ಚಲಿಸುತ್ತಿದ್ದ ಮೆಟ್ರೋ ರೈಲಿನಡಿಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ
ಬೆಂಗಳೂರು: ಚಲಿಸುತ್ತಿದ್ದ ಮೆಟ್ರೋ ರೈಲಿನಡಿಗೆ ಹಾರಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡಾತ ಕಾನೂನು ವಿದ್ಯಾರ್ಥಿಯಾಗಿದ್ದು, ಮೊದಲ ವರ್ಷದ ಕಾನೂನು ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಧ್ರುವ ಎಂದು ತಿಳಿದುಬಂದಿದೆ.
ಗುರುವಾರ ಮಧ್ಯಾಹ್ನ 2:10ರ ಸುಮಾರಿಗೆ ಮೆಟ್ರೋ ಹಳಿಗೆ ವ್ಯಕ್ತಿ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮೆಟ್ರೋ ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ವ್ಯಕ್ತಿ ಹಳಿಗೆ ಧುಮುಕಿದ್ದು, ಮೆಟ್ರೊ ಆಡಳಿತ ಮಂಡಳಿ ಕೂಡಲೇ ಮೆಟ್ರೋ ರೈಲನ್ನು ನಿಲ್ಲಿಸಿದ್ದಾರೆ. ಬಳಿಕ ರೈಲ್ವೆ ಹಳಿಗೆ ಬಿದ್ದ ವಿದ್ಯಾರ್ಥಿಯ ಮೃತದೇಹವನ್ನು ಹೊರತೆಗೆಯಲು ಅಧಿಕಾರಿಗಳು ಹರಸಾಹಸ ಪಟ್ಟಿದ್ದಾರೆ.
ಘಟನೆಯಿಂದ ಚಲ್ಲಘಟ್ಟದಿಂದ ಮೆಜೆಸ್ಟಿಕ್ ಕಡೆಗೆ ಸಂಚಾರ ಮಾಡುತ್ತಿದ್ದ ಮೆಟ್ರೋ ರೈಲುಗಳಲ್ಲಿ ವ್ಯತ್ಯಯವುಂಟಾಗಿದೆ. ಮೆಟ್ರೋ ಪ್ರಯಾಣಿಕರನ್ನು ಕೆಳಗಿಳಿಸಿ ಬೇರೆ ಸಾರಿಗೆ ಅವಲಂಭಿಸುವಂತೆ ಮನವಿ ಮಾಡಲಾಗಿದೆ. ಮಾಗಡಿ ರೋಡ್‌ನಿಂದ ಚಲ್ಲಘಟ್ಟ ಮೆಟ್ರೋ ಸೇವೆ ಸ್ಥಗಿತಗೊಂಡಿದ್ದು, ವೈಟ್ ಫೀಲ್ಡ್‌ನಿಂದ ಮಾಗಡಿ ರೋಡ್‌ವರೆಗೂ ಮಾತ್ರ ಮೆಟ್ರೋ ಸೇವೆ ಲಭ್ಯವಿದೆ.
ಇದಕ್ಕೂ ಮೊದಲು ಜಾಲಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ಕೇರಳ ಮೂಲದ ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದ. ಇದೀಗ ಅಂತಹದೇ ಘಟನೆ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲೂ ನಡೆದಿದೆ. ಘಟನೆ ನಡೆದ ತಕ್ಷಣ ಆತ್ಮಹತ್ಯೆ ಯತ್ನದ ಬಗ್ಗೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದು, ಅತ್ತಿಗುಪ್ಪೆ ಮೆಟ್ರೋ ನಿಲ್ದಾಣವನ್ನು ಬಂದ್ ಮಾಡಲಾಗಿದೆ.
ಇನ್ನು ಈ ಕುರಿತು ಡಿಸಿಪಿ ಗಿರೀಶ್ ಮಾಹಿತಿ ನೀಡಿದ್ದು, ಆತ್ಮಹತ್ಯೆ ಮಾಡಿಕೊಂಡಾತ ಕಾನೂನು ವಿದ್ಯಾರ್ಥಿ. ಮೊದಲ ವರ್ಷದ ಕಾನೂನು ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಧ್ರುವ ಎಂದು ತಿಳಿದು ಬಂದಿದ್ದು, ಘಟನೆಯಿಂದ ವಿದ್ಯಾರ್ಥಿಯ ರುಂಡ ಮುಂಡ ಬೇರ್ಪಟ್ಟಿದೆ.