ಬ್ರಹ್ಮಾವರ ಹನೆಹಳ್ಳಿಯಲ್ಲಿ ಯುವಕನನ್ನು ಗುಂಡಿಕ್ಕಿ ಹತ್ಯೆಗೈದು ಪರಾರಿಯಾದ ದುಷ್ಕರ್ಮಿಗಳು !
Sunday, March 3, 2024
ಉಡುಪಿ: ದುಷ್ಕರ್ಮಿಗಳ ತಂಡವೊಂದು ಗುಂಡಿಕ್ಕಿ ಯುವಕನನ್ನು ಹತ್ಯೆಗೈದ ಘಟನೆ ಬ್ರಹ್ಮಾವರ ತಾಲೂಕಿನ ಹನೆಹಳ್ಳಿಯಲ್ಲಿ ನಡೆದಿದೆ.
ಕೊಲೆಯಾದ ಯುವಕನನ್ನು ಕೃಷ್ಣ (36) ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಘಟನೆ ನಡೆದಿದ್ದು, ಇಂದು ಮುಂಜಾನೆ ಬೆಳಕಿಗೆ ಬಂದಿದೆ. ನಿನ್ನೆ ರಾತ್ರಿ 9:30 ಸುಮಾರಿಗೆ ಕೃಷ್ಣ ಅವರು ಮನೆಯಲ್ಲಿ ಊಟ ಮಾಡುತ್ತಿದ್ದರು. ಈ ವೇಳೆ ಏಕಾಏಕಿಯಾಗಿ ಮನೆಗೆ ದಾಳಿ ನಡೆಸಿದ ದುಷ್ಕರ್ಮಿಗಳ ತಂಡವು ಕೃಷ್ಣ ಅವರ ಮೇಲೆ ಫೈರಿಂಗ್ ನಡೆಸಿದೆ. ಬಳಿಕ ಅಲ್ಲಿಂದ ಪರಾರಿಯಾಗಿದೆ ಎಂದು ತಿಳಿದುಬಂದಿದೆ.
ಮಣಿಪಾಲದಲ್ಲಿ ಕೆಲಸ ಮಾಡಿಕೊಂಡಿದ್ದ ಕೃಷ್ಣ ಅವರು, ಮನೆಯಲ್ಲಿ ಏಕಾಂಗಿಯಾಗಿ ವಾಸಮಾಡಿಕೊಂಡಿದ್ದರು. ಘಟನೆ ನಡೆಯುವ ಸಂದರ್ಭದಲ್ಲಿ ಅಕ್ಕ ಪಕ್ಕದ ಮನೆಯವರು ಪಟಾಕಿಯ ಶಬ್ದವೆಂದು ಸುಮ್ಮನೆ ಕುಳಿತಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬ್ರಹ್ಮಾವರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.