ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ: ಶಂಕಿತನ ಜಾಡು ಹಿಡಿದು ಬಳ್ಳಾರಿಯಲ್ಲಿ ಪರಿಶೀಲನೆ ನಡೆಸಿದ NIA ತಂಡ
ಬಳ್ಳಾರಿ: ಬೆಂಗಳೂರಿನ ‘ದಿ ರಾಮೇಶ್ವರಂ ಕೆಫೆ’ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಶಂಕಿತನ ಜಾಡು ಹಿಡಿದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಳ್ಳಾರಿಗೆ ಬಂದು ಪರಿಶೀಲನೆ ನಡೆಸಿದೆ.
ಬುಧವಾರ ರಾತ್ರಿ 3 ಗಂಟೆ ಸುಮಾರಿನಲ್ಲಿ ನಗರಕ್ಕೆ ಆಗಮಿಸಿದ ಎನ್‌ಐಎ ತಂಡ, ಸ್ಥಳೀಯ ಪೊಲೀಸರ ನೆರವಿನೊಂದಿಗೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲಿಸಿದರು.
ಬಾಂಬ್ ಸ್ಫೋಟದ ಬಳಿಕ ಶಂಕಿತನು ತುಮಕೂರು ಬಸ್‌ನಿಲ್ದಾಣಕ್ಕೆ ಬಂದಿದ್ದ ಎನ್ನಲಾಗಿದ್ದು, ಅಲ್ಲಿಂದ ಬಸ್ ಹಿಡಿದು ಬಳ್ಳಾರಿಗೆ ಬಂದಿರುವ ಬಗ್ಗೆ ಎನ್‌ಐಗೆ ಸುಳಿವು ಸಿಕ್ಕಿದೆ. ಬಳ್ಳಾರಿ ಬಸ್‌ನಿಲ್ದಾಣದಿಂದ ಆತ ಮತ್ತೊಂದು ಬಸ್ ಹತ್ತಿ ಬೇರೆ ಕಡೆಗೆ ಹೋಗಿದ್ದಾನೆ ಎಂದು ಎನ್‌ಐಎ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
‘ರಾತ್ರಿ 10 ಗಂಟೆಗೆ ಕರೆ ಮಾಡಿದ್ದ ಎಸ್‌ಪಿ ತನಿಖಾ ತಂಡವೊಂದು ಬಳ್ಳಾರಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿರುವುದಾಗಿಯೂ, ಸಿಸಿಟಿವಿ ದೃಶ್ಯಾವಳಿಗಳನ್ನು ಅವರಿಗೆ ಒದಗಿಸುವಂತೆ ಹೇಳಿದರು. ಅದರಂತೆ ನಾವು ದೃಶ್ಯಾವಳಿಗಳನ್ನು ತಂಡಕ್ಕೆ ಹಸ್ತಾಂತರಿಸಿದ್ದೇವೆ’ ಎಂದು ಕೆಎಸ್‌ಆರ್‌ಟಿಸಿಯ ವಿಭಾಗೀಯ ನಿಯಂತ್ರಕ ಪ್ರಜಾವಾಣಿಗೆ ಮಾಹಿತಿ ನೀಡಿದರು.