ಈಶ್ವರಪ್ಪ ಪುತ್ರನಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಪ್ರಹ್ಲಾದ್ ಜೋಶಿ ಕಾರಿಗೆ ಮುತ್ತಿಗೆ ಹಾಕಿದ ಬಿಜೆಪಿ ಕಾರ್ಯಕರ್ತರು; ಟಿಕೆಟ್ ನೀಡದಿದ್ದರೆ ಕಾಂತೇಶ್ ಈಶ್ವರಪ್ಪರನ್ನು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಗೆಲ್ಲಿಸುವುದಾಗಿ ಎಚ್ಚರಿಕೆ
ಶಿವಮೊಗ್ಗ: ಈಶ್ವರಪ್ಪ ಪುತ್ರ ಕಾಂತೇಶ್ ಈಶ್ವರಪ್ಪನವರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕು ಎಂದು ಬಿಜೆಪಿ ಕಾರ್ಯಕರ್ತರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯನ್ನು ಆಗ್ರಹಿಸಿದ್ದಾರೆ.
ನಗರದ ಮಾಂಗಲ್ಯ ಮಂದಿರದಲ್ಲಿ ಶನಿವಾರ ವಿಪ್ರ ಸ್ನೇಹ ಬಳಗವು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಸಂಸದ ಬಿ.ವೈ.ರಾಘವೇಂದ್ರಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದಾಗ ಈ ಘಟನೆ ನಡೆದಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರನ್ನು ಭೇಟಿ ಮಾಡಿ ಚರ್ಚಿಸಿದ ಬಿಜೆಪಿಯ ಕಾರ್ಯಕರ್ತರು, ಚರ್ಚೆಯ ಬಳಿಕ ಒಂದು ವೇಳೆ ಕಾಂತೇಶ್ ಅವರಿಗೆ ಹಾವೇರಿ ಟಿಕೆಟ್ ನೀಡದಿದ್ದರೆ ಶಿವಮೊಗ್ಗ ಕ್ಷೇತ್ರದಿಂದಲೇ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಗೆಲ್ಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈಶ್ವರಪ್ಪ ಮತ್ತು ಅವರ ಪುತ್ರ ಕಾಂತೇಶ್ ಹಾವೇರಿಯಲ್ಲಿ ಒಂದು ವರ್ಷದಿಂದ ಪಕ್ಷ ಸಂಘಟನೆ ಮಾಡಿದ್ದಾರೆ. ಅವರಿಗೆ ಉತ್ತಮ ಜನ ಬೆಂಬಲವಿದೆ. ಹೀಗಾಗಿ ಅವರಿಗೆ ಟಿಕೆಟ್ ಕೊಡಬೇಕು. ಅವರಿಗೆ ಬಿಟ್ಟು ಬೇರೆಯವರಿಗೆ ನೀಡಿದಲ್ಲಿ ಶಿವಮೊಗ್ಗದಲ್ಲಿ ಈಶ್ವರಪ್ಪ ಮತ್ತು ಹಾವೇರಿಯಲ್ಲಿ ಕಾಂತೇಶ್ ರನ್ನು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಇತ್ತ ಒಂದು ರೀತಿಯಲ್ಲಿ ಉದ್ವೇಗಗೊಂಡಿದ್ದ ಕಾರ್ಯಕರ್ತರು, ಕಾಂತೇಶ್ ಅವರಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಲೇಬೇಕು. ಇಲ್ಲವಾದರೆ, ಶಿವಮೊಗ್ಗ ಕ್ಷೇತ್ರದಲ್ಲಿ ಅವರನ್ನು (ಕಾಂತೇಶ್) ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿ ಅವರನ್ನು ಗೆಲ್ಲಿಸುತ್ತೇವೆ. ಅದರಿಂದ ಬಿಜೆಪಿಯು ಶಿವಮೊಗ್ಗ ಕ್ಷೇತ್ರವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಕಾರ್ಯಕರ್ತರ ಆಗ್ರಹವನ್ನು ಆಲಿಸಿದ ಪ್ರಹ್ಲಾದ್ ಜೋಶಿಯವರು ಈ ಕುರಿತಂತೆ ಪಕ್ಷದ ಉನ್ನತ ಮಟ್ಟದಲ್ಲಿ ಮಾತನಾಡುವುದಾಗಿ ಹೇಳಿ ತೆರಳಿದರು.
ಕಾರ್ಯಕ್ರಮದ ಬಳಿಕ ಜೋಶಿ ಅವರು ಕೆ.ಎಸ್.ಈಶ್ವರಪ್ಪ ಅವರ ಮನೆಗೆ ತೆರಳಿ ಅವರೊಂದಿಗೆ ಅರ್ಧ ತಾಸು ಚರ್ಚಿಸಿದರು. ಬಳಿಕ ರಸ್ತೆ ಮಾರ್ಗವಾಗಿ ಧಾರವಾಡಕ್ಕೆ ತೆರಳಿದರು. ಜೋಶಿ ಅವರು ಶಿವಮೊಗ್ಗಕ್ಕೆ ಬಂದಿರುವ ಸಂಗತಿ ಗೊತ್ತಾಗುತ್ತಿದ್ದಂತೆ ಹಾವೇರಿಯಿಂದ ಹಲವು ವಾಹನಗಳಲ್ಲಿ ನೂರಕ್ಕೂ ಹಚ್ಚು ಜನರು ಶಿವಮೊಗ್ಗಕ್ಕೆ ಬಂದಿದ್ದರು. ಯಡಿಯೂರಪ್ಪ ಅವರಿಗೂ ಮನವಿ ಮಾಡಿದರು.