ಭಾರತದಲ್ಲಿ ಸಿಎಎ ಜಾರಿ ಕಳವಳ ಉಂಟು ಮಾಡಿದೆ ಎಂದ ಅಮೆರಿಕದ ಯುಎಸ್‌ಸಿಐಆರ್‌ಎಫ್!
ನ್ಯೂಯಾರ್ಕ್: ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೊಳಿಸುವುದು ಕಳವಳ ಉಂಟು ಮಾಡಿದೆ ಎಂದು ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕುರಿತಾದ ಆಯೋಗ(ಯುಎಸ್‌ಸಿಐಆರ್‌ಎಫ್) ಹೇಳಿದೆ.
ಧರ್ಮ ಅಥವಾ ನಂಬಿಕೆಯ ಆಧಾರದ ಮೇಲೆ ಯಾರಿಗೂ ಪೌರತ್ವವನ್ನು ನಿರಾಕರಿಸಬಾರದು ಎಂದು ಯುಎಸ್‌ಸಿಐಆರ್‌ಎಫ್ ಕಮಿಷನರ್ ಸ್ಟೀಫನ್ ಶ್ನಾಕ್ ಹೇಳಿದ್ದಾರೆ.
ಸಿಎಎ ಭಾರತದ ಆಂತರಿಕ ವಿಷಯವಾಗಿದೆ. ಇದರ ಜಾರಿಯಿಂದ ಯಾರಿಂದಲೂ ಪೌರತ್ವ ಕಿತ್ತುಕೊಳ್ಳುವುದಿಲ್ಲ. ಮಾನವ ಹಕ್ಕುಗಳನ್ನು ಬೆಂಬಲಿಸುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಇತ್ತೀಚೆಗೆ ಹೇಳಿದ್ದರು.
ಭಾರತದಲ್ಲಿ ಸಿಎಎ ಜಾರಿ ಸಂಬಂಧ ಕೇಂದ್ರ ಸರ್ಕಾರ ಮಾರ್ಚ್ 11ರಂದು ಅಧಿಸೂಚನೆ ಹೊರಡಿಸಿತ್ತು. ಈ ಕಾಯ್ದೆಯು ಯಾವುದೇ ದಾಖಲೆಗಳು ಇಲ್ಲದೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಿಂದ 2014ರ ಡಿಸೆಂಬರ್ 31ಕ್ಕೆ ಮೊದಲು ಭಾರತ ಪ್ರವೇಶಿಸಿದ ಮುಸ್ಲಿಮೇತರರಿಗೆ ಭಾರತದ ಪೌರತ್ವವನ್ನು ನೀಡುತ್ತದೆ. ಈ ಮೂರು ದೇಶಗಳಲ್ಲಿ ದೌರ್ಜನ್ಯಕ್ಕೆ ಗುರಿಯಾಗಿ ಭಾರತಕ್ಕೆ ಬಂದ ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಮತ್ತು ಕ್ರೈಸ್ತ ಸಮುದಾಯದವರಿಗೆ ಭಾರತದ ಪೌರತ್ವವನ್ನು ನೀಡಲಿದೆ ಎಂದು ಕೇಂದ್ರ ಸರಕಾರ ಈಗಾಗಲೇ ಸ್ಪಷ್ಟಪಡಿಸಿದೆ.