇಸಿಯಾ ಕೊಡುವುದು ರೂಢಿ. ಇಲ್ಲಿ ಆ ಕೆಲಸ ಮಾಡದೆ ವೈದ್ಯರು ನಿರ್ಲಕ್ಷ್ಯ ವಹಿಸಿದ್ದರಿಂದ ಸಾವು ಸಂಭವಿಸಿದೆ ಎಂದು ಆರೋಪಿಸಲಾಗುತ್ತಿದೆ.
ವೈದ್ಯರ ಸಣ್ಣ ನಿರ್ಲಕ್ಷ್ಯ ಅಮಾಯಕರ ಜೀವಹಾನಿಗೆ ಕಾರಣವಾಗಬಹುದು. ಇದು ನಮಗಿಂತ ಹೆಚ್ಚಾಗಿ ವೈದ್ಯರಿಗೂ ಗೊತ್ತಿರುವ ವಿಚಾರ. ಆದರೆ ಹಣದ ಅಮಲು ಹಾಗೂ ನಶೆಯ ಅಮಲೂ ಕೂಡಾ ಮೈಳೈಸಿಕೊಂಡ ಕೆಲವು ದುಷ್ಟ ವೈದ್ಯರಿಗೆ ಇದು ಮರೆತಿರುತ್ತದೆ.
ಇನ್ನು ಏನೇ ಮಾಡಿದರೂ ಕುಲಾಯಿ ಹಸನ್ ಬಾವರಿಗೆ ಅಗಲಿದ ತನ್ನ ಏಕೈಕ ಗಂಡು ಮಗು ಫರ್ಹಾನ್ ಸಿಗುತ್ತಾನಾ? ಹೆತ್ತು ಸಾಕಿದ ಆ ತಾಯಿಗೆ ತನ್ನ ಕರುಳ ಕುಡಿ ಕಂದನನ್ನು ಮರಳಿ ಮಡಿಲಿಗೊಪ್ಪಿಸಲು ಯಾರಿಂದ ಸಾಧ್ಯ? ಇದ್ದ ಏಕೈಕ ಮುದ್ದಿನ ಅಣ್ಣನನ್ನು ಕಳಕೊಂಡ ಆ ಇಬ್ಬರು ಪುಟ್ಟ ತಂಗಿಯರಿಗೆ ಇನ್ನು ಅಣ್ಣ ಸಿಗುತ್ತಾನಾ?
ಎಲ್ಲಾ ವೈದ್ಯರನ್ನು ದೂರಲಾರೆ. ಆದರೆ ಅಮಲೇರಿಸಿಕೊಂಡು ಮನುಷ್ಯ ಜೀವದ ಮೇಲೆ ಚೆಲ್ಲಾಟವಾಡುತ್ತಿರುವ ಕೆಲವು ವೈದ್ಯರು ನಿರ್ವಂಶವಾಗಬೇಕೆಂದು ಪ್ರಾರ್ಥಿಸುತ್ತಿದ್ದೇನೆ. ಅವರಿಗೆ ಶಿಕ್ಷೆ ಕೊಡುವ ಕಾನೂನು ಇಲ್ಲಿ ಇಲ್ಲದ್ದರಿಂದ ಜಗದೊಡಯನೇ ಶಿಕ್ಷೆ ಕೊಡಲೆಂದು ನನ್ನ ಅದಮ್ಯ ಪ್ರಾರ್ಥನೆ. ಹಸನ್ ಬಾವ ಕುಟುಂಬ ಮತ್ತು ಬಂಧುಗಳಿಗೆ ಅಲ್ಲಾಹು ಈ ಆಘಾತಕ್ಕೆ ಸೂಕ್ತ ಪುಣ್ಯ ಹಾಗೂ ತಾಳ್ಮೆಯನ್ನು ದಯಪಾಲಿಸಲಿ, ಚಿಗುರಿ, ಅರಳಿ ಬಾಳಿ ಬೆಳಗಬೇಕಾಗಿದ್ದ ಎಳೆಯ ಮುದ್ದಿನ ಮಗುವು ಫರ್ಹಾನನ ಆತ್ಮಕ್ಕೆ ಚಿರಶಾಂತಿ ನೀಡಿ ಅನುಗ್ರಹಿಸಲಿ.
- ಡಿ. ಐ. ಅಬೂಬಕರ್ ಕೈರಂಗಳ |