ಹಣೆಗೆ ಕುಂಕುಮ ಹಚ್ಚಿಕೊಳ್ಳಲು ನಿರಾಕರಿಸಿದ ಬಿಜೆಪಿ ನಾಯಕ ಆರ್. ಅಶೋಕ್! ನಿಮ್ಮ ನಾಯಕರಿಗೆ ಕುಂಕುಮಕ್ಕಿಂತ ಮೇಕಪ್ ಮುಖ್ಯವೇ ಎಂದು ಪ್ರಶ್ನಿಸಿದ ಕಾಂಗ್ರೆಸ್
ಬೆಂಗಳೂರು: ಹಣೆಗೆ ಕುಂಕುಮ ಹಚ್ಚಿಕೊಳ್ಳಲು ವಿಪಕ್ಷ ನಾಯಕ ಆರ್. ಅಶೋಕ್ ನಿರಾಕರಿಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೆಪೇಟ್ ನಲ್ಲಿರುವ ಬಿಜೆಪಿ ಕಚೇರಿಗೆ ಭಾನುವಾರ ಆರ್. ಅಶೋಕ್ ಭೇಟಿ ನೀಡಿದಾಗ ಹಿರಿಯ ಮುಖಂಡರೊಬ್ಬರು ಕುಂಕುಮ ಹಚ್ಚಲು ಮುಂದಾಗಿದ್ದಾರೆ. ಆದರೆ, ಅಶೋಕ್, ಕುಂಕುಮ ಹಚ್ಚದಂತೆ ಬೇಡ ಎನ್ನುವ ಮೂಲಕ ತಡೆದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿದ್ದು, ವಿಪಕ್ಷ ನಾಯಕನ ನಡೆಗೆ ವಿರೋಧ ವ್ಯಕ್ತವಾಗುತ್ತಿದೆ.
ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು ಹಣೆಗೆ ಹಿರಿಯ ಮುಖಂಡ ವಿಶ್ವನಾಥ್ ಪವಾರ್ ಅವರು ತಿಲಕ ಇಡಲು ಮುಂದಾದಾಗ ಅಶೋಕ ಅವರು ನಿರಾಕರಿಸಿರುವ ವಿಡಿಯೋ ಒಂದನ್ನು ಸಾಮಾಜಿಕ ಜಾಣದಲ್ಲಿ ಪೋಸ್ಟ್ ಮಾಡಿ ಬೂಟಾಟಿಕೆಯ ಧಾರ್ಮಿಕತೆ ಎಂದು ವ್ಯಂಗ್ಯವಾಡಿದೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೇಪೇಟ್ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದ್ದು ಇಧರ ವಿಡಿಯೋ ಇದೀಗ ವೈರಲ್ ಆಗಿದೆ. ಪಟ್ಟಣಕ್ಕೆ ಆಗಮಿಸಿದ್ದ ಅಶೋಕ್ ಅವರನ್ನು ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಜೈಕಾರ ಹಾಕಿ ಸ್ವಾಗತಿಸಿದರು. ಬಳಿಕ ಶಾಲು ಹೊದಿಸಿ ಗೌರವ ಸಲ್ಲಿಸಿದರು.
ಈ ವೇಳೆ ಕಾರ್ಯಕರ್ತರೊಬ್ಬರು ಅಶೋಕ ಅವರಿಗೆ ಹಾರ ಹಾಕಲು ಬಂದಾಗ ಅಶೋಕ ಅವರು ಅದನ್ನು ಹಿರಿಯ ಮುಖಂಡ ಡಾ ವಿಶ್ವನಾಥ್ ಪವಾರ್ ಅವರಿಗೆ ಹಾಕಿದರು. ಈ ವೇಳೆ ಪವಾರ್ ಅವರು ಅಶೋಕ ಅವರ ಹಣೆಗೆ ತಿಲಕ ಇಡಲು ಮುಂದಾಗಿದ್ದು ಅಶೋಕ ಅವರು ನಿರಾಕರಿಸಿದ್ದಾರೆ. ಈ ವೇಳೆ ಶಾಸಕ ಡಾ ಅವಿನಾಶ ಜಾಧವ್ ಸೇರಿದಂತೆ ಅನೇಕ ಸ್ಥಳೀಯ ಮುಖಂಡರು ಇದ್ದರು.
ಈ ವಿಚಾರವಾಗಿ ಬಿಜೆಪಿ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ``ಕುಂಕುಮ ಎಂದರೆ ಅಲರ್ಜಿಯೇ, ಅಸಹ್ಯವೇ?'' ಎಂದು ಪ್ರಶ್ನಿಸಿದೆ. ``ಕುಂಕುಮ ಹಚ್ಚಲು ಬಂದರೆ ಹೌಹಾರಿ ನಿರಾಕರಿಸುವ ಅಶೋಕ್ ಅವರ ಮೂಲಕ ಬಿಜೆಪಿಯವರ ಬೂಟಾಟಿಕೆಯ ಹುಸಿ ಧಾರ್ಮಿಕತೆ ನಾಟಕ ಬಯಲಾಗಿದೆ. ಕೇಸರಿ ಶಾಲು, ಕುಂಕುಮ ಮುಂತಾದವುಗಳು ಬಿಜೆಪಿಗರ ಯುವ ಸಮುದಾಯವನ್ನು ದಿಕ್ಕು ತಪ್ಪಿಸುವ ಟೂಲ್ ಕಿಟ್ ಹೊರತು ಬಿಜೆಪಿಗರ ಅಸಲಿ ಆಚರಣೆಯಲ್ಲ. ಬೊಮ್ಮಾಯಿಯವರು ಕುಂಕುಮಾವನ್ನು ಉಜ್ಜಿ ಉಜ್ಜಿ ಅಳಿಸಿಕೊಂಡರೆ, ಅಶೋಕ್ ಅವರು ಹಚ್ಚಿಕೊಳ್ಳಲು ನಿರಾಕರಿಸುತ್ತಾರೆ, ನಿಮ್ಮ ನಾಯಕರಿಗೆ ಕುಂಕುಮಕ್ಕಿಂತ ಮೇಕಪ್ ಮುಖ್ಯವೇ ಎಂದು ವ್ಯಂಗ್ಯವಾಡಿದೆ.