ಪ್ರತಾಪ್ ಸಿಂಹಗೆ ಈ ಬಾರಿಗೆ ಚುನಾವಣೆಯಲ್ಲಿ ಬಿಜೆಪಿಯ ಟಿಕೆಟ್ ಕೈ ತಪ್ಪುವ ಸಾಧ್ಯತೆ; ಕ್ಷೇತ್ರದ ಮೇಲೆ ಕಣ್ಣಿಟ್ಟ ಜೆಡಿಎಸ್
ಬೆಂಗಳೂರು: 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಸಂಸತ್ ಪ್ರವೇಶಿಸಿರುವ ಪ್ರತಾಪ್ ಸಿಂಹಗೆ ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ.
ಈ ಬಾರಿಯ ಲೋಕ ಸಮರಕ್ಕಾಗಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ದಳದಿಂದಲೂ ಮೈಸೂರು ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರು ಕೇಳಿ ಬರುತ್ತಿದೆ. ಬಿಜೆಪಿಗೆ ಬೆಂಬಲ ನೀಡಿರುವ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರ ಮಂಡ್ಯ ಕ್ಷೇತ್ರ ಬಿಟ್ಟುಕೊಡುವಂತೆ ಜೆಡಿಎಸ್ ಪಟ್ಟು ಹಿಡಿದಿದೆ. ಇದರ ಬೆನ್ನಲ್ಲೇ ಇದೀಗ ಮೈಸೂರು-ಕೊಡಗು ಕ್ಷೇತ್ರದ ಮೇಲೂ ಸಹ ಕಣ್ಣಿಟ್ಟಿದೆ. ಹೀಗಾಗಿ ಹಾಲಿ ಸಂಸದ ಪ್ರತಾಪ್ ಸಿಂಹಗೆ ಈ ಬಾರಿ ಟಿಕೆಟ್ ಕೈತಪ್ಪುವ ಭೀತಿ ಶುರುವಾಗಿದೆ.
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್, ಕ್ಷೇತ್ರ ಹಂಚಿಕೆ ಮಾತುಕತೆ ವೇಳೆ ಮೈಸೂರು ಲೋಕಸಭಾ ಕ್ಷೇತ್ರ ಕೇಳಲು ದಳಪತಿಗಳ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಮಂಡ್ಯ, ಹಾಸನ, ಕೋಲಾರ, ಚಿಕ್ಕಬಳ್ಳಾಪುರ ತುಮಕೂರು ಕ್ಷೇತ್ರಗಳ ಜೊತೆಗೆ ಹೊಸದಾಗಿ ಮೈಸೂರು ಲೋಕಸಭಾ ಕ್ಷೇತ್ರ ಬೇಕೆಂದು ಬಿಜೆಪಿ ಹೈಕಮಾಂಡ್ ಬಳಿ ಬೇಡಿಕೆ ಇಡಬೇಕೆನ್ನುವ ಚರ್ಚೆ ಜೆಡಿಎಸ್ನಲ್ಲಿ ನಡೆದಿದೆ.
ಮೈಸೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಳಲು ಕುಮಾರಸ್ವಾಮಿ ಸಹ ಒಲವು ಹೊಂದಿದ್ದಾರೆ. ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಹಿಡಿತ ಮತ್ತು ಪ್ರಾಬಲ್ಯ ಹೆಚ್ಚಿದೆ. ಇದರಿಂದ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿದರೆ ಗೆಲುವಿನ ಹಾದಿ ಸುಗುಮ ಎನ್ನುವ ಲೆಕ್ಕಾಚಾರ ಕುಮಾರಸ್ವಾಮಿ ಅವರದ್ದಾಗಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರ ಹಂಚಿಕೆ ವೇಳೆ ಬಿಜೆಪಿ ಮೈಸೂರು ಕ್ಷೇತ್ರ ಬಿಟ್ಟುಕೊಟ್ಟುವಂತೆ ಪಟ್ಟು ಹಿಡಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಶೀಘ್ರದಲ್ಲೇ ಮೈಸೂರು ಭಾಗದ ಜೆಡಿಎಸ್ ಮುಖಂಡರ ಜೊತೆ ಸಭೆ ಮಾಡಲು ಪ್ಲಾನ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಹಾಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪುವ ಆತಂಕ ಶುರುವಾಗಿದೆ. ಒಂದು ವೇಳೆ ಮೈಸೂರು ಕ್ಷೇತ್ರ ಜೆಡಿಎಸ್ ಪಾಲಾದರೆ ಚಾಮರಾಜನಗರ ಇಲ್ಲ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ನೀಡುವ ಸಾಧ್ಯತೆಗಳಿವೆ.
ಆದ್ರೆ, ಪ್ರತಾಪ್ ಸಿಂಹ ಮಾತ್ರ ಈ ಬಾರಿ ಟಿಕೆಟ್ ಸಿಕ್ಕೇ ಸಿಗುತ್ತೆ ಎನ್ನುವ ಭರವಸೆಯಲ್ಲಿದ್ದು, ಕಾಂಗ್ರೆಸ್ನಿಂದ ಯಾರೇ ಸ್ಪರ್ಧಿಸಿದರೂ ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಹೇಳಿದ್ದಾರೆ.