ತುಮಕೂರು ಕಾರಿನಲ್ಲಿ ಮೂವರನ್ನು ಸುಟ್ಟು ಹತ್ಯೆ ಮಾಡಿದ ಪ್ರಕರಣ; ಇಬ್ಬರು ಪ್ರಮುಖ ಆರೋಪಿಗಳ ಬಂಧನ; ಆರು ಮಂದಿ ಆರೋಪಿಗಳಿಗಾಗಿ ಹುಡುಕಾಟ; ಹತ್ಯೆಗೆ ಕಾರಣ ಬಿಚ್ಚಿಟ್ಟ ಪೊಲೀಸರು

ತುಮಕೂರು ಕಾರಿನಲ್ಲಿ ಮೂವರನ್ನು ಸುಟ್ಟು ಹತ್ಯೆ ಮಾಡಿದ ಪ್ರಕರಣ; ಇಬ್ಬರು ಪ್ರಮುಖ ಆರೋಪಿಗಳ ಬಂಧನ; ಆರು ಮಂದಿ ಆರೋಪಿಗಳಿಗಾಗಿ ಹುಡುಕಾಟ; ಹತ್ಯೆಗೆ ಕಾರಣ ಬಿಚ್ಚಿಟ್ಟ ಪೊಲೀಸರು

ತುಮಕೂರು: ಕಾರಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾದ ಮೂವರ ಹತ್ಯೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಇನ್ನೂ ಆರು ಮಂದಿಯ ಹುಡುಕಾಟ ಮುಂದುವರಿಸಿದ್ದಾರೆ.

ಬಂಧಿತರನ್ನು ಶಿರಾ ಗೇಟ್ ಬಡಾವಣೆಯಲ್ಲಿ ವಾಸವಾಗಿರುವ ಪಾತರಾಜು ಮತ್ತು ಗಂಗರಾಜು ಎಂದು ಗುರುತಿಸಲಾಗಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಆರು ಮಂದಿ ಆರೋಪಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಆರೋಪಿಗಳು ಈಗಾಗಲೇ ಕೊಲೆಯಾಗಿರುವ ಇಶಾಕ್, ಶಾಹುಲ್ ಹಮೀದ್, ಸಿದ್ದಿಕ್ ಅವರೊಂದಿಗೆ ಸಂಪರ್ಕ ಹೊಂದಿದ್ದರು. ಅಲ್ಲದೇ ಈ ಮೂವರು ಮೃತಪಟ್ಟವರು ಆರೋಪಿ ಪಾತರಾಜನ ಜೊತೆ ಸೇರಿ ಸುಮಾರು ಆರು ತಿಂಗಳಿನಿಂದ ನಿಧಿ ಹುಡುಕುವ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಯಾದವರು ಪಾತರಾಜನಿಗೆ ಸುಮಾರು ಆರು ಲಕ್ಷ ರೂ. ಹಣವನ್ನು ನೀಡಿದ್ದರು. ಹಣ ಪಡೆದು ಆರು ತಿಂಗಳು ಕಳೆದರೂ ನಿಧಿ ಹುಡುಕಿ ಕೊಟ್ಟಿಲ್ಲವಾದ್ದರಿಂದ ಹಣ ವಾಪಸ್ ಕೊಡುವಂತೆ, ಇಲ್ಲವಾದರೆ ಪೊಲೀಸರಿಗೆ ದೂರು ನೀಡುವುದಾಗಿ ಮೃತರು ಪಾತರಾಜನ ಹಿಂದೆ ಬಿದ್ದಿದ್ದರು. ಹೀಗಾಗಿ ಅವರನ್ನು ಹೇಗಾದರೂ ಮಾಡಿ ಕೊಲೆ ಮಾಡಬೇಕೆಂಬ ಉದ್ದೇಶದಿಂದ ಪಾತರಾಜು ತನಗೆ ಪರಿಚಯದ ಸತ್ಯಮಂಗಲದ ವಾಸಿ ಗಂಗರಾಜು ಮತ್ತು ಅವನ 6 ಜನ ಸಹಚರರಾದ ಪುಟ್ಟಸ್ವಾಮಯ್ಯ, ನವೀನ್, ಕೃಷ್ಣ, ಗಣೇಶ, ಕಿರಣ್ , ಸೈಮನ್ ಅವರೊಂದಿಗೆ ಸೇರಿಕೊಂಡು ಮೂರು ಜನರನ್ನು ಕೊಲೆ ಮಾಡಿದರೆ, ಆರೋಪಿತರಿಗೆ 3 ಕೆ.ಜಿ ಚಿನ್ನ ಕೊಡುವ ಆಮಿಷ ಒಡ್ಡಿ ಕೊಲೆ ಮಾಡುವ ಸಂಚನ್ನು ಪಾತರಾಜು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮಾ. 22ರಂದು 12 ಗಂಟೆಗೆ ಮೃತರನ್ನು ಚಿನ್ನ ನೀಡುವುದಾಗಿ ಬೀರನಕಲ್ಲು ಬೆಟ್ಟದ ಸಮೀಪ ಕರೆಸಿಕೊಂಡು ಅವರನ್ನು ಮಚ್ಚು, ಲಾಂಗ್, ಡ್ರ್ಯಾಗರ್​ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರು. ನಂತರ ಅವರದೇ ಕಾರಿನಲ್ಲಿ ಕುಚ್ಚಂಗಿ ಕೆರೆಗೆ ತೆಗೆದುಕೊಂಡು ಹೋಗಿ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ ವಿ ಅವರು ತಿಳಿಸಿದ್ದಾರೆ. ಈ ಸಂಬಂಧ ಕೋರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article