ಇಸ್ಲಾಮನ್ನು ಕಣ್ಣಾರೆ ಕಂಡೆನು ! ಇಫ್ತಾರ್ ಹಾಗೂ ಹಸಿದ ಹೊಟ್ಟೆಗೆ ನೀಡಿದ ಅನ್ನ! ಲೇಖಕ ಡಿ. ಐ. ಅಬೂಬಕರ್ ಕೈರಂಗಳ ಈ ಲೇಖನವನ್ನೊಮ್ಮೆ ನೀವು ಓದಲೇಬೇಕು....
👉 ಡಿ. ಐ. ಅಬೂಬಕರ್ ಕೈರಂಗಳ
ಅನಿವಾಸಿ ಮಲೆಯಾಳಿಯೊಬ್ಬರು ಗಲ್ಫಿನಲ್ಲಿ ತನಗುಂಟಾದ ಒಂದು ಅನುಭವವನ್ನು ವಿವರಿಸುವ ಒಂದು ವಾಯ್ಸ್ ಕ್ಲಿಪನ್ನು ಆಲಿಸಿದೆ. ಪವಿತ್ರ ಇಸ್ಲಾಮ್ ಧರ್ಮದ ಜಾತ್ಯಾತೀತ ನೀತಿ, ಬೇಧಭಾವ ರಾಹಿತ್ಯ, ಕಾರುಣ್ಯದ ವಿಶಾಲತೆಯನ್ನು ಇದು ಪಡಿಮೂಡಿಸುತ್ತಿದೆ. ಆದ್ದರಿಂದ ಆ ವ್ಯಕ್ತಿ ಹೇಳಿದ ಹಾಗೆಯೇ ಅವರ ಮಾತುಗಳನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ.
ಗಲ್ಫಿನಲ್ಲಿ ಒಂದು ರಮಳಾನ್ ಮಾಸ. ಫುಜೈರ ಭಾಗದ ಉರ್ಫ ಎಂಬಲ್ಲಿ ನನ್ನದೊಂದು ಅಂಗಡಿ ಇತ್ತು. ಅಲ್ಲೇ ಪಕ್ಕದ ಕಡಲತೀರದಲ್ಲೊಂದು ಮಸ್ಜಿದ್. ಸಂಜೆ ಇಫ್ತಾರ್ ಸಮಯದಲ್ಲಿ ನಾನಾ ದೇಶೀಯರು ಅಲ್ಲಿ ಸೇರುತ್ತಾರೆ. ಮುಸ್ಸಂಜೆ ವೇಳೆಯಲ್ಲಿ ಕಡಲಿಂದ ಬೀಸಿ ಬರುವ ತಂಗಾಳಿಗೆ ಮೈಯೊಡ್ಡಿ ಅಲ್ಲಿ ಕೂತು ಇಫ್ತಾರ್ ಮಾಡುವುದೆಂದರೆ ಅದೊಂದು ವಿಶೇಷ ಅನುಭವ. ಮನ ಪುಳಕಗೊಳಿಸುವ ಒಂದು ಅನುಭೂತಿ.
ಹಾಗೆ ಒಂದು ಇಫ್ತಾರ್ ಮುಗಿಸಿ ಮಗ್ರಿಬ್ ನಮಾಝ್ ಮುಗಿದ ಬಳಿಕ ಒಂದು ಕಡೆ ಬಂಗಾಲಿಗಳ ಒಂದು ಗುಂಪಿನಲ್ಲಿ ಏನೋ ಗಲಾಟೆ ನಡೆಯುತ್ತಿರುವುದು ಗಮನಕ್ಕೆ ಬಂತು. ವಿಷಯವೇನೆಂದು ತಿಳಿಯಲು ಗುಂಪಿನ ಬಳಿ ಹೋದೆ. ಅಲ್ಲಿ ಬಂಗಾಳಿಗಳು ಒಬ್ಬನನ್ನು ಹಿಡಿಟ್ಟುಕೊಂಡಿದ್ದಾರೆ. ಅವನ ಕೈಯ್ಯಲ್ಲಿ ಒಂದು ಚೀಲ. ಆ ಚೀಲದಲ್ಲಿ ಆತ ಇಫ್ತಾರ್ ಗೆ ಇಡಲಾಗಿದ್ದ ಬಗೆಬಗೆಯ ಆಹಾರ ಹಾಗೂ ಪಾನೀಯಗಳ ಪ್ಯಾಕೆಟ್ ಗಳನ್ನು ತುಂಬಿಸಿಟ್ಟುಕೊಂಡಿದ್ದ. ನೋಡಿದಾಗ ಆತ ನನ್ನ ಪರಿಚಿತನಾದ ರಾಜಸ್ತಾನದ ಇಬ್ರಾಹೀಮ್ ಖಾನ್. ಫುಜೈರದ ಫಿಶ್ ಮಾರ್ಕೆಟ್ ಬಳಿ ಕಡಲಾಭಿಮುಖವಾಗಿ ಒಂದು ಬಿಲ್ಡಿಂಗ್ ಈಗ ನೀವು ನೋಡಬಹುದು. ಅಂದು ಅದರ ಕೆಲಸ ನಡೆಯುತ್ತಿದ್ದ ಕಾಲ. ಆಂಧ್ರದವರು, ಬಂಗಾಲಿಗಳು, ಶ್ರೀಲಂಕಾದವರು ಮುಂತಾದ ಸುಮಾರು ನಾನೂರು ಮಂದಿ ಅಲ್ಲಿ ಕಷ್ಟಪಟ್ಟು ದುಡಿಯುತ್ತಿದ್ದರು. ಆಗ ಅವರಿಗೆ ಐನೂರು ರೂ. ದಿನಗೂಲಿ. ರಾಜಸ್ತಾನದ ಇಬ್ರಾಹಿಮ್ ಖಾನ್ ಮೂರು ಮಕ್ಕಳ ತಂದೆ. ಸುಮಾರು 48 ವಯಸ್ಸಿರಬಹುದು. ಆ ಕಟ್ಟಡದ ಕಾಮಗಾರಿಯಲ್ಲಿ ಮೈಮುರಿದು ದುಡಿಯುವ ಕಾರ್ಮಿಕರ ಪೈಕಿ ಅವನೂ ಒಬ್ಬನಾಗಿದ್ದ. ಆತ ನನ್ನ ಅಂಗಡಿಗೆ ನಿತ್ಯ ಬರುತ್ತಿದ್ದವನಾದುದರಿಂದ ಅವನ ಪರಿಚಯ ನನಗಿತ್ತು. ಇವನನ್ನು ಹೇಗಾದರೂ ಮಾಡಿ ರಕ್ಷಿಸಬೇಕೆಂದು ಉದ್ದೇಶವಿಟ್ಟುಕೊಂಡು ಬಂಗಾಲಿ ಗುಂಪಿನವರೊಡನೆ ವಿಷಯವೇನೆಂದು ವಿಚಾರಿಸಿದೆ.
ಆಗ ಅವರು ಹೇಳಿದರು;
"ಇವನು ಇಲ್ಲಿಗೆ ಬರುತ್ತಿರುವುದು ಇಫ್ತಾರ್ ಮತ್ತು ನಮಾಝ್ ಗೆ ಅಲ್ಲ. ಇಫ್ತಾರ್ ಗೆ ಇಟ್ಟ ಆಹಾರ ಪಾನೀಯಗಳನ್ನು ಕದ್ದೊಯ್ಯಲು ಬರುವುದು. ಇದು ಇವನ ನಿತ್ಯದ ಕಾಯಕ. ಆದ್ದರಿಂದ ಇವನನ್ನು ಸುಮ್ಮನೆ ಬಿಡಬಾರದು, ಪೊಲೀಸರಿಗೆ ಒಪ್ಪಿಸಬೇಕು.
ನಾನು ಇಬ್ರಾಹೀಮ್ ಖಾನನ ಮುಖವನ್ನು ನೋಡಿದೆ. ವಿಷಾದದಿಂದ ತಲೆ ತಗ್ಗಿಸಿ ನಿಂತಿದ್ದ. " ಯಾಕೆ ನೀನು ಇಂತಹ ಕೆಲಸ ಮಾಡುತ್ತೀಯೆ, ಆಹಾರಗಳನ್ನು ಯಾಕೆ ಕದ್ದೊಯ್ಯುತ್ತೀಯೆ ಎಂದು ಅವನಲ್ಲಿ ಕೇಳಿದೆ.
ಅಲ್ಲಿ ಬಿಲ್ಡಿಂಗ್ ಕೆಲಸ ನಡೆಯುವಲ್ಲಿ ಭಾರತದ ತುಂಬಾ ಜನ ಸರಿಯಾದ ಆಹಾರ ಇಲ್ಲದೆ ಬಳಲುತ್ತಿದ್ದಾರೆ, ಅವರಿಗಾಗಿ ಒಯ್ಯುತ್ತಿದ್ದೇನೆ ಎಂದ.
ಅವರಿಗೆ ಇಲ್ಲಿಗೆ ಬರಬಹುದಲ್ಲ, ಇಲ್ಲಿ ಯಾರು ಬಂದರೂ ಬೇಕಾದಷ್ಟು ತಿಂದು ಹೋಗಲು ಅವಕಾಶ ಇದೆಯಲ್ಲಾ ಎಂದು ಕೇಳಿದೆ. ಅದಕ್ಕೆ ಅವನು ಹೇಳಿದ;
ಅವರು ಹಿಂದೂಗಳು. ಅವರಿಗೆ ಇಲ್ಲಿಗೆ ಬರಲು ಭಯವಾಗ್ತಿದೆ. ಉಪವಾಸ ಇಲ್ಲದ ಹಿಂದೂಗಳಾದ ನಾವು ಅಲ್ಲಿ ಬಂದು ತಿನ್ನುವಾಗ ಯಾರಾದರೂ ಹಿಡಿದು ಬಿಟ್ಟಾರು ಎಂಬ ಭಯ.
ಅಷ್ಟರಲ್ಲಿ ಮಸೀದಿಯಿಂದ ನಮಾಝ್ ಮಾಡಿ ಹೊರಗಿಳಿಯುತ್ತಿದ್ದ ಒಬ್ಬ ಪೊಲೀಸ್ ಆಫೀಸರನ್ನು ಕಂಡೆ. ನಾನು ಅವರ ಬಳಿ ಧಾವಿಸಿ ಹೋಗಿ ಅಲ್ಲಿ ನಡೆಯುತ್ತಿರುವ ವಿಷಯವನ್ನು ಹೇಳಿದೆ. ಅವನು ಉಪವಾಸ ಇಲ್ಲದ ಹಿಂದೂಗಳಿಗಾಗಿ ಆಹಾರ ಪಾನೀಯಗಳನ್ನು ಒಯ್ಯುತ್ತಿರುವುದು ಎಂಬ ವಿಷಯವನ್ನೂ ಮನವರಿಕೆ ಮಾಡಿದೆ. ಸಲ್ಮಾನ್ ಎಂಬ ಹೆಸರಿನ ಆ ಆಫೀಸರ್ ಕೂಡಾ ನನ್ನ ಪರಿಚಿತರೇ ಆಗಿದ್ದರು. ಪಾಪ, ಅವನನ್ನು ನೀವು ರಕ್ಷಿಸಬೇಕು ಎಂದು ಕೇಳಿಕೊಂಡೆ.
ಅವರು ನಿಧಾನಕ್ಕೆ ಗುಂಪಿನ ಕಡೆ ನಡೆದುಕೊಂಡು ಬಂದರು. ನಾನು ಪೊಲೀಸ್ ಆಫೀಸರ್ ಸಲ್ಮಾನ್. ಇಲ್ಲಿ ಏನು ವಿಷಯ ಎಂದು ಕೇಳಿದರು.
ಆಗ ಬಂಗಾಲಿಗಳು ಎಲ್ಲಾ ವಿಷಯವನ್ನು ಹೇಳಿದರು.
ಅವರ ಮಾತು ಮುಗಿದ ಬಳಿಕ ಪೊಲೀಸ್ ಆಫೀಸರ್ ಸಲ್ಮಾನ್ ರವರು ಇಬ್ರಾಹಿಂ ಖಾನನ ಕೈಯ್ಯಲ್ಲಿದ್ದ ಆಹಾರದ ಚೀಲವನ್ನು ಒಂದು ಕೈಯ್ಯಲ್ಲಿ ಹಿಡಿದರು. ಮತ್ತೊಂದು ಕೈಯ್ಯಲ್ಲಿ ಇಬ್ರಾಹಿಂ ಖಾನನ ರಟ್ಟೆ ಹಿಡಿದು ಮಸೀದಿ ಕಡೆ ಕರಕೊಂಡು ಬಂದರು. ನೀವೆಲ್ಲರೂ ಬನ್ನಿ ಎಂದು ಗುಂಪಿಗೂ ಹೇಳಿದರು. ನಾಲ್ಕೈದು ಮೆಟ್ಟಲು ಏರಿದರೆ ಮಸೀದಿಯ ಸಿಟೌಟ್. ಸಲ್ಮಾನ್ ರವರು ಇಬ್ರಾಹಿಂ ಖಾನರನ್ನು ಅಲ್ಲಿಗೆ ಹತ್ತಿಸಿಕೊಂಡು ಹೋಗಿ ಕೆಳಗೆ ನಿಂತಿರುವ ಬಂಗಾಲಿಗಳ ಗುಂಪನ್ನುದ್ದೇಶಿಸಿ ಹೀಗೆಂದರು;
" ನೀವು ಮಗ್ರಿಬ್ ಮೂರು ರಕ ಅತ್ ಮಾಡಿರಬಹುದು. ಆದರೆ ಇಬ್ರಾಹೀಮ್ ಖಾನ್ ಮೂರು ಸಾವಿರ ರಕ ಅತ್ ಮಾಡಿದ್ದಾರೆ. ಅವರು ಹಸಿದ ಹೊಟ್ಟೆಗೆ ಅನ್ನ ನೀಡಿದ್ದಾರೆ. ಹಸಿದವರಿಗೆ ಉಣಬಡಿಸುವಂತಹ ಪುಣ್ಯ ಕಾರ್ಯ ಬೇರಿಲ್ಲ. ಇದು ಪವಿತ್ರ ರಮಳಾನ್ ಮಾಸ. ಈ ಮಾಸದಲ್ಲಿ ಅನ್ನವನ್ನು ತಡೆ ಹಿಡಿಯುವುದು ಘೋರ ತಪ್ಪು. ಹಸಿದವರ ಅನ್ನವನ್ನು ತಡೆ ಹಿಡಿದು ನೀವು ಉಪವಾಸ ಮಾಡಿ ಫಲವಿಲ್ಲ. ಹಸಿದವರು ಯಾವ ಜಾತಿಯವರೇ ಆಗಿರಲಿ, ಮಾನವೀಯತೆಯ ದೃಷ್ಟಿಯಿಂದ ಅನ್ನ ನೀಡುವುದು ನಮ್ಮ ಕರ್ತವ್ಯ. ಆ ಕರ್ತವ್ಯವನ್ನು ಇಬ್ರಾಹಿಂ ಖಾನ್ ಮಾಡಿದ್ದಾರೆ"
ಹೀಗೆನ್ನುತ್ತಾ ಆ ಪೊಲೀಸ್ ಅಧಿಕಾರಿ ಇಬ್ರಾಹಿಂ ಖಾನನ ತಲೆಗೆ ಒಂದು ಮುದ್ದು ಕೊಟ್ಟು ತನ್ನ ಕಿಸೆಯಿಂದ ಕೆಲವು ನೋಟುಗಳನ್ನು ತೆಗೆದು ಇಬ್ರಾಹಿಂ ಖಾನರಿಗೆ ಕೊಟ್ಟರು. ಆ ಮೇಲೆ ಹೇಳಿದರು;
ಬಿಲ್ಡಿಂಗ್ ಕೆಲಸ ನಡೆಯುವಲ್ಲಿ ಇರುವ ಎಲ್ಲರೂ ನಾಳೆಯಿಂದ ಇಲ್ಲಿಗೆ ಇಫ್ತಾರ್ ಗೆ ಬರಬೇಕು. ನಾನು ಕೂಡಾ ಇಲ್ಲಿರುತ್ತೇನೆ. ಅವರು ಏನೂ ಹೆದರಬೇಕಾಗಿಲ್ಲ, ಚೆನ್ನಾಗಿ ತಿಂದುಂಡು ಹೋಗಲಿ!
ಇಸ್ಲಾಮಿನ ಆದರ್ಶವನ್ನು ನಾನು ಭಾಷಣಗಳಲ್ಲಿ ಕೇಳಿದ್ದೆ, ಬರಹಗಳಲ್ಲಿ ಓದಿದ್ದೆ. ಆದರೆ ಅಲ್ಲಿ ನಾನದನ್ನು ಕಣ್ಣಾರೆ ಕಂಡೆ. ಅರಬಿಗಳ ವಿಶಾಲ ಮನಸ್ಥಿತಿ ಎಂತಹುದು ಎಂಬುದು ಅಂದು ನನಗೆ ಅರಿವಾಗಿತ್ತು. ಅರಬಿಗಳ ಈ ಸ್ವಭಾವದಿಂದಲೇ ಜಗತ್ತಿಡೀ ಇಸ್ಲಾಮ್ ಹರಡಿದ್ದು. ಅಂದು ಹದಿನಾಲ್ಕು ಶತಮಾನಗಳ ಹಿಂದೆ ಕೇರಳಕ್ಕೆ ಕಾಲಿಟ್ಟ ಮಾಲಿಕ್ ದೀನಾರ್ ಮತ್ತು ಹನ್ನೆರಡು ಮಂದಿಯ ಅರಬರ ತಂಡ ಬಂದು ಧಕ್ಷಿಣ ಭಾರತದಲ್ಲಿ ಇಸ್ಲಾಮ್ ಹರಡಿದ್ದು ಅವರ ಇಂತಹ ಉದಾತ್ತ ಗುಣದಿಂದಾಗಿತ್ತು. ಆ ಗುಣವನ್ನು ಅಂದು ನಾನು ಫುಜೈರಾದಲ್ಲಿ ಪೊಲೀಸ್ ಅಧಿಕಾರಿ ಸಲ್ಮಾನ್ ಎಂಬ ಅರಬಿಯಲ್ಲಿ ಕಂಡೆ.