238 ಬಾರಿ ಚುನಾವಣೆಗೆ ನಿಂತು ಸೋಲುವ ಮೂಲಕ ದಾಖಲೆ ಬರೆದ ವ್ಯಕ್ತಿ; ಮತ್ತೆ ಈ ಬಾರಿಯೂ ಲೋಕಸಭೆ ಚುನಾವಣೆಗೆ ಸ್ಪರ್ಧೆ
ಮೆಟ್ಟೂರು: ತಾನು ಒಬ್ಬ ಜನಪ್ರತಿನಿಧಿಯಾಗಬೇಕು ಎಂಬ ಉದ್ದೇಶದಿಂದ ಇಲ್ಲೊಬ್ಬ ವ್ಯಕ್ತಿ ಇಲ್ಲಿಯವರೆಗೂ ಸುಮಾರು 238 ಬಾರಿ ಚುನಾವಣೆಗೆ ಸ್ಪರ್ಧಿಸಿದ್ದು, ಮತ್ತೆ ಈ ಬಾರಿಯೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ಕೆ. ಪದ್ಮರಾಜನ್, ತಮಿಳುನಾಡಿನ ಮೆಟ್ಟೂರು ನಗರದ ನಿವಾಸಿ. ಪದ್ಮರಾಜನ್ ಅವರಿಗೆ ಈಗ 65 ವರ್ಷ ವಯಸ್ಸು1988ರಿಂದಲೇ ಇವರು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಸಣ್ಣದೊಂದು ಪಂಚರ್ ಅಂಗಡಿ ಇಟ್ಟುಕೊಂಡಿರುವ ಕೆ. ಪದ್ಮರಾಜನ್, ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುವ ಮೂಲಕವೇ ಹೊಸ ದಾಖಲೆ ಬರೆದಿದ್ದಾರೆ.
ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸೋದು, ಸೋಲೋದು, ಠೇವಣಿ ಸಹಿತ ಕಳೆದುಕೊಳ್ಳೋದು. ಹೀಗೆ ಸುಮಾರು 35 ವರ್ಷಗಳಿಂದಲೂ ಈ ಸೋಲಿನ ಸರಮಾಲೆ ಮುಂದುವರೆದಿದೆ. ಮೊದ ಮೊದಲು ಕೆ. ಪದ್ಮರಾಜನ್ ಅವರ ಈ ಪರಿಪಾಠ ಕಂಡು ಜನರು ಇದೆಂಥಾ ಹುಚ್ಚಾಟ ಎಂದು ಮೂಗು ಮುರಿದರು, ಆಡಿಕೊಂಡರು, ಲೇವಡಿ ಮಾಡಿ ನಕ್ಕರು.. ಆದರೆ, ಈಗೀಗ ಜನರಿಗೂ ಇದು ಮಾಮೂಲಾಗಿದೆ.
ಜೊತೆಯಲ್ಲೇ ಸೋಲಿನ ಸರಮಾಲೆಯಿಂದಲೇ ದಾಖಲೆ ಮೆರೆದ ಪದ್ಮರಾಜನ್ ಜನಪ್ರಿಯತೆ ಕೂಡಾ ಸಾಧಿಸಿದ್ದಾರೆ. ಎಲ್ಲರೂ ಗೆಲುವು ಸಾಧಿಸಬೇಕು ಅನ್ನೋ ಆಶಯದಿಂದಲೇ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರೆ. ಆದರೆ ನಾನು ಆ ರೀತಿ ಅಲ್ಲ ಎಂದು ತಮ್ಮ ಉದ್ದನೆಯ ಮೀಸೆ ತಿರುವುತ್ತಾ ಹೆಗಲ ಮೇಲೆ ಟವಲ್ ಏರಿಸಿಕೊಳ್ತಾರೆ ಪದ್ಮರಾಜನ್. ಫಲಿತಾಂಶದ ವೇಳೆ ಸೋಲು ಎಂದು ಘೋಷಣೆಯಾದಾಗ ಸಂತೋಷ ಆಗುತ್ತಂತೆ ಪದ್ಮರಾಜನ್ ಅವರಿಗೆ.
ಮೆಟ್ಟೂರು: 238 ಬಾರಿ ಸೋತರೂ ಮತ್ತೆ ಮತ್ತೆ ಚುನಾವಣೆಗೆ ನಿಲ್ಲುವ ಸೋಲಿನ ಸರದಾರ!
'ಲೋಕ'ಸಮರಕ್ಕೆ ಮುಹೂರ್ತ ಫಿಕ್ಸ್: ಏಪ್ರಿಲ್ 19 ರಿಂದ 7 ಹಂತಗಳಲ್ಲಿ ಚುನಾವಣೆ, ರಾಜ್ಯದಲ್ಲಿ ಏ.26, ಮೇ 7 ರಂದು ಮತದಾನ
ಈವರೆಗೆ ಕಳೆದ 35 ವರ್ಷಗಳಲ್ಲಿ ಪದ್ಮರಾಜನ್ ಲಕ್ಷಾಂತರ ರೂಪಾಯಿ ಹಣವನ್ನ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಯೇ ಕಳೆದುಕೊಂಡಿದ್ದಾರೆ. ಈ ಸೋಲಿನ ಸರಮಾಲೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ವಿಶ್ವ ದಾಖಲೆ ಕೂಡಾ ಆಗಿದೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪದ್ಮರಾಜನ್ ಅವರು ತಮಿಳುನಾಡಿನ ಧರ್ಮಪುರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಎಲೆಕ್ಷನ್ ಕಿಂಗ್ ಎಂದೇ ಜನಪ್ರಿಯತೆ ಸಾಧಿಸಿರುವ ಪದ್ಮರಾಜನ್ ಅವರು, ರಾಷ್ಟ್ರಪತಿ ಚುನಾವಣೆಯಿಂದ ಹಿಡಿದು ಪಂಚಾಯ್ತಿ ಚುನಾವಣೆವರೆಗೂ ಸ್ಪರ್ಧಿಸಿ ಗಮನ ಸೆಳೆದಿದ್ದಾರೆ.