ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿ ಹತ್ಯೆ: ಇಬ್ಬರು ಶೂಟರ್ ಸೇರಿದಂತೆ ಮೂವರ ಬಂಧನ
ನವದೆಹಲಿ: ಶ್ರೀ ರಾಷ್ಟ್ರೀಯ ರಜಪೂತ ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಇಬ್ಬರು ಶೂಟರ್‌ಗಳು ಸೇರಿದಂತೆ ಮೂವರನ್ನು ಚಂಡೀಗಢದಲ್ಲಿ ರಾಜಸ್ಥಾನ ಪೊಲೀಸರೊಂದಿಗೆ ಭಾನುವಾರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ದೆಹಲಿ ಪೊಲೀಸರ ಅಪರಾಧ ವಿಭಾಗ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಕ್ರೈಂ ಬ್ರಾಂಚ್ ಮತ್ತು ರಾಜಸ್ಥಾನ ಪೊಲೀಸರು ತಡರಾತ್ರಿ ಜಂಟಿ ಕಾರ್ಯಾಚರಣೆ ನಡೆಸಿ ಚಂಡೀಗಢದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಶೂಟರ್‌ಗಳಾದ ರೋಹಿತ್ ರಾಥೋಡ್, ನಿತಿನ್ ಫೌಜಿ ಹಾಗೂ ಸಹಚರ ಉಧಮ್ ಬಂಧಿತ ಆರೋಪಿಗಳು. ಈ ಹತ್ಯೆ ಪ್ರಕರಣದಲ್ಲಿ ಉಧಮ್ ಪಾತ್ರ ಏನು ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ದೆಹಲಿ ಪೊಲೀಸರು ರೋಹಿತ್ ಮತ್ತು ಉಧಮ್‌ನನ್ನು ದೆಹಲಿಗೆ ಕರೆತಂದಿದ್ದು, ನಿತಿನ್ ಫೌಜಿ ರಾಜಸ್ಥಾನ ಪೊಲೀಸರ ವಶದಲ್ಲಿದ್ದಾನೆ. ಈ ಹಿಂದೆ ಪ್ರಕರಣದ ಆರೋಪಿಗಳ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂ. ನಗದು ಬಹುಮಾನವನ್ನು ಪೊಲೀಸರು ಘೋಷಿಸಿದ್ದರು.
ಆರೋಪಿಗಳು ಕೊಲೆಯ ಬಳಿಕ ತಮ್ಮ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟು ರಾಜಸ್ಥಾನದ ಹರಿಯಾಣದ ಹಿಸ್ಸಾರ್‌ಗೆ ತೆರಳಿದ್ದರು. ಬಳಿಕ ಹಿಮಾಚಲ ಪ್ರದೇಶದ ಮನಾಲಿಗೆ ಹೋಗಿದ್ದರು. ನಂತರ ಚಂಡೀಗಢಕ್ಕೆ ಹೋಗಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 5 ರಂದು ರಾಜಸ್ಥಾನದ ಜೈಪುರದಲ್ಲಿರುವ ಗೊಗಮೆಡಿ ಅವರ ಮನೆಗೆ ನುಗ್ಗಿದ ಅಪರಿಚಿತರು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಹತ್ಯೆಯ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿರುವ ಗ್ಯಾಂಗ್ಸ್ಟರ್ ರೋಹಿತ್ ಗೋಡಾರಾ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಗೊಗಮೆಡಿ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ.
ಶೂಟರ್‌ಗಳು ತಲೆಮರೆಸಿಕೊಂಡಿದ್ದಾಗ ಗೋಡಾರಾನ ಆಪ್ತ ಸಹಾಯಕರಾದ ವೀರೇಂದ್ರ ಚಾಹನ್ ಮತ್ತು ದನರಾಮ್‌ನೊಂದಿಗೆ ಸಂಪರ್ಕದಲ್ಲಿದ್ದರು. ಅವರ ಸೂಚನೆಯ ಮೇರೆಗೆ ಕೊಲೆ ನಡೆಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.