ಕಾಂಗ್ರೆಸ್ ಸೇರಲ್ಲ; ಬಿಜೆಪಿ ಬಿಡಲ್ಲ: ಚುನಾವಣೆ ಬಳಿಕ ಬಿಜೆಪಿಯ ಶುದ್ದೀಕರಣ; ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದ ಸದಾನಂದ ಗೌಡ

ಕಾಂಗ್ರೆಸ್ ಸೇರಲ್ಲ; ಬಿಜೆಪಿ ಬಿಡಲ್ಲ: ಚುನಾವಣೆ ಬಳಿಕ ಬಿಜೆಪಿಯ ಶುದ್ದೀಕರಣ; ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದ ಸದಾನಂದ ಗೌಡ

ಬೆಂಗಳೂರು: ಕಾಂಗ್ರೆಸ್'ನಿಂದ ಆಹ್ವಾನ ಬಂದಿದ್ದು ನಿಜ, ನಾವು ನಿಮಗೆ ಟಿಕೆಟ್ ಕೊಡುತ್ತೇವೆ. ನಿಮ್ಮನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಆಹ್ವಾನ ಬಂದಿತ್ತು. ಆದರೆ ನಾನು, ಕಾಂಗ್ರೆಸ್‌ ಸೇರಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಸ್ಪಷ್ಟಪಡಿಸಿದ್ದಾರೆ.

ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ರಾಜ್ಯ ನಾಯಕರ ವಿರುದ್ಧ ಮುನಿಸಿಕೊಂಡಿರುವ ಸಂಸದ ಡಿವಿ ಸದಾನಂದಗೌಡ ಅವರು ಇಂದು ಸುದ್ದಿಗೋಷ್ಠಿ ನಡೆಸಿ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಬಿಜೆಪಿ ಶುದ್ಧೀಕರಣ ಮಾಡುವುದಾಗಿ ಶಪಥ ಮಾಡಿದ್ದಾರೆ. 

ಸ್ಫರ್ಧೆ ಮಾಡಿ ಅಂತಾ ನನ್ನ ಆರತಿ ಮಾಡಿ ಕರೆದುಕೊಂಡು ಬಂದು ಮಂಗಳಾರತಿ ಮಾಡಿ ಹೊರಗೆ ಕಳುಹಿಸಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಗುಡುಗಿದ್ದಾರೆ.

ಎನ್​ಡಿಎಗೆ ಜೆಡಿಎಸ್ ಸೇರ್ಪಡೆ ಆಗಿರುವುದನ್ನು ಸ್ವಾಗತಿಸುತ್ತೇನೆ. ಆದರೆ ಈ ಸಂದರ್ಭದಲ್ಲಿ ಪಕ್ಷಕ್ಕೆ ಜೀವ ತೇಯ್ದವರನ್ನು ಕಡೆಗಣಿಸಬಾರದು ಎಂದು ಹೇಳಿರುವ ಸದಾನಂದಗೌಡ, ನನ್ನ ಎಲ್ಲಾ ಮಾತುಗಳೂ ಕರ್ನಾಟಕ ಬಿಜೆಪಿಗೆ ಸೀಮಿತವಾಗಿದೆ. ನಾನೊಬ್ಬ ಕನ್ನಡಿಗನಾಗಿ ಮಾತಾಡುತ್ತಿದ್ದೇನೆ. ಬಿಜೆಪಿ ಶುದ್ದೀಕರಣ ಮಾಡುವವರೆಗೆ ನಾನು ವಿರಮಿಸುವುದಿಲ್ಲ ಎಂದು ಹೇಳಿದ್ದಾರೆ.

ಸಮಾನ ಮನಸ್ಕರ ಸಭೆ ಕರೆಯುತ್ತೇನೆ

ಸ್ಫರ್ಧೆ ಮಾಡಿ ಅಂತಾ ನನ್ನ ಆರತಿ ಮಾಡಿ ಕರೆದುಕೊಂಡು ಬಂದು ಮಂಗಳಾರತಿ ಮಾಡಿ ಹೊರಗೆ ಕಳುಹಿಸಿದ್ದಾರೆ. ಚುನಾವಣೆ ಬಳಿಕ ಶುದ್ದೀಕರಣಕ್ಕೆ ವೇಗ ಕೊಡುತ್ತೇನೆ. ಸಮಾನ ಮನಸ್ಕರ ಸಭೆ ಕರೆಯುತ್ತೇನೆ ಎಂದು ಸದಾನಂದಗೌಡ ಹೇಳಿದ್ದಾರೆ. 

ಪಕ್ಷ ಶುದ್ಧೀಕರಣ ಒಬ್ಬನಿಂದ ಆಗುವ ಕೆಲಸವಲ್ಲ. ಪಕ್ಷದ ಜವಾಬ್ದಾರಿ ವಹಿಸಿಕೊಂಡವರು ಸ್ವಾರ್ಥಿಗಳು. ನಮ್ಮ ಮನೆಯವರಿಗೆ, ಸಂಬಂಧಿಗಳಿಗೆ, ಚೇಲಾಗಳಿಗೆ. ಎಲ್ಲವೂ ನಮಗೇ ಸಿಗಬೇಕು ಎಂದು ಸ್ವಾರ್ಥಿಗಳಾಗಿದ್ದಾರೆ. ಕಾರ್ಯಕರ್ತರಿಗೆ ಯಾವುದೇ ಅವಕಾಶ ಕೊಡುತ್ತಿಲ್ಲ ಎಂದು ಹೇಳುವ ಮೂಲಕ ಯಡಿಯೂರಪ್ಪ ವಿರುದ್ಧ ಸದಾನಂದಗೌಡ ಆಕ್ರೋಶ ಹೊರಹಾಕಿದರು.

ಪರಿವಾರವಾದ, ಭ್ರಷ್ಟಾಚಾರವಾದ ಬಗ್ಗೆ ನಾನು ಪಲಾಯನವಾದ ಮಾಡಿದೆ ಅಂತಾ ಆಗುವುದು ಬೇಡ ಎಂದು ಇಂದು ಸುದ್ದಿಗೋಷ್ಠಿ ಮಾಡಿದ್ದೇನೆ ಎಂದು ಹೇಳಿದ ಸದಾನಂದಗೌಡ, ಶುದ್ದೀಕರಣಕ್ಕೆ ಯಾವುದೇ ಬೆಲೆ ತೆತ್ತು ಆದರೂ ಕೂಡಾ ಕಾರ್ಯಕರ್ತನಾಗಿ ನಿಮ್ಮ ಸದಾನಂದ ಗೌಡ ರೆಡಿ ಇದ್ದಾನೆ ಎಂದರು. ಅಲ್ಲದೆ, ಎರಡನೇ ಬಾರಿ ನಾನು ಸುದ್ದಿಗೋಷ್ಠಿ ಮಾಡಿ ವರಿಷ್ಠರು ನಡೆ ಬಗ್ಗೆ ಮಾತಾಡಿದ ಮೂರೇ ದಿನದಲ್ಲಿ ರಾಜ್ಯಾಧ್ಯಕ್ಷರ, ವಿಪಕ್ಷ ನಾಯಕರ ನೇಮಕ ಆಯಿತು.

ನನಗೆ ಬಿಜೆಪಿ ಟಿಕೆಟ್​​ ತಪ್ಪಿದ್ದಕ್ಕೆ ನನಗೆ ನೋವಾಗಿದೆ. ನನಗೆ ಕಾಂಗ್ರೆಸ್​ನಿಂದ ಆಹ್ವಾನ ಬಂದಿರುವುದು ಸತ್ಯ ಎಂದು ಸದಾನಂದಗೌಡ ಹೇಳಿದರು. ಪಕ್ಷ ಶುದ್ಧೀಕರಣ ನನ್ನ ಮುಖ್ಯ ಉದ್ದೇಶ. ಮುಂದಿನ ದಿನಗಳಲ್ಲಿ ಅವರು ಪಶ್ಚಾತ್ತಾಪ ಪಡುತ್ತಾರೆ. ಮುಂದಿನ ನಡೆ ಏನು ಎಂದು ಹಲವರು ಕೇಳಿದ್ದಾರೆ. ನನ್ನ ಮುಂದಿನ ನಡೆ ಪಕ್ಷ ಶುದ್ಧೀಕರಣ. ಬಿಜೆಪಿ ತೊರೆಯುವುದಿಲ್ಲ, ಕಾಂಗ್ರೆಸ್ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಾವೇರಿ ವಿವಾದ ಆದಾಗ ರಾತ್ರೋ ರಾತ್ರಿ ಅಫಿಡವಿಟ್ ಹಾಕಿಸಿದ್ದು ಬೇರೆ ಲಾ ಮಿನಿಸ್ಟರ್ ಆಲ್ಲ, ಸದಾನಂದ ಗೌಡ. ಇದನ್ನು ನಮ್ಮ ಪಕ್ಷದವರು ತಿಳಿದುಕೊಳ್ಳಬೇಕು ಎಂದು ಅವರು ಆಕ್ರೋಶ ಹೊರಹಾಕಿದರು. ಮೋದಿ ಮತ್ತೊಮ್ಮೆ ಪ್ರಧಾನಿ ಆಗಲು ರಾಜ್ಯದಲ್ಲಿ ಬಿಜೆಪಿ ಜನರು ಒಪ್ಪಿಕೊಳ್ಳುವ ಪಕ್ಷ ಆಗಬೇಕು. ಮೋದಿ ಹೇಳಿದ ಬಿಜೆಪಿ ಕರ್ನಾಟಕದಲ್ಲಿ ಇರಬೇಕು. ಮೋದಿ ಹೇಳಿದ ಪರಿವಾರವಾದ ರಹಿತ, ಜಾತಿವಾದ ರಹಿತ ಭ್ರಷ್ಟಾಚಾರ ರಹಿತವಾದ ಪಕ್ಷ ರಾಜ್ಯದಲ್ಲಿ ಇರಬೇಕು. ಇದನ್ನು ಶುದ್ದೀಕರಣಕ್ಕೆ ನಿರಂತರವಾದ ಹೋರಾಟ ನಾನು ಮಾಡುತ್ತೇನೆ ಎಂದರು.

ಶುದ್ದೀಕರಣವಾಗಬೇಕು ಎಂಬ ಮಾನಸಿಕತೆ ಇರುವ ಒಂದಷ್ಟು ಜನ ಪಕ್ಷದಲ್ಲಿ ಇದ್ದಾರೆ. ರಾಜ್ಯದಲ್ಲಿ ಪಕ್ಷದ ಜವಾಬ್ದಾರಿ ವಹಿಸಿಕೊಂಡವರು ಸ್ವಾರ್ಥಿಗಳಾಗಿದ್ದಾರೆ. ಪಕ್ಷ ನನ್ನ ಮಕ್ಕಳಿಗೆ, ಮನೆಯವರಿಗೆ, ಜಾತಿಯವರಿಗೆ ಚೇಲಾಗಳಿಗೆ ಅಂತಾ ಅವರು ತಿಳಿದುಕೊಂಡಿದ್ದಾರೆ. ಕರ್ನಾಟಕದಲ್ಲಿ ಮನೆಯವರಿಗೆ, ಜಾತಿಯವರಿಗೆ ಪಕ್ಷ ಆಗಬಾರದು ಎಂದರು.

ಮಾಜಿ ಸಿಎಂ, ಮಾಜಿ ಡಿಸಿಎಂ ಚುನಾವಣೆಗೆ ಸ್ಫರ್ಧೆಗೆ ಒತ್ತಾಯ ಮಾಡಿದ ವಿಚಾರವಾಗಿ ಮಾತನಾಡಿದ ಸದಾನಂದಗೌಡ, ಸುಳ್ಳು ಹೇಳುವ ನಾಯಕರು ಬಿಜೆಪಿಗೆ ಆಗಬಾರದು. ಆಡಳಿತ ಮಾಡುವವರು ಸತ್ಯವಂತರಾಗಬೇಕು. ನನ್ನ ಹೆಸರು ಒಂದೇ ಇದ್ದಾಗ ಅದನ್ನು ಕೇಂದ್ರದಲ್ಲಿ ಸಮರ್ಥವಾಗಿ ಮಂಡನೆ ಮಾಡದೇ ಇದ್ದವರು ನಾಯಕರು ಆಗಲು ಸಾಧ್ಯವಿಲ್ಲ ಎಂದು ಹೇಳುವ ಮೂಲ ಪರೋಕ್ಷವಾಗಿ ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರ ಹಾಗೂ ಆರ್.ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದರು.

ಶೋಭಾ ಕರಂದ್ಲಾಜೆ ಪರ ಎರಡು ದಿನ ಪ್ರಚಾರಕ್ಕೆ ಹೋಗಿದ್ದೆ. ಇನ್ನು ಮುಂದೆ ಪ್ರಚಾರಕ್ಕೆ ಹೋಗಲ್ಲ ಎಂಬ ಪ್ರಶ್ನೆ ಉದ್ಭವಿಸಲ್ಲ ಎಂದು ಹೇಳಿದ ಸದಾನಂದಗೌಡ, ನಾನು ವರಿಷ್ಠರ​ ಬಗ್ಗೆ ಏನೂ ಮಾತಾಡುವುದಕ್ಕೆ ಇಚ್ಛಿಸಲ್ಲ. ರಾಜ್ಯದ ನಾಯಕರಿಗೂ ಸ್ಪಲ್ಪ ಸ್ವಯಂ ಪ್ರಜ್ಞೆ ಬೇಕಲ್ವಾ? ರಾಜ್ಯದ ಬೆಳವಣಿಗೆ ಬಗ್ಗೆ, ಕುಟುಂಬವಾದದ ಬಗ್ಗೆ ಹೇಳಿಲ್ಲ. ವರಿಷ್ಠರಿಗೆ ನಾನು ಹೇಳಿಲ್ಲ, ಅವರೇ ತಿಳಿದುಕೊಂಡಿದ್ದಾರೆ ಎಂದರು.

ದೇವೇಗೌಡರ ಮೆಟೀರಿಯಲ್​ಗೆ ಬಿಜೆಪಿ ಸ್ಟಿಕ್ಕರ್ ಅಂಟಿಸಿರುವುದನ್ನು ನೀವು ಒಪ್ಪುತ್ತೀರಾ ಎಂದು ಒಕ್ಕಲಿಗರ ಸಂಘದವರು ನನ್ನ ಕೇಳಿದರು. ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕರು ಬದಲಾಗುತ್ತಾರೆ ಅಂತಾ ಈಶ್ವರಪ್ಪ ಹೇಳಿದ್ದಾರೆ. ನೀವು ಅರ್ಥ ಮಾಡಿಕೊಳ್ಳಿ. ರಾಜ್ಯದ ಬೆಳವಣಿಗೆ ಬಗ್ಗೆ, ಕುಟುಂಬವಾದದ ಬಗ್ಗೆ ನಾನು ಹೈಕಮಾಂಡ್​ಗೆ ಹೇಳಲು ಹೋಗಲ್ಲ. ಮಾಧ್ಯಮದಲ್ಲಿ ನೋಡಿ ಅವರೇ ತಿಳಿದುಕೊಳ್ಳುತ್ತಾರೆ ಎಂದರು.

Ads on article

Advertise in articles 1

advertising articles 2

Advertise under the article