ಮುಸ್ಲಿಂ ಯುವಕನನ್ನು ಅಪಹರಿಸಿ ಹಲ್ಲೆ ನಡೆಸಿದ ಸಂಘಪರಿವಾರದ ಕಾರ್ಯಕರ್ತರ ಗುಂಪು; 9 ಜನರ ವಿರುದ್ಧ ಪ್ರಕರಣ ದಾಖಲು
ಯಾದಗಿರಿ: ಸಂಘಪರಿವಾರದ ಕಾರ್ಯಕರ್ತರ ಗುಂಪೊಂದು ಮುಸ್ಲಿಂ ಯುವಕನನ್ನು ಅಪಹರಿಸಿ ತೀವ್ರವಾಗಿ ಹಲ್ಲೆ ಮಾಡುವ ಮೂಲಕ ಅನೈತಿಕ ಪೊಲೀಸ್‌ಗಿರಿ ನಡೆಸಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಹಿಂದೂ ಧರ್ಮದ ಯುವತಿಯನ್ನು ಪ್ರೀತಿಸಿದ್ದಕ್ಕೆ ಮುಸ್ಲಿಂ ಯುವಕನ ಮೇಲೆ 9 ಜನ ಸಂಘಪರಿವಾರದ ಕಾರ್ಯಕರ್ತರ ಗುಂಪೊಂದುಗುಂಪು ತೀವ್ರವಾಗಿ ಹಲ್ಲೆ ಮಾಡುವ ಮೂಲಕ ಅನೈತಿಕ ಪೊಲೀಸ್‌ಗಿರಿ ನಡೆಸಿದ್ದು, ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಗೋಗಿ ಮೊಹಲ್ಲಾ ನಿವಾಸಿ ವಾಹಿದ್ ಹಲ್ಲೆಗೊಳಗಾದ ಯುವಕ. ಮಲ್ಲು, ತಾಯಪ್ಪ, ಶಿವುನಾಯಕ, ರೂಪೇಶ ಕೋಳಿವಾಡ, ಅಂಬ್ರೇಶ, ಆದರ್ಶಗೌಡ, ಪವನಕುಮಾರ, ಜಂಬು ಸೋಲಂಕಿ, ಬಾಪು ಸೋಲಂಕಿ ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ.
ನಗರದಲ್ಲಿ ಮಾರ್ಚ್ 18ರಂದು ಕಾಲೇಜಿನಿಂದ ಮನೆಗೆ ಬರುವಾಗ ಯುವಕನನ್ನು ಅಪಹರಿಸಿದ ಒಂಬತ್ತು ಜನರಿದ್ದ ಗುಂಪು ನಂತರ ಕೊಠಡಿಯಲ್ಲಿ ಕೂಡಿ ಹಾಕಿ ಬೆನ್ನಿಗೆ ಬಾಸುಂಡೆ ಬರುವ ಹಾಗೆ ಥಳಿಸಿದೆ. ಹೊಟ್ಟೆಗೆ ಚಾಕು ಹಾಕಿ ಕೊಲೆ ಮಾಡಲು ಯತ್ನಿಸಿದೆ. ತಪ್ಪಾಗಿದೆ ಎಂದು ಕಾಲಿಗೆ ಬಿದ್ದು ಯುವಕ ಜೀವ ಉಳಿಸಿಕೊಂಡು ಬಂದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಯುವತಿಗೆ ಹಾಗೂ ಹಲ್ಲೆ ನಡೆಸಿದ ಗುಂಪಿನವರಿಗೆ ಯಾವುದೇ ಸಂಬಂಧವಿಲ್ಲ. ಯುವತಿಯನ್ನು ಪ್ರೀತಿಸಿದವನು ಅನ್ಯ ಕೋಮಿನವನು ಎಂಬ ಕಾರಣಕ್ಕೆ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಯಾದಗಿರಿ ನಗರ ಠಾಣೆಯಲ್ಲಿ 9 ಜನರ ವಿರುದ್ಧ ಐಪಿಸಿಯ 143, 147, 148, 307, 323, 341, 342, 363, 504 ಹಾಗೂ 506 ಕಲಂ ಅಡಿ ಪ್ರಕರಣ ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.