ಮೋದಿ ಸರ್ಕಾರದ CAA ಜಾರಿ ತಡೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮುಸ್ಲಿಂ ಲೀಗ್
ಹೊಸ ದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ ಮಾರನೇ ದಿನವೇ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಕೇರಳ ಮೂಲದ ಐಯುಎಂಎಲ್ ಪಕ್ಷವು ಕೇಂದ್ರ ಸರ್ಕಾರದ ನಡೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಈ ಕೂಡಲೇ ಸಿಎಎ ಜಾರಿಗೆ ತಡೆ ನೀಡಬೇಕೆಂದು ಕೋರಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನಿಕ ಹಾಗೂ ಮುಸ್ಲಿಂ ಸಮುದಾಯದ ವಿರುದ್ಧ ಪಕ್ಷಪಾತಿ ಧೋರಣೆ ಹೊಂದಿರುವ ಕಾನೂನು ಎಂದು ಐಯುಎಂಎಲ್ ಆಪಾದಿಸಿದೆ.
ಪೌರತ್ವ ತಿದ್ದುಪಡಿ ಕಾಯ್ದೆಯು 2019ರಲ್ಲಿ ಸಂಸತ್‌ನ ಉಭಯ ಸದನಗಳಲ್ಲಿ ಪಾಸ್ ಆಗಿ ರಾಷ್ಟ್ರಪತಿಗಳ ಅಂಕಿತವೂ ಬಿದ್ದಿತ್ತು. ಆದರೆ, ನಿರಂತರ ಪ್ರತಿಭಟನೆಗಳು ಹಾಗೂ ವಿಪಕ್ಷಗಳ ವಿರೋಧದಿಂದಾಗಿ ಈ ಕಾಯ್ದೆ ಜಾರಿಗೆ ಬಂದಿರಲಿಲ್ಲ. ಬಾಂಗ್ಲಾ ದೆಶ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ದೇಶಗಳಿಂದ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಮೇತರ ಅಲ್ಪಸಂಖ್ಯಾತ ಸಮುದಾಯಗಳಿಗೆ ಭಾರತೀಯ ಪೌರತ್ವ ನೀಡುವ ಕಾಯ್ದೆ ಇದಾಗಿದೆ.
ಭಾರತಕ್ಕೆ ವಲಸೆ ಬಂದಿರುವ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಹಾಗೂ ಕ್ರೈಸ್ತ ಸಮುದಾಯಗಳ ಜನರಿಗೆ ಪೌರತ್ವ ನೀಡುವ ಕಾಯ್ದೆ ಇದಾಗಿದೆ. 2014ರ ಡಿಸೆಂಬರ್ 31ರ ಒಳಗೆ ಭಾರತಕ್ಕೆ ಬಂದಿರುವ ವಲಸಿಗರಿಗೆ ಈ ಕಾಯ್ದೆಯಡಿ ಭಾರತದ ಪೌರತ್ವ ಸಿಗಲಿದೆ.
2019ರಲ್ಲಿ ಸಿಎಎ ಪಾಸ್ ಆದ ವೇಳೆ ಕೂಡಾ ಐಯುಎಂಎಲ್ ಸುಪ್ರೀಂ ಕೋರ್ಟ್ ಮೊರೆ ಹೋದ ಮೊದಲ ಪಕ್ಷವಾಗಿತ್ತು. ಇದೀಗ ಮತ್ತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಐಯುಎಂಎಲ್, ಈ ಕಾಯ್ದೆಯಡಿ ಮುಸ್ಲಿಂ ಧರ್ಮೀಯರನ್ನು ಸೇರ್ಪಡೆ ಮಾಡಿಲ್ಲ. ಇದು ಸಂವಿಧಾನದ ಆರ್ಟಿಕಲ್ 14ರ ಆಶಯಗಳಿಗೆ ವಿರುದ್ಧವಾಗಿದೆ. ಸಂವಿಧಾನದ ಈ ವಿಧಿಯು ಧಾರ್ಮಿಕ ಸಮಾನತೆಯ ಆಶಯ ಹೊಂದಿದೆ ಎಂದು ವಾದಿಸಿದೆ.
ಈ ಹಿಂದೆ ಐಯುಎಂಎಲ್ ಇದೇ ವಿಚಾರವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ಧಾಗ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದ ಕೇಂದ್ರ ಸರ್ಕಾರ, ಕಾನೂನು ಜಾರಿಗೆ ಇನ್ನೂ ಅಧಿಸೂಚನೆಯನ್ನೇ ಹೊರಡಿಸಿಲ್ಲ ಎಂದಷ್ಟೇ ಹೇಳಿತ್ತು.
ಮಾರ್ಚ್ 11 ಸೋಮವಾರ ಕೇಂದ್ರ ಸರ್ಕಾರ ಸಿಎಎ ಜಾರಿಗೆ ಅಧಿಸೂಚನೆ ಹೊರಡಿಸಿದ್ದೇ ತಡ, ಕೆಲವೆಡೆ ಸಂಭ್ರಮಾಚರಣೆ ನಡೆದರೆ, ಮತ್ತೆ ಕೆಲವೆಡೆ ಪ್ರತಿಭಟನೆಗಳು ನಡೆದವು. ಬಂಗಾಳದ ಮತುವಾ ಸಮುದಾಯ ಹಾಗೂ ಭೋಪಾಲ್‌ನ ಸಿಂಧಿ ನಿರಾಶ್ರಿತ ಶಿಬಿರದ ಜನರು ಸಂಭ್ರಮಾಚರಣೆ ಮಾಡಿದರು. ಆದರೆ, ಅಸ್ಸಾಂನಲ್ಲಿ ಪ್ರತಿಭಟನೆ ನಡೆಯಿತು. ಅದರಲ್ಲೂ ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು.