ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ‘ಹೈದರಾಬಾದ್’ ಹೆಸರನ್ನು ಬದಲಿಸಿ ‘ಭಾಗ್ಯ ನಗರ’ ಎಂದು ಮರು ನಾಮಕರಣ: ಕಿಶನ್ ರೆಡ್ಡಿ

ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ‘ಹೈದರಾಬಾದ್’ ಹೆಸರನ್ನು ಬದಲಿಸಿ ‘ಭಾಗ್ಯ ನಗರ’ ಎಂದು ಮರು ನಾಮಕರಣ: ಕಿಶನ್ ರೆಡ್ಡಿ

ಹೈದರಾಬಾದ್: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿ ತೆಲಂಗಾಣ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ‘ಹೈದರಾಬಾದ್’ ಎಂಬ ರಾಜಧಾನಿಯ ಹೆಸರನ್ನು ಬದಲಿಸಿ ‘ಭಾಗ್ಯ ನಗರ’ ಎಂದು ಮರು ನಾಮಕರಣ ಮಾಡುವುದಾಗಿ ತೆಲಂಗಾಣ ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಭರವಸೆ ನೀಡಿದ್ದಾರೆ. ಸೋಮವಾರ ಹೈದರಾಬಾದ್‌ನಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುವ ವೇಳೆ ಕಿಶನ್ ರೆಡ್ಡಿ ಈ ಭರವಸೆ ನೀಡಿದ್ಧಾರೆ.

ಮದ್ರಾಸ್, ಬಾಂಬೆ ಹಾಗೂ ಕಲ್ಕತ್ತಾ ನಗರಗಳ ಹೆಸರನ್ನು ಬದಲಿಸಲಾಗಿದೆ. ಅದೇ ರೀತಿಯಲ್ಲೇ ಹೈದರಾಬಾದ್ ಹೆಸರನ್ನೂ ಬದಲಾವಣೆ ಮಾಡಲಾಗುವುದು ಎಂದು ಕಿಶನ್ ರೆಡ್ಡಿ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಕಿಶನ್ ರೆಡ್ಡಿ, ತೆಲಂಗಾಣ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ನಾವು ಖಂಡಿತವಾಗಿಯೂ ಹೈದರಾಬಾದ್ ಹೆಸರನ್ನು ಬದಲಿಸುತ್ತೇವೆ. ಏಕೆಂದರೆ, ಈ ಹೈದರ್ ಯಾರು? ಆತನ ಹೆಸರು ನಮಗೆ ಏಕೆ? ಹೈದರ್ ಎಲ್ಲಿಂದ ಬಂದಿದ್ದ? ಹೈದರಾಬಾದ್ ಹೆಸರು ಯಾರಿಗೆ ಬೇಕು? ಇದೇ ಕಾರಣದಿಂದಾಗಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್ ಹೆಸರು ಬದಲಾಗಲಿದೆ. ಹೈದರ್ ಹೆಸರನ್ನು ತೆಗೆದು ಹಾಕಿ ನಾವು ಭಾಗ್ಯ ನಗರ ಎಂದು ಹೆಸರು ಬದಲಿಸಲಿದ್ದೇವೆ ಎಂದು ಕಿಶನ್ ರೆಡ್ಡಿ ವಿವರಿಸಿದರು. ಅಷ್ಟೇ ಅಲ್ಲ, ಹೈದರಾಬಾದ್ ನಗರದ ಹೆಸರನ್ನು ಏಕೆ ಬದಲಿಸಬಾರದು ಎಂದೂ ಕಿಶನ್ ರೆಡ್ಡಿ ಪ್ರಶ್ನಿಸಿದರು.

ಮದ್ರಾಸ್ ಅನ್ನೋ ಹೆಸರನ್ನು ಬಿಜೆಪಿ ಬದಲಾವಣೆ ಮಾಡಿರಲಿಲ್ಲ. ಅದನ್ನು ಬದಲಿಸಿದ್ದು ಅಂದಿನ ಡಿಎಂಕೆ ಸರ್ಕಾರ ಎಂದೂ ಕಿಶನ್ ರೆಡ್ಡಿ ನೆನಪಿಸಿದರು.

ಈಗಾಗಲೇ ಮದ್ರಾಸ್ ಹೆಸರನ್ನು ಚೆನ್ನೈ ಎಂದು ಬದಲಿಸಲಾಗಿದೆ. ಬಾಂಬೆ ಅನ್ನೋದು ಮುಂಬೈ ಆಗಿದೆ. ಕಲ್ಕತ್ತಾ ಅನ್ನೋದು ಕೋಲ್ಕತ್ತಾ ಎಂದು ಬದಲಾವಣೆಯಾಗಿದೆ. ರಾಜ ಪಥವು ಕರ್ತವ್ಯ ಪಥವಾಗಿ ಬದಲಾಗಿದೆ. ಹೀಗಿರುವಾಗ ಹೈದರಾಬಾದ್ ಹೆಸರು ಭಾಗ್ಯ ನಗರ ಏಕೆ ಆಗಬಾರದು? ಏನು ತಪ್ಪು ಎಂದು ಕಿಶನ್ ರೆಡ್ಡಿ ಪ್ರಶ್ನೆ ಮಾಡಿದ್ದಾರೆ.

ಗುಲಾಮಗಿರಿ ಮನಸ್ಥಿತಿಯ ಎಲ್ಲಾ ಹೆಸರುಗಳನ್ನೂ ಬಿಜೆಪಿ ಸಂಪೂರ್ಣವಾಗಿ ಬದಲಾವಣೆ ಮಾಡಲಿದೆ ಎಂದು ಕಿಶನ್ ರೆಡ್ಡಿ ಹೇಳಿದ್ದಾರೆ. ಈ ಕುರಿತಾಗಿ ಬಿಜೆಪಿ ಬುದ್ದಿ ಜೀವಿಗಳ ಅಭಿಪ್ರಾಯ ಹಾಗೂ ಸಲಹೆಯನ್ನೂ ಕೇಳಲಿದೆ ಎಂದು ಕಿಶನ್ ರೆಡ್ಡಿ ಹೇಳಿದ್ದಾರೆ. ಭಾಗ್ಯ ನಗರ ಎಂದರೆ ಅದೃಷ್ಟದ ನಗರ ಎಂದು ಅರ್ಥವಿದೆ.

Ads on article

Advertise in articles 1

advertising articles 2

Advertise under the article