ವಿಶ್ವದ ಅತ್ಯಂತ ಸಂತೋಷಭರಿತ ದೇಶ ಯಾವುದು ಗೊತ್ತೇ..? ಭಾರತ ಎಷ್ಟನೇ ಸ್ಥಾನದಲ್ಲಿದೆ ನೋಡಿ...!
ಹೆಲ್ಸಿಂಕಿ: ವಿಶ್ವದ ಅತ್ಯಂತ ಸಂತೋಷಭರಿತ ದೇಶ ಯಾವುದು ಎಂದರೆ ಅದು ಫಿನ್ಲೆಂಡ್. ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಪ್ರಾಯೋಜಿತ ಸಮೀಕ್ಷಾ ವರದಿಯಲ್ಲಿ ಫಿನ್ಲೆಂಡ್ ವಿಶ್ವದ ಅತ್ಯಂತ ಸಂತೋಷಭರಿತ ದೇಶವಾಗಿ ಆಗ್ರಾ ಸ್ಥಾನದಲ್ಲಿದೆ.
ಫಿನ್ಲೆಂಡ್ ಸತತವಾಗಿ ಏಳನೇ ಬಾರಿಯೂ ಮೊದಲನೇ ಸ್ಥಾನದಲ್ಲಿದೆ. ಅಫ್ಗಾನಿಸ್ತಾನ ಅತೃಪ್ತಿಕರ ರಾಷ್ಟ್ರವೆಂದು ದಾಖಲಾಗಿದೆ.143 ದೇಶಗಳ ಪಟ್ಟಿಯಲ್ಲಿ ಭಾರತ 126ನೇ ಸ್ಥಾನ ಪಡೆದಿದೆ. ಕಳೆದ ವರ್ಷ ಭಾರತ ಸಹ ಇದೇ ಸ್ಥಾನದಲ್ಲಿತ್ತು. ವಿಶೇಷವೆಂದರೆ ಯುದ್ಧ ಪೀಡಿತ ಪ್ಯಾಲೆಸ್ಟೇನ್ 103ನೇ ಸ್ಥಾನ ಪಡೆದಿದೆ.
ಯುರೋಪಿಯನ್ ರಾಷ್ಟ್ರಗಳು ಸಂತೋಷ ಸೂಚ್ಯಂಕದಲ್ಲಿ ಅಗ್ರ ಸ್ಥಾನಗಳಲ್ಲಿ ಮುಂದುವರಿದಿವೆ. ಫಿನ್ಲೆಂಡ್, ಡೆನ್ಮಾರ್ಕ್, ಐಸ್‍ಲ್ಯಾಂಡ್, ಸ್ವೀಡನ್ ಮತ್ತು ಇಸ್ರೇಲ್ ಅಗ್ರ 5 ಸ್ಥಾನ ಪಡೆದಿವೆ.
10 ವರ್ಷದಲ್ಲಿ ಇದೇ ಮೊದಲ ಬಾರಿಗೆ ಅಮೆರಿಕ ಮತ್ತು ಜರ್ಮನಿ ಅಗ್ರ 20ರ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಅಮೆರಿಕ 23 ಮತ್ತು ಜರ್ಮನಿ 24ನೇ ಸ್ಥಾನಕ್ಕೆ ಕುಸಿದಿದೆ.
ಪೂರ್ವ ಯುರೋಪಿಯನ್ ದೇಶಗಳಾದ ಸರ್ಬಿಯಾ, ಬಲ್ಗೇರಿಯಾ ದೇಶಗಳು ತಮ್ಮ ಶ್ರೇಯಾಂಕವನ್ನು ಸುಧಾರಿಸಿಕೊಂಡರೆ ಅಫ್ಘಾನಿಸ್ತಾನ, ಲೆಬನಾನ್ ಮತ್ತು ಜೋರ್ಡಾನ್ ದೇಶಗಳ ಶ್ರೇಯಾಂಕ ತೀವ್ರ ಕುಸಿದಿದೆ.
ಆದಾಯ, ಭ್ರಷ್ಟಾಚಾರದ ಮಟ್ಟ, ವೈಯಕ್ತಿಕ ಸ್ವಾತಂತ್ರ್ಯ, ಆರೋಗ್ಯಕರ ಜೀವನ, ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ), ಸಾಮಾಜಿಕ ಬೆಂಬಲ ಮುಂತಾದ ಅಂಶಗಳನ್ನು ಪರಿಗಣಿಸಿ ಈ ಸೂಚ್ಯಂಕ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಜನರ ಬದುಕಿನ ಮೇಲೆ ಆಗಿರುವ ಪರಿಣಾಮ, ಮಾನಸಿಕ ಸ್ಥಿತಿಯನ್ನು ಪರಿಗಣಿಸಲಾಗಿದೆ.