ರಮದಾನ್ ಹಿನ್ನೆಲೆ: ರಾಜ್ಯ ಸರ್ಕಾರಿ ಉರ್ದು, ಇತರೆ ಅಲ್ಪಸಂಖ್ಯಾತ ಭಾಷಾ ಶಾಲೆಗಳ ಅವಧಿ ಬದಲಾವಣೆ
ಬೆಂಗಳೂರು: 30 ದಿನಗಳ ಕಾಲ ರಂಜಾನ್ ಮಾರ್ಚ್ 11 ರಿಂದ ಏಪ್ರಿಲ್ 10 ರವರೆಗೆ ನಡೆಯುವ ಸಾಧ್ಯತೆ ಇದ್ದು, ಈ ರಂಜಾನ್ ಮಾಹೆಯಲ್ಲಿ ರಾಜ್ಯ ಸರ್ಕಾರಿ ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಭಾಷಾ ಶಾಲೆಗಳ ಅವಧಿ ಬದಲಾವಣೆ ಮಾಡಿ ಸುತ್ತೋಲೆ ಹೊರಡಿಸಿದೆ ಸರ್ಕಾರ.
ಶಾಲಾ ಅವಧಿ ಬದಲಾವಣೆಯ ಸುತ್ತೋಲೆಯನ್ನು ಕರ್ನಾಟಕ ಸರ್ಕಾರದ ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯದ ಆಯುಕ್ತರ ಕಛೇರಿಯು ಹೊರಡಿಸಿದೆ.
ಸರ್ಕಾರದ ಉಲ್ಲೇಖಿತ ಪತ್ರ 2 ರಲ್ಲಿ ರಂಜಾನ್ ಮಾಸದ ಪ್ರಯುಕ್ತ ರಾಜ್ಯದಲ್ಲಿನ ಉರ್ದು ಮಾಧ್ಯಮದ ಕಿರಿಯ, ಹಿರಿಯ ಮತ್ತು ಪ್ರೌಢಶಾಲೆಗಳನ್ನು ಬೆಳಿಗ್ಗೆ 08-00 ಗಂಟೆಯಿಂದ 12-45 ರವರೆಗೆ ರಂಜಾನ್ ತಿಂಗಳು ಪ್ರಾರಂಭವಾದ ದಿನಾಂಕದಿಂದ ಒಂದು ತಿಂಗಳುಗಳ ವರೆಗೆ ಮಾತ್ರ ನಡೆಸಲು ಈ ಹಿಂದೆ ದಿನಾಂಕ 31-10-2002 ರಲ್ಲಿ ಹೊರಡಿಸಲಾಗಿದ್ದ ಸ್ಟ್ಯಾಂಡಿಂಗ್ ಆರ್ಡರ್ ಅನ್ನು ಯಥಾವತ್ತು ಹೊರಡಿಸಲು ಸ್ವೀಕೃತವಾದ ಮನವಿಗಳನ್ನು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮವಹಿಸುವಂತೆ ಸೂಚಿಸಲಾಗಿರುತ್ತದೆ ಎಂದು ಆಯುಕ್ತರ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದ ಎಲ್ಲಾ ಸರ್ಕಾರಿ ಅನುದಾನಿತ, ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಕ್ರಿಯಾ ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ ನಿರ್ದೇಶವನ್ನು ಶಿಕ್ಷಣ ಇಲಾಖೆಗಳು ಪಡೆದಿವೆ. ಅದರಂತೆ ಶಾಲೆಗಳ ದೈನಂದಿನ ಶೈಕ್ಷಣಿಕ ಚಟುವಟಿಕೆಗಳ ನಿರ್ವಹಣೆಗೆ ಸಲಹಾತ್ಮಕ ವೇಳಾಪಟ್ಟಿಯಲ್ಲಿ ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 04-20 ರವರೆಗೆ ಶಾಲಾ ಅವಧಿ ನಿಗದಿಪಡಿಸಲಾಗಿದೆ. ಆದರೆ ರಂಜಾನ್ ಮಾಹೆಯಲ್ಲಿ ರಾಜ್ಯದ ಉರ್ದು ಮಾಧ್ಯಮದ ಕಿರಿಯ, ಹಿರಿಯ ಮತ್ತು ಪ್ರೌಢಶಾಲೆಗಳನ್ನು ಬೆಳಿಗ್ಗೆ 08-00 ಗಂಟೆಯಿಂದ ಮಧ್ಯಾಹ್ನ 12.45 ರವರೆಗೆ ನಡೆಸಲು ಸೂಚನೆ ನೀಡಲಾಗಿದೆ ಎಂದಿದೆ ಸುತ್ತೋಲೆ.
ಮಾರ್ಚ್ 11 ಅಥವಾ ಮಾರ್ಚ್ 12 ರಿಂದ ಮೆಕ್ಕಾದಲ್ಲಿ ಹೊಸ ಚಂದ್ರ ಕಾಣಿಸಿಕೊಳ್ಳುವ ಆಧಾರದಲ್ಲಿ ರಂಜಾನ್ ಆರಂಭವಾಗಲಿದ್ದು, ಅಂದಿನಿಂದ 30 ದಿನಗಳವರೆಗೆ ಈ ಮೇಲೆ ತಿಳಿಸಿದ ಶಾಲಾ ಅವಧಿಯನ್ನು ಅನುಸರಿಸಲು ಸೂಚನೆ ನೀಡಲಾಗಿದೆ. ನಂತರದಲ್ಲಿ ಎಂದಿನಂತೆ ಶಾಲೆಗಳನ್ನು ನಡೆಸಲಾಗುತ್ತದೆ. ಅಲ್ಲದೇ ಈ ದಿನಗಳ ಶಾಲಾ ಚಟುವಟಿಕೆಗಳನ್ನು, ಪಾಠಗಳನ್ನು ಸರಿದೂಗಿಸಲು ಇತರೆ ರಜಾದಿನಗಳನ್ನು ಬಳಸಿಕೊಳ್ಳಲು ಸೂಚಿಸಲಾಗಿದೆ.
ಅಲ್ಲದೇ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಓದುತ್ತಿರುವ ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಸರ್ಕಾರದ ಮುಸ್ಲಿಂ ಸಿಬ್ಬಂದಿಗಳು ಸಂಜೆ ವೇಳೆ 30 ನಿಮಿಷ ಬೇಗ ಹೋಗಲು ಅನುಮತಿ ನೀಡಲು ಸೂಚಿಸಿರುವುದಾಗಿ ಸುತ್ತೋಲೆ ತಿಳಿಸಿದೆ.
ಈ ಸುತ್ತೋಲೆಯು ಪರೀಕ್ಷೆಗಳಿಗೆ ಅನ್ವಯವಾಗುವುದಿಲ್ಲ. ಕರ್ನಾಟಕ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಿಗೂ ಅನ್ವಯವಾಗುವುದಿಲ್ಲ.
ಕರ್ನಾಟಕ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ 1 ಮಾರ್ಚ್ 25, 2024 ರಿಂದ ಏಪ್ರಿಲ್ 06 ರವರೆಗೆ ರಾಜ್ಯಾದ್ಯಂತ ನಡೆಯಲಿದೆ.