
ನನ್ನ ಜೊತೆ ಬಿಜೆಪಿ ಸೇರಿದ್ದ ಹೆಚ್ಚಿನವರು ಕಾಂಗ್ರೆಸ್ಸಿಗೆ ವಾಪಸು ಬರುತ್ತಾರೆ; ಎಲ್ಲರೂ ಜೊತೆಯಾಗಿ ಕೆಲಸ ಮಾಡಿ ಚುನಾವಣೆಯಲ್ಲಿ ಗೆಲುವು ಸಾಧಿಸೋಣ: ಜಯಪ್ರಕಾಶ್ ಹೆಗ್ಡೆ
ಉಡುಪಿ: ಪಕ್ಷ ತೊರೆದ ನಂತರವೂ ನಾನು ಕಾಂಗ್ರೆಸ್ ನಾಯಕರ ಜೊತೆ ಸಂಪರ್ಕದಲ್ಲಿ ಇದ್ದೆ. ಕಾಂಗ್ರೆಸ್ ಸ್ನೇಹಿತರ ಜೊತೆ ಸ್ನೇಹ ಬಿಟ್ಟಿಲ್ಲ. ರಾಜಕೀಯ ಹೊರತಾಗಿಯೂ ಒಂದು ಜೀವನ ಇದೆ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಜನರ ಅಭಿವೃದ್ಧಿ ಕಾರ್ಯಕ್ಕೆ ನಾವೆಲ್ಲರೂ ಒಟ್ಟಾಗುತ್ತಿದ್ದೇವೆ. ನಾನು ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡಬೇಕು. ಎಲ್ಲರೂ ಜೊತೆಯಾಗಿ ಮುಂದಿನ ಚುನಾವಣೆಯಲ್ಲಿ ಕೆಲಸ ಮಾಡಬೇಕು. ಚುನಾವಣೆಯಲ್ಲಿ ಗೆಲ್ಲಲು ಎಲ್ಲರೂ ಪ್ರಯತ್ನಿಸಬೇಕು ಎಂದು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಇಂದು ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಜಿಲ್ಲೆಯ ಪದಾಧಿಕಾರಿಗಳನ್ನು ಒಟ್ಟು ಸೇರಿಸಿ ಒಂದು ಕಾರ್ಯಕ್ರಮ ಮಾಡಬೇಕು. ಟಿಕೆಟ್ ಯಾವಾಗ ಘೋಷಣೆಯಾಗುತ್ತೆ ಎಂಬುದನ್ನು ಪಕ್ಷದ ಮುಖಂಡರಿಗೆ ಕೇಳಬೇಕು. ನನಗೆ ಟಿಕೆಟ್ ಸಿಗುವ ಬಗ್ಗೆ ಸಿದ್ದರಾಮಯ್ಯ ಜೊತೆ ನಾನು ಯಾವುದೇ ಚರ್ಚೆ ಮಾಡಿಲ್ಲ. ಮುಂದಿನ ಯೋಜನೆಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಜಿಲ್ಲೆಯ ಡೀಮ್ಡ್ ಫಾರೆಸ್ಟ್ ಸಮಸ್ಯೆಗೆ ಪರಿಹಾರ ಬೇಕು. ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಜಂಟಿ ಸರ್ವೆ ಪ್ರಾರಂಭ ಆಗಿದೆಯಂತೆ. ಕರಾವಳಿ ಭಾಗದಲ್ಲಿ ಆದರೆ ರೈತರಿಗೆ ಸಹಾಯ ಆಗುತ್ತದೆ ಎಂದರು.
ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗವು ರಾಜ್ಯ ಸರಕಾರಕ್ಕೆ ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷ ವರದಿಯನ್ನು ಕೂಡಲೇ ಜಾರಿಗೆ ತಂದರೆ ತುಂಬಾ ಒಳ್ಳೆದು. ಅನೇಕ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಸಿಕ್ಕುತ್ತೆ ಅಂತಾನೆ ಗೊತ್ತಿರಲಿಲ್ಲ. ಪಟ್ಟಿಯಲ್ಲಿ ಇರುವುದೇ ಅವರಿಗೆ ಗೊತ್ತಿರಲಿಲ್ಲ. ವೀರಶೈವ ಲಿಂಗಾಯತರು ಕೂಡ ತಮಗೆ ಮೀಸಲಾತಿ ಇಲ್ಲ ಅಂತಾನೆ ಭಾವಿಸಿದ್ದರು. ತಾವು ಪ್ರವರ್ಗ ಮೂರರಲ್ಲಿ ಬರುತ್ತೇವೆ ಅಂತಾನೆ ಗೊತ್ತಿರಲಿಲ್ಲ. ಹೀಗೆ ಅನೇಕ ಸಣ್ಣ ಪುಟ್ಟ ಜಾತಿಗಳು ಪಟ್ಟಿಯಲ್ಲಿ ಇರಲಿಲ್ಲ. ಎಷ್ಟು ಜಾತಿಗಳು ಮೀಸಲಾತಿಗೆ ಒಳಪಟ್ಟಿಲ್ಲ ಅನ್ನೋದು ಈ ಸಮೀಕ್ಷೆಯಿಂದ ಗೊತ್ತಾಯ್ತು ಎಂದು ಹೇಳಿದರು.
ಅನಾಥ ಮಕ್ಕಳ ಬಗ್ಗೆಯೂ ನಾನೊಂದು ವರದಿ ಕೊಟ್ಟಿದ್ದೇನೆ. ಅದನ್ನು ಅತಿ ಶೀಘ್ರ ಜಾರಿಗೆ ತರುವಂತೆ ಕೇಳಿದ್ದೇನೆ. ಅದನ್ನು ಜಾರಿಗೊಳಿಸಿದರೆ ಉತ್ತಮ ಎಂದರು.
ಬಿಜೆಪಿ ಅಭ್ಯರ್ಥಿ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅವರ ಕೆಲಸವನ್ನು ಮಾಡುತ್ತದೆ, ನಾವು ನಮ್ಮ ಕೆಲಸ ಮಾಡುತ್ತೇವೆ. ನಾವು ಪಕ್ಷದ ಕೆಲಸ ಶುರು ಮಾಡಿದ್ದೇವೆ. ಜಾತಿಯ ಬಗ್ಗೆ ಚರ್ಚೆ ಮಾಡುವುದು ಕಮ್ಮಿ ಮಾಡಿದಷ್ಟು, ಸೌಹಾರ್ದಯುತವಾಗಿ ಕೆಲಸ ಮಾಡಬಹುದು. ನನ್ನ ಜೊತೆ ಬಿಜೆಪಿ ಸೇರಿದ್ದ ಹೆಚ್ಚಿನವರು ವಾಪಸು ಬರುತ್ತಾರೆ. ಒಂದೇ ಸಲ ಎಲ್ಲರನ್ನೂ ಕರೆದು ಕೊಂಡು ಬರಲು ಸಾಧ್ಯ ಎಂದು ಅನಿಸುವುದಿಲ್ಲ. ಬಿಜೆಪಿಯಲ್ಲಿದ್ದುಕೊಂಡೆ ನನಗೆ ಸಹಾಯ ಮಾಡಬಹುದು. ಕೆಲವರು ಅವರ ರಾಜಕೀಯ ಭವಿಷ್ಯ ನೋಡಿಕೊಳ್ಳಬಹುದು. ಯಾರಿಗೂ ಒತ್ತಡ ಹಾಕಿ ಬನ್ನಿ ಎಂದು ಹೇಳುವುದು ಸರಿಯಾಗುವುದಿಲ್ಲ. ಎರಡು ಜಿಲ್ಲೆಯಲ್ಲಿ ಅನೇಕ ಮಂದಿ ನನ್ನ ಜೊತೆ ಬರುತ್ತೇನೆ ಹೇಳಿದ್ದಾರೆ. ಅವರಿಂದ ನನ್ನ ರಾಜಕೀಯ ಭವಿಷ್ಯ ನನ್ನಿಂದ ಅವರ ರಾಜಕೀಯ ಭವಿಷ್ಯ ಎಂದು ನಾನು ಭಾವಿಸುವುದಿಲ್ಲ ಎಂದು ಹೇಳಿದರು.