ಸಿದ್ದಗಂಗಾ ಮಠದ ಜಾತ್ರೆಗೆ ಬಂದಿದ್ದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಮೂವರ ಬಂಧನ
ತುಮಕೂರು: ಸಿದ್ದಗಂಗಾ ಮಠದ ಜಾತ್ರೆಗೆ ಬಂದಿದ್ದ 17 ವರ್ಷದ ಬಾಲಕಿ ಮೇಲೆ ದುಷ್ಕರ್ಮಿಗಳ ಗುಂಪೊಂದು ಸಾಮೂಹಿಕ ಅತ್ಯಾಚಾರ ನಡೆಸಿರುವ ಪ್ರಕರಣ ಬಯಲಾಗಿದೆ.
ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿ ಬಂಡೆಪಾಳ್ಯದಲ್ಲಿ ವಾಸವಿದ್ದ ಅಮೋಘ, ಹನುಮಂತ, ಪ್ರತಾಪ್ ಎಂಬವರನ್ನು ಬಂಧಿಸಲಾಗಿದೆ.
ಬಾಲಕಿಯು ತನ್ನ ಸ್ನೇಹಿತನೊಟ್ಟಿಗೆ ಬೆಟ್ಟದ ಬಳಿ ಕುಳಿತಿದ್ದಳು. ಅಲ್ಲಿಗೆ ಬಂದ 3 ಮಂದಿ ಕಿರಾತಕರು ಬಾಲಕಿಯನ್ನು ಬೆದರಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಸ್ನೇಹಿತನ ಜತೆಗೆ ಸಿದ್ದಗಂಗಾ ಮಠದ ಜಾತ್ರೆಗೆ ಬಾಲಕಿ ಬಂದಿದ್ದಳು. ಈ ವೇಳೆ ಮೂವರು ಕಿರಾತಕರು ಮೊಬೈಲ್‌ನಲ್ಲಿ ವಿಡಿಯೊವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಬಳಿಕ ಆ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಇದರಿಂದ ಬಾಲಕಿ ಭಯಗೊಂಡಿದ್ದಾಳೆ. ಈ ವೇಳೆ ಬಾಲಕಿಯನ್ನು ಬಲವಂತವಾಗಿ ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದಾರೆ. ಬಳಿಕ ಮಠದ ಪಕ್ಕದಲ್ಲಿರುವ ಬಂಡೆಪಾಳ್ಯದ ರೂಂನಲ್ಲೇ ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ.
ಅತ್ಯಾಚಾರವೆಸಗಿದ ನಂತರ ಬಾಲಕಿಯನ್ನು ಮತ್ತೆ ಮಠದ ಹತ್ತಿರ ಕರೆತಂದು ಅಲ್ಲಿಂದ ಕಾಲ್ಕಿತ್ತಿದ್ದಾರೆ. ನಂತರ ಬಾಲಕಿಯ ಸ್ನೇಹಿತ ಆಸ್ಪತ್ರೆಗೆ ಸೇರಿಸಿದ್ದಾನೆ. ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು.
ಅತ್ಯಾಚಾರದ ದೂರು ದಾಖಲಾಗುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ಬಂಡೆಪಾಳ್ಯದಲ್ಲಿ ವಾಸವಿದ್ದ ಅಮೋಘ, ಹನುಮಂತ, ಪ್ರತಾಪ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.