ಮೋದಿಯ ಕಟುಟೀಕಾಕಾರಲ್ಲಿ ಒಬ್ಬರಾದ ಕೇಜ್ರಿವಾಲ್ ಜೈಲು ಸೇರಿದ್ದೇಕೆ?  ಬಂಧನಕ್ಕೆ ಕಾರಣವಾದ ಅಬಕಾರಿ ನೀತಿ ಹಗರಣವೇನು ?

ಮೋದಿಯ ಕಟುಟೀಕಾಕಾರಲ್ಲಿ ಒಬ್ಬರಾದ ಕೇಜ್ರಿವಾಲ್ ಜೈಲು ಸೇರಿದ್ದೇಕೆ? ಬಂಧನಕ್ಕೆ ಕಾರಣವಾದ ಅಬಕಾರಿ ನೀತಿ ಹಗರಣವೇನು ?

ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನ ಅರೆಸ್ಟ್‌ ಮಾಡಲಾಗಿದೆ. ದೆಹಲಿಯ ಮದ್ಯದಂಗಡಿ ಲೈಸನ್ಸ್ ಹಂಚಿಕೆ ಪ್ರಕರಣ ಸಂಬಂಧ ಅಬಕಾರಿ ನೀತಿ ಹಗರಣದ ತನಿಖೆ ನಡೆಸುತ್ತಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಕೇಜ್ರಿವಾಲ್ ಅವರನ್ನು ಬಂಧಿಸಿದ್ದಾರೆ.

ಇದರೊಂದಿಗೆ ಇದೇ ಪ್ರಕರಣದಲ್ಲಿ ದೆಹಲಿ ಸರ್ಕಾರದಲ್ಲಿ ಸಚಿವರಾಗಿದ್ದ ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ, ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಮತ್ತು ತೆಲಂಗಾಣದ ಬಿಆರ್'ಎಸ್ ಪಕ್ಷದ ಶಾಸಕಿ ಕೆ.ಕವಿತಾ ಬಳಿಕ ಮತ್ತೊಬ್ಬ ದೊಡ್ಡ ರಾಜಕೀಯ ನಾಯಕ ಕೇಂದ್ರದ ತನಿಖಾ ಸಂಸ್ಥೆಗಳ ಬಲೆಗೆ ಬಿದ್ದಂತಾಗಿದೆ.

ಕೇಜ್ರಿವಾಲ್ ಬಂಧನವನ್ನು ಆಮ್ ಆದ್ಮಿ ಸೇರಿದಂತೆ ವಿಪಕ್ಷಗಳ ನಾಯಕರು ಕಟುವಾಗಿ ಟೀಕಿಸಿದ್ದಾರೆ. ಅಲ್ಲದೆ, ಬಂಧನ ಖಂಡಿಸಿ ಆಪ್ ಕಾರ್ಯಕರ್ತರು ಸಿಎಂ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ನೈತಿಕ ಹೊಣೆ ಹೊತ್ತು ಕೇಜ್ರಿವಾಲ್ ರಾಜೀನಾಮೆ ನೀಡಲಿ ಎಂದು ಬಿಜೆಪಿ ಆಗ್ರಹಿಸುತ್ತಿದೆ.

ಮೋದಿಯ ಕಟುಟೀಕಾಕಾರಲ್ಲಿ ಒಬ್ಬರಾದ ಕೇಜ್ರಿವಾಲ್ ಬಂಧನದೊಂದಿಗೆ ಕಳೆದೊಂದು ದಶಕದಿಂದ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ನಡೆಯುತ್ತಿದ್ದ ಬಹಿರಂಗ ಸಮರ ಮತ್ತೊಂದು ಹಂತಕ್ಕೆ ತಲುಪಿದಂತಾಗಿದೆ.

ಅಬಕಾರಿ ನೀತಿ ಹಗರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ 9 ಬಾರಿ ಕೇಜ್ರಿವಾಲ್ ಅವರಿಗೆ ಸಮನ್ಸ್ ನೀಡಿತ್ತು. ಆದರೆ, ಇದು ರಾಜಕೀಯ ಸೇಡಿಗಾಗಿ ಕೈಗೊಂಡ ಕ್ರಮ ಎಂದು ಆರೋಪಿಸಿ ವಿಚಾರಣೆಗೆ ದೆಹಲಿ ಸಿಎಂ ಗೈರಾಗುತ್ತಲೇ ಬಂದಿದ್ದರು.

ಈ ನಡುವೆ ಮದ್ಯ ಲೈಸೆನ್ಸ್ ಪ್ರಕರಣದಲ್ಲಿ ತಮ್ಮ ವಿರುದ್ಧ ಕ್ರಮ ಕೈಗೊಳ್ಳದಂತೆ ರಕ್ಷಣೆ ನೀಡಬೇಕೆಂದು ಕೋರಿ ಕೇಜ್ರಿವಲ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗುರುವಾರ ತಳ್ಳಿಹಾಕಿದ್ದು.

ಕೋರ್ಟ್ ರಕ್ಷಣೆ ನಿರಾಕರಿಸಿದ ಬೆನ್ನಲ್ಲೇ ಇಡಿ ಅಧಿಕಾರಿಗಳ ತಂಡ ಗುರುವಾರ ರಾತ್ರಿ ಕೇಜ್ರಿವಾಲ್ ಮನೆ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿತು. 2 ಗಂಟೆಗಳ ವಿಚಾರಣೆ ನಡೆಸಿದ ಬಳಿಕ ಕೇಜ್ರಿವಾಲ್ ಅವರನ್ನು ಬಂಧನಕ್ಕೊಳಪಡಿಸಿದರು.

ಕೇಜ್ರಿವಾಲ್ ಬಂಧನಕ್ಕೆ ಕಾರಣವಾದ ಅಬಕಾರಿ ನೀತಿ ಹಗರಣ ಬಗ್ಗೆ ಇಲ್ಲಿದೆ ಮಾಹಿತಿ...

ಅಬಕಾರಿ ವಲಯದ ಸುಧಾರಣೆಗಾಗಿ ದೆಹಲಿ ಆಪ್‌ ಸರ್ಕಾರವು 2021ರಲ್ಲಿ ದಿಲ್ಲಿ ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಈ ನೀತಿ ಅನ್ವಯ ಖಾಸಗಿ ಕಂಪನಿಗಳು ಮತ್ತು ಉದ್ಯಮಗಳಿಗೆ ಚಿಲ್ಲರೆ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಯಿತು. ಆದರೆ, ಸರ್ಕಾರವು ತನ್ನ ಪರವಾಗಿರುವ ಕಂಪನಿಗಳು, ಉದ್ಯಮಗಳ ಮಾಲೀಕರಿಗೆ ನೆರವು ನೀಡುತ್ತಿದೆ. ಜೊತೆಗೆ, ಲಂಚ ಪಡೆದು ಹೊಸಬರಿಗೆ ಪರವಾನಿಗೆ ನೀಡಲಾಗಿದೆ ಎಂಬ ವ್ಯಾಪಕ ಆರೋಪ ಕೇಳಿ ಬಂದಿತ್ತು.

ಅಬಕಾರಿ ನೀತಿಯ ಮೂಲಕ ಭ್ರಷ್ಟಾಚಾರ ಎಸಗಲಾಗಿದೆ ಎಂಬ ಆರೋಪ ಪ್ರತಿಪಕ್ಷಗಳಿಂದ ಜೋರಾಗುತ್ತಿದ್ದಂತೆ, ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಸಿಬಿಐ ತನಿಖೆಗೆ ಆದೇಶಿಸಿದರು. ಇ.ಡಿ ಕೂಡ ವಿಚಾರಣೆಗಿಳಿಯತು. 2022ರಲ್ಲಿ ನೀತಿಯನ್ನು ರದ್ದು ಕೂಡ ಮಾಡಲಾಯಿತು. ಇ.ಡಿ. ಪ್ರಕಾರ, ಈ ಹಗರಣ ದಿಂದ ದೆಹಲಿ ಸರ್ಕಾರಕ್ಕೆ 2631 ಕೋಟಿ ರೂ. ನಷ್ಟವಾಗಿದೆ ಎಂದು ತಿಳಿಸಿದೆ.

ಹಗರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಆಗಿದ್ದ ಮನೀಶ್‌ ಸಿಸೋಡಿಯಾ, ಆಪ್‌ ನಾಯಕ ಸಂಜಯ್‌ ಸಿಂಗ್‌, ತೆಲಂಗಾಣ ಮಾಜಿ ಸಿಎಂ ಕೆಸಿಆರ್‌ ಪುತ್ರಿ ಕೆ.ಕವಿತಾ ಮತ್ತು ಅರಬಿಂದೋ ಫಾರ್ಮಾ ಡೈರೆಕ್ಟರ್‌ ಪಿ ಶರತ್‌ ಚಂದ್ರ ರೆಡ್ಡಿ ಹಾಗೂ ಮತ್ತಿತರರು ಬಂಧನಕ್ಕೊಳಗಾಗಿದ್ದಾರೆ.

ದೆಹಲಿ ಅಬಕಾರಿ ಹಗರಣದ ಟೈಮ್‌ಲೈನ್...

ನವೆಂಬರ್ 17, 2021: ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಸರ್ಕಾರವು ಹೊಸ ಮದ್ಯ ನೀತಿಯನ್ನು ಜಾರಿಗೆ ತಂದಿತು.

ಏಪ್ರಿಲ್ 20, 2022: ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ನೀತಿಯನ್ನು ಪರಿಶೀಲಿಸಿ, ಅಕ್ರಮಗಳನ್ನು ಪತ್ತೆ ಮಾಡಿದರು; ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ಅವರಿಗೆ ವರದಿಯನ್ನು ರವಾನಿಸಿದ್ದರು.

ಆಗಸ್ಟ್ 17: ಹಣಕಾಸು ಮತ್ತು ಅಬಕಾರಿ ಇಲಾಖೆಯ ಉಸ್ತುವಾರಿ ವಹಿಸಿದ್ದ ಮನೀಶ್ ಸಿಸೋಡಿಯಾ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತು.

ಆಗಸ್ಟ್ 19: ದೆಹಲಿ-ಎನ್‌ಸಿಆರ್‌ನಲ್ಲಿರುವ ಸಿಸೋಡಿಯಾ ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿತು.

ಆಗಸ್ಟ್ 22: ಇಡಿ ಪ್ರಕರಣ ದಾಖಲಿಸಿತು.

ಆಗಸ್ಟ್ 30: ಸಿಸೋಡಿಯಾ ಅವರ ಬ್ಯಾಂಕ್ ಲಾಕರ್‌ಗಳಲ್ಲಿ ಸಿಬಿಐ ಶೋಧ ನಡೆಸಿತು.

ನವೆಂಬರ್ 16: ಸಿಸೋಡಿಯಾ ಅವರ ಸಹಾಯಕ ದಿನೇಶ್ ಅರೋರಾ ವಿರುದ್ಧವೂ ಆರೋಪ ಕೇಳಿಬಂದಿತ್ತು.

ನವೆಂಬರ್ 30: ಸಿಸೋಡಿಯಾ ಅವರ ಆಪ್ತ ಸಹಾಯಕ ಅಮಿತ್ ಅರೋರಾ ಅವರನ್ನು ಇಡಿ ಬಂಧಿಸಿತು. ಈ ವೇಳೆ ಕೆ ಕವಿತಾ ಅವರ ಹೆಸರೂ ಪ್ರಕರಣದಲ್ಲಿ ಕೇಳಿ ಬಂದಿತು.

ಫೆಬ್ರವರಿ 19: ಸಿಬಿಐ ಸಿಸೋಡಿಯಾ ಅವರನ್ನು ಇಡಿ ವಿಚಾರಣೆಗೆ ಕರೆಯಿತು. ಆದರೆ, ಬಜೆಟ್‌ ಕಾರಣದಿಂದಾಗಿ ವಿಚಾರಣೆಗೆ ಹಾಜರಾಗಿರಲಿಲ್ಲ.

ಸೆಪ್ಟೆಂಬರ್ 17: ಎಎಪಿ ಸಂವಹನ ಉಸ್ತುವಾರಿ ವಿಜಯ್ ನಾಯರ್ ಅವರನ್ನು ಸಿಬಿಐ ಹಾಗೂ ಮದ್ಯದ ವ್ಯಾಪಾರಿ ಸಮೀರ್ ಮಹೇಂದ್ರು ಅವರನ್ನು ಇಡಿ ಬಂಧನಕ್ಕೊಳಪಡಿಸಿದತು.

ಜನವರಿ 6, 2023: ವೀಡಿಯೊ ಕರೆಯಲ್ಲಿ ನಾಯರ್ ಅವರನ್ನು ನಂಬುವಂತೆ ಕೇಜ್ರಿವಾಲ್ ಸಮೀರ್ ಮಹೇಂದ್ರು ಅವರಿಗೆ ಹೇಳಿದ್ದರು ಎಂದು ಇಡಿ ಆರೋಪಪಟ್ಟಿಯಲ್ಲಿ ತಿಳಿಸಿತ್ತು.

ಫೆಬ್ರವರಿ 26, 2023: ಸಿಸೋಡಿಯಾ ಅವರನ್ನು ಸಿಬಿಐ ಬಂಧನಕ್ಕೊಳಪಡಿಸಿತು.

ಮಾರ್ಚ್ 9: ಇಡಿ ಸಿಸೋಡಿಯಾ ಅವರನ್ನು ಬಂಧಿಸಿತು.

ಅಕ್ಟೋಬರ್ 4: ಸಂಜಯ್ ಸಿಂಗ್ ಬಂಧನವಾಯಿತು.

ಮಾರ್ಚ್ 21, 2024: ಕೇಜ್ರಿವಾಲ್ 9ನೇ ಬಾರಿಯೂ ಇಡಿ ಸಮನ್ಸ್‌ಗೆ ಉತ್ತರ ನೀಡಿರಲಿಲ್ಲ. ನಂತರ ಇಡಿ ಕೇಜ್ರಿವಾಲ್ ಅವರನ್ನು ಬಂಧನಕ್ಕೊಳಪಡಿಸಿತು.

ಅಕ್ಟೋಬರ್ 4, 2023: ಎಎಪಿ ಆರ್‌ಎಸ್ ಸಂಸದ ಸಂಜಯ್ ಸಿಂಗ್ ಅವರ ಮನೆಯಲ್ಲಿ ಇಡಿ ಶೋಧನೆ ನಡೆಸಿತು. ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಅವರನ್ನು ವಶಕ್ಕೆ ತೆಗೆದುಕೊಂಡಿತು.

ಕೇಜ್ರಿವಾಲ್ ಅವರಿಗೆ ಎಷ್ಟು ಬಾರಿ ಸಮನ್ಸ್ ಜಾರಿಯಾಯಿತು?

ನವೆಂಬರ್ 2, 2023: ಇಡಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಮೊದಲ ಬಾರಿಗೆ ಸಮನ್ಸ್ ಜಾರಿ ಮಾಡಿತು. ಆದರೆ, ಕೇಜ್ರಿವಾಲ್ ವಿಚಾರಣೆಗೆ ಹಾಜರಾಗಿರಲಿಲ್ಲ.

ಡಿಸೆಂಬರ್ 21, 2023: ಇಡಿ 2ನೇ ಬಾರಿ ಸಮನ್ಸ್ ಜಾರಿ ಮಾಡಿತು.

ಜನವರಿ 3, 2024: ಕೇಜ್ರಿವಾಲ್ ಮೂರನೇ ಬಾರಿಗೆ ಸಮನ್ಸ್ ಜಾರಿಯಾಯಿತು.

ಜನವರಿ 18, 2024: 4ನೇ ಬಾರಿ ಸಮನ್ಸ್ ಜಾರಿಯಾಯಿತು.

ಫೆಬ್ರವರಿ 2, 2024: 5ನೇ ಬಾರಿ ಸಮನ್ಸ್ ಜಾರಿ ಮಾಜಿತು.

ಫೆಬ್ರವರಿ 19, 2024: 6ನೇ ಬಾರಿ ಸಮನ್ಸ್ ಜಾರಿಯಾಯಿತು.

ಫೆಬ್ರವರಿ 26, 2024: 7ನೇ ಬಾರಿ ಸಮನ್ಸ್ ಜಾರಿ.

ಮಾರ್ಚ್ 4, 2024: 8ನೇ ಬಾರಿ ಸಮನ್ಸ್ ಜಾರಿಯಾಯಿತು. ಈ ವೇಳೆ ಕೇಜ್ರಿವಾಲ್ ಅವರು ವಿಚಾರಣೆ ಎದುರಿಸಲು ಸಿದ್ಧ ಎಂದು ಹೇಳಿದ್ದರು.

ಮಾರ್ಚ್ 21, 2024: ಪ್ರಕರಣದಲ್ಲಿ ಬಲವಂತದ ಕ್ರಮದಿಂದ ರಕ್ಷಣೆ ಕೋರಿ ಕೇಜ್ರಿವಾಲ್ ಮಾಡಿದ ಮನವಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿತು.

ಮಾರ್ಚ್ 21, 2024: ಇದರ ಬೆನ್ನಲ್ಲೇ ಇಡಿ ಕೇಜ್ರಿವಾಲ್ ಅವರ ಮನೆಗೆ ಭೇಟಿ ನೀಡಿ, ಬಂಧನಕ್ಕೊಳಪಡಿಸಿತು.

Ads on article

Advertise in articles 1

advertising articles 2

Advertise under the article