ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆಯೇ ಮೊಹಿದೀನ್ ಬಾವ? ಕಾಂಗ್ರೆಸ್ ಬಾಗಿಲು ಮುಚ್ಚುತ್ತಿದ್ದಂತೆಯೇ ಬಿಜೆಪಿ ರಾಷ್ಟ್ರೀಯ ವೀಕ್ಷಕ ಡಾ.ರಾಧಾಕೃಷ್ಣ ಪ್ರಸಾದ್ ಭೇಟಿಯಾಗಿ ಚರ್ಚೆ ನಡೆಸಿರುವ ಬಾವ! ಕಂಕನಾಡಿಯಲ್ಲಿ ನಡೆಯಲಿರುವ ಸಭೆಯಲ್ಲಿ ಅಂತಿಮ ನಿರ್ಧಾರ!
ಮಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೈ ಪಕ್ಷದ ಟಿಕೆಟ್ ತಪ್ಪಿತೆಂದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಮೊಹಿದೀನ್ ಬಾವ, ಬಿಜೆಪಿಯತ್ತ ಮುಖಮಾಡಿದ್ದಾರೆನ್ನಲಾಗುತ್ತಿದ್ದು, ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಇಂದು ಕಂಕನಾಡಿಯಲ್ಲಿ ಸಭೆಯನ್ನು ಕರೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ಸಿನಿಂದ ಕಳೆದ ಬಾರಿ ಟಿಕೆಟ್ ಕೈತಪ್ಪಿದ್ದ ವೇಳೆ ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಹಾಗೂ ಕಾಂಗ್ರೆಸ್ ಪಕ್ಷದ ಬಗ್ಗೆ ಅತ್ಯಂತ ಹೀನವಾಗಿ ಸಾರ್ವಜನಿಕವಾಗಿ ಮಾತನಾಡಿದ್ದ ಮೊಹಿದೀನ್ ಬಾವ, ಕೆಲ ದಿನಗಳ ಹಿಂದೆ ಮಾತಿನ ನಡುವೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯ ವಿರುದ್ಧವೂ ಕೀಳುಮಟ್ಟದಲ್ಲಿ ಮಾತನಾಡಿದ್ದರು. ಇದರಿಂದ ಕಾಂಗ್ರೆಸ್ ಸೇರಲು ಹಪಹಪಿಸುತ್ತಿದ್ದ ಬಾವ ಅವರಿಗೆ ಕಾಂಗ್ರೆಸ್ ಬಾಗಿಲು ಬಹುತೇಕ ಮುಚ್ಚಿದೆ ಎನ್ನಲಾಗಿದೆ.
ರಾಜಕೀಯವಾಗಿ ನೆಲೆ ಕಳೆದುಕೊಂಡಿರುವ ಬಾವ ಇದರ ನಡುವೆ ಬಿಜೆಪಿ ರಾಷ್ಟ್ರೀಯ ವೀಕ್ಷಕ ಡಾ.ರಾಧಾಕೃಷ್ಣ ಪ್ರಸಾದ್ ಅವರನ್ನು ಭೇಟಿಯಾಗಿ ಸುಮಾರು ಅರ್ಧ ಗಂಟೆಗಳ ಕಾಲ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ. ಈ ಸಂಧರ್ಭದಲ್ಲಿ ಬಾವ ಅವರಿಗೆ ಉನ್ನತ ಸ್ಥಾನಮಾನ ನೀಡುವ ಭರವಸೆ ಕೂಡ ನೀಡಿದ್ದರು ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಇಂದು ಕಂಕನಾಡಿಯಲ್ಲಿ ಸಭೆಯನ್ನು ಕರೆದಿದ್ದಾರೆ ಎಂದು ಬಾವ ಆಪ್ತರು ಹೇಳಿಕೊಂಡಿದ್ದಾರೆ.