ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದ ಸಮಸ್ಯೆ, ಅಭಿವೃದ್ಧಿ ವಿಷಯಗಳು ಚರ್ಚೆಯಾಗಬೇಕು: ನಾಯಕರ ಹೆಸರಿನಲ್ಲಿ ಗೆದ್ದವರು ಕ್ಷೇತ್ರದ ಕೆಲಸ ಮಾಡಲ್ಲ: ಸಿಂಪ್ಲಿಸಿಟಿ ಚುನಾವಣಾ ವಿಷಯ ಆಗಬಾರದು, ಕೆಲಸ ಮುಖ್ಯ ಆದ್ಯತೆಯಾಗಬೇಕು
Wednesday, March 20, 2024
ಉಡುಪಿ: ನಾಯಕರ ಹೆಸರಿನಲ್ಲಿ ಮತ ಪಡೆದು ಗೆದ್ದವರು ಕ್ಷೇತ್ರದ ಕೆಲಸ ಮಾಡಲ್ಲ. ಮತ್ತೊಂದು ಅವಧಿಗೆ ಪುನಃ ನಾಯಕರ ಹೆಸರಿನಲ್ಲಿ ಮತ ಕೇಳುತ್ತಾರೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು. ಕ್ಷೇತ್ರದ ಅಭಿವೃದ್ಧಿ ಮಾಡಿದವರಿಗೆ ಮತ ನೀಡಬೇಕು. ಕ್ಷೇತ್ರದ ಕೆಲಸ ಕಾರ್ಯದ ಆಧಾರದಲ್ಲಿ ಮತ ಕೇಳಬೇಕು ಎಂದು ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.
ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಅಧ್ಯಕ್ಷೀಯ ಚುನಾವಣೆ ವ್ಯವಸ್ಥೆ ಇಲ್ಲ. ಯಾರು ಕ್ಷೇತ್ರದ ಕೆಲಸ ಮಾಡುತ್ತಾರೆಯೋ ಅವರಿಗೆ ಮತ ಹಾಕಬೇಕು. ನಾನು ಯಾವುದೇ ನಾಯಕರ ಹೆಸರಿನಲ್ಲಿ ಮತ ಕೇಳುವುದಿಲ್ಲ ಎಂದರು.
ಎಲ್ಲ ಬಂಟ ಸಮುದಾಯದ ಮತಗಳು ನನ್ನದಾಗುವುದಿಲ್ಲ. ಹಾಗೆ ಎಲ್ಲ ಬಿಲ್ಲವ ಸಮುದಾಯದ ಮತಗಳು ಅವರದಾಗುವುದಿಲ್ಲ. ನಾವು ಜಾತ್ಯತೀತ ಸಮಾಜದಲ್ಲಿ ಇದ್ದೇವೆ. ಜನರ ಅಭಿಪ್ರಾಯ ಮುಖ್ಯ. ಸಿಂಪ್ಲಿಸಿಟಿ ಚುನಾವಣೆ ವಿಷಯ ಆಗಬಾರದು. ಕೆಲಸ ಮುಖ್ಯ ಆದ್ಯತೆ ಆಗಬೇಕು ಎಂದು ಹೇಳಿದರು.