ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ; ಕೆಲವು ಮಾಹಿತಿಗಳು ಲಭ್ಯ: ಶೀಘ್ರದಲ್ಲಿಯೇ ಆರೋಪಿಗಳ ಬಂಧನ: ಗೃಹ ಸಚಿವ ಪರಮೇಶ್ವರ್
ಬೆಂಗಳೂರು: ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಗಳ ಕುರಿತು 8 ತಂಡಗಳನ್ನು ರಚಿಸಿ ಎಲ್ಲಾ ಆಯಾಮಗಳಲ್ಲಿ ತನಿಖೆ ತೀವ್ರಗತಿಯಲ್ಲಿ ಮಾಡಲಾಗುತ್ತಿದ್ದು, ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಮಾಹಿತಿಗಳು ಲಭ್ಯವಾಗಿವೆ. ಇನ್ನು ಹೆಚ್ಚಿನ ಮಾಹಿತಿ ಕಲೆ ಹಾಕ್ತಿದ್ದೇವೆ. ಎಲ್ಲಾ ಆಯಾಮದಲ್ಲೂ ತನಿಖೆ ಆಗ್ತಿದೆ. FSL ಅವರು ಈಗಾಗಲೇ ಸ್ಯಾಂಪಲ್ ಕಲೆಕ್ಟ್ ಮಾಡಿ ಟೆಕ್ನಿಕಲ್ ಮಾಹಿತಿ ಕಲೆ ಹಾಕ್ತಿದ್ದಾರೆ. ಸ್ಪೋಟ ಮಾಡಿದ ವ್ಯಕ್ತಿಯ ಮಾಹಿತಿ ಸಿಕ್ಕಿದೆ. ವ್ಯಕ್ತಿಯನ್ನು ಆದಷ್ಟು ಬೇಗ ಹಿಡಿಯುತ್ತೇವೆ. ಒಂದು ದಿನ, ಎರಡು ದಿನ ಆಗಬಹುದು. ಆದರು ಖಂಡಿತವಾಗಿ ಹಿಡಿಯುತ್ತೇವೆ ಎಂದರು.
ಆತ ಯಾವುದಾದರೂ ಸಂಘಟನೆ ಸೇರಿದ್ದರೆ, ಅಥವಾ ಬೇರೆ ಕಾರಣಗಳಿದ್ದರೆ ಅಂತ ತನಿಖೆ ಆಗುತ್ತಿದೆ. ಹೊಟೇಲ್ ನವರು 11 ಕಡೆ ಹೊಟೇಲ್ ಪ್ರಾರಂಭ ಮಾಡಿದ್ದಾರೆ. 12ನೇ ಕಡೆ ಓಪನ್ ಮಾಡುತ್ತಿದ್ದರು. ಇದನ್ನ ಸಹಿಸಲಾರದವರು. ಈ ರೀತಿ ಮಾಡಿರಬಹುದು ಅಂತ ಅಲ್ಲಿನ ಜನ ಹೇಳ್ತಿದ್ದಾರೆ. ಈ ನಿಟ್ಟಿನಲ್ಲಿಯೂ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
ಬೆಂಗಳೂರು ಸುರಕ್ಷಿತ ನಗರ ಮಾಡೋಕೆ ಕೆಲಸ ಮಾಡ್ತಿದ್ದೇವೆ. ಬಹಳ ಹಣ ಖರ್ಚು ಮಾಡಿ, ಕ್ಯಾಮರ ಹಾಕಿದ್ದೇವೆ. ಕಮಾಂಡ್ ಸೆಂಟರ್ ಮಾಡಿ ಎಲ್ಲವನ್ನು ಮಾನಿಟರ್ ಮಾಡ್ತಿದ್ದೇವೆ. ಬೆಂಗಳೂರು ಈಗ ಸೇಫ್ ನಲ್ಲಿ ಎಷ್ಟೋ ಉತ್ತಮವಾಗಿದೆ. ಹೊಯ್ಸಳ ಕೂಡಾ 7-8 ನಿಮಿಷಗಳಿಗೆ ಸ್ಥಳಕ್ಕೆ ಬರ್ತಿದೆ ಎಂದು ತಿಳಿಸಿದರು.
ನೇತ್ರ ಕ್ಯಾಮರಾದಲ್ಲಿ ಶಂಕಿತದ ವೀಡಿಯೋ ಇದೆಯಾ ಎಂಬ ಪ್ರಶ್ನೆ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಎಲ್ಲಾ ಕ್ಯಾಮರದಲ್ಲೂ ಪರಿಶೀಲನೆ ಮಾಡ್ತಿದ್ದೇವೆ. 40-50 ಕ್ಯಾಮರಾ ಪರಿಶೀಲನೆ ಮಾಡ್ತಿದ್ದೇವೆ. ಬಿಎಂಟಿಸಿಯಲ್ಲಿ ಆರೋಪಿ ಓಡಾಡಿದ ಅಂತ ಮಾಹಿತಿಯಿದೆ. 26 ಬಸ್ ಗಳು ಸ್ಫೋಟ ಸಮಯದಲ್ಲಿ ಓಡಾಡಿವೆ. 26 ಬಸ್ ಕ್ಯಾಮರಾ ಪರಿಶೀಲನೆ ಮಾಡಿದ್ದೇವೆ. ಒಂದು ಕ್ಯಾಮರದಲ್ಲಿ ಹೋಗಿದ್ದು ಬಂದಿದ್ದು ಸಿಕ್ಕಿದೆ. ಅದರಲ್ಲಿ ಆತ ಮಾಸ್ಕ್, ಕ್ಯಾಪ್, ಗ್ಲಾಸ್ ಎಲ್ಲಾ ಹಾಕಿದ್ದಾನೆ. ಅಲ್ಲೂ ಕೂಡಾ ಅಷ್ಟು ಕ್ಲಾರಿಟಿ ಆಗ್ತಿಲ್ಲ. ತನಿಖೆ ಆಗ್ತಿದೆ. ಹೆಚ್ಚು ತಾಂತ್ರಿಕ ವಿಚಾರ ಹೇಳೋಕೆ ಆಗೊಲ್ಲ. ಆತ ಸಿಗೋವರೆಗೂ ಮಾಹಿತಿ ಕೊಡೋಕೆ ಆಗೊಲ್ಲ ಎಂದು ಪರಮೇಶ್ವರ್ ತಿಳಿಸಿದರು.